ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ತತ್ವಾದರ್ಶ ಅನುಕರಣೀಯ

ಜಿಲ್ಲಾಡಳಿತದಿಂದ ವಾಲ್ಮೀಕಿ ಜಯಂತಿ ಆಚರಣೆ
Last Updated 21 ಅಕ್ಟೋಬರ್ 2021, 6:13 IST
ಅಕ್ಷರ ಗಾತ್ರ

ದೇವನಹಳ್ಳಿ:‘ಜಯಂತಿಯನ್ನು ಆಚರಿಸುವುದರ ಮುಖ್ಯ ಉದ್ದೇಶವೇ ಮಹಾನ್‌ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದಾಗಿದೆ. ಅವರು ಸಾರಿದ ಮೌಲ್ಯ, ತತ್ವಾದರ್ಶವನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಬದುಕಬೇಕು’ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ರಾಮಾಯಣ ಮತ್ತು ಮಹಾಭಾರತ ಹಿಂದೂಗಳ ಪವಿತ್ರ ಗ್ರಂಥಗಳಾಗಿವೆ. ಅವುಗಳಿಗೆ ಪೂಜನೀಯ ಸ್ಥಾನ ನೀಡಲಾಗಿದೆ. ರಾಮಾಯಣದ ರಾಮನ ಗುಣ, ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಜೀವನ ನಡೆಸಿದರೆ ರಾಮರಾಜ್ಯ ಆಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.

ವಾಲ್ಮೀಕಿ ಆನಾಸ್ತ ಪ್ರದೇಶದಲ್ಲಿ ವಾಸಿಸುವ ಸಂದರ್ಭದಲ್ಲಿ ಜೀವನೋಪಾಯಕ್ಕಾಗಿ ಕಳ್ಳತನದ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಕಾಲಕ್ರಮೇಣ ಆ ಭಾಗಕ್ಕೆ ಸಪ್ತ ಋಷಿಗಳು ಆಗಮಿಸಿದಾಗ ಅವರ ಬಳಿ ಕಳ್ಳತನಕ್ಕೆಂದು ತೆರಳಿದ ವಾಲ್ಮೀಕಿಯನ್ನು ಕಂಡು ಋಷಿಗಳು ಕಳ್ಳತನ ಮಾಡುವುದು ಅಪರಾಧ ಹಾಗೂ ಕೆಟ್ಟದ್ದು ಎಂಬುದನ್ನು ತಿಳಿಸಿದರು. ವಾಲ್ಮೀಕಿಗೆ ಸಪ್ತ ಋಷಿಗಳು ಮಂತ್ರ ಪಠಣೆ ಮಾಡುವ ವೇಳೆ ವಾಲ್ಮೀಕಿಯ ಸುತ್ತ ಉದ್ಭವವಾದ ಇರುವೆ ಗೂಡನ್ನು ಸಂಸ್ಕೃತದಲ್ಲಿ ವಲ್ಮೀಕ ಎನ್ನುತ್ತಾರೆ. ಆದ್ದರಿಂದ ಇವರಿಗೆ ವಾಲ್ಮೀಕಿ ಎಂಬ ಹೆಸರು ಬಂದಿದೆ ಎಂದು ಹೇಳಿದರು.

ರಾಮಾಯಣವು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳನ್ನು ಒಳಗೊಂಡಿದೆ. 4.8 ಲಕ್ಷ ಪದಗಳನ್ನು ಹೊಂದಿದ ಬೃಹತ್ ಗ್ರಂಥವಾಗಿದೆ. ಇದನ್ನು ರಚಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ. ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವುದರಿಂದ ಮೋಕ್ಷ ಪಡೆಯಬಹುದೆಂಬುದು ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಮಾತನಾಡಿ, ಅತ್ಯಂತ ವಿಸ್ತಾರವಾದ ಭರತ ಖಂಡದಲ್ಲಿ ಹಿಂದೂಗಳ ಶ್ರೇಷ್ಠವಾದ ಗ್ರಂಥಗಳಲ್ಲಿ ಒಂದಾದ ರಾಮಾಯಣ ರಚಿಸಿದವರು ಮಹರ್ಷಿ ವಾಲ್ಮೀಕಿ. ರಾಮಾಯಣದ ಕಥೆಯನ್ನು ವಾಲ್ಮೀಕಿ ಹೇಳಿದಂತೆ ಗಣಪತಿ ಬರೆದಿರುವುದು ಎಂಬ ಪ್ರತೀತಿಯಿದೆ ಎಂದರು.

ಪಂಪನ ಹಾದಿಯಿಂದ ಬಂದಂತಹ ಕವಿಗಳ ಕೃತಿಗಳಲ್ಲಿ ಅವರು ಯಾವ ಆಸ್ಥಾನ, ವೃತ್ತಿ, ಕವಿತೆ, ಕೃತಿಯ ವಿವರ, ರಾಜನ ಸನ್ಮಾನ, ಆತನ ವ್ಯಕ್ತಿತ್ವ, ಸಾಮ್ರಾಜ್ಯದ ವಿವರಣೆ, ಸಾಮ್ರಾಜ್ಯದ ಜನರ ಚಿತ್ರಣ ನಿರೂಪಿತವಾಗಿದೆ. ಆದರೆ, ರಾಮಾಯಣ ಕೃತಿಯಲ್ಲಿ ಎಲ್ಲಿಯೂ ಇಂತಹ ನಿರೂಪಣೆ ಅಥವಾ ವಿವರಣೆ ಕಂಡುಬರುವುದಿಲ್ಲ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT