ಗುರುವಾರ , ಮೇ 6, 2021
22 °C
ಸುಮಂಗಲಿ ಸೇವಾಶ್ರಮದ ಸುಶೀಲಮ್ಮಗೆ ‘ಭೀಮಕ್ಕ’ ರಾಜ್ಯ ಪ್ರಶಸ್ತಿ ಪ್ರದಾನ

ಮಹಿಳೆ ಎಲ್ಲ ರಂಗದಲ್ಲೂ ಪಾರಮ್ಯ: ಎಸ್‌.ಜಿ.ಸುಶೀಲಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಮಹಿಳೆಯರು ಸಂಘಟಿತರಾಗಿ ಕೆಲಸ ಮಾಡುವ ಗುಣ ಬೆಳೆಸಿಕೊಂಡಾಗ ಮಾತ್ರ ನಮ್ಮ ಪ್ರಗತಿ ಸಾಧ್ಯವಾಗಲಿದೆ ಎಂದು ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್‌.ಜಿ.ಸುಶೀಲಮ್ಮ ಹೇಳಿದರು.

ಅವರು ನಗರದ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರದ ಸಂಸ್ಥಾಪಕ ಅಧ್ಯಕ್ಷೆ ಭೀಮಕ್ಕ ಅವರ ಹೆಸರಿನಲ್ಲಿ ಮಂಗಳವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮಹಿಳೆಯರ ಸತತ ಹೋರಾಟದ ಫಲವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ50ರಷ್ಟು ಮೀಸಲಾತಿ ದೊರೆತಿದೆ. ಈ ಮೀಸಲಾತಿ ರಾಜಕೀಯದ ಎಲ್ಲ ಹಂತದಲ್ಲೂ ಸಿಗಲು ನಿರಂತರ ಹೋರಾಟದ ಅಗತ್ಯವಿದೆ. ಮೀಸಲಾತಿ ಬೆಂಬಲದಿಂದ ಆಯ್ಕೆಯಾಗಿ ಬಂದಿರುವ ಖರ್ಚಿನ ಮೇಲೆ ಪುರುಷರು ಕುಳಿತು ಅಧಿಕಾರ ನಡೆಸಲು ಅವಕಾಶ ನೀಡದೆ ಹಕ್ಕು ಅರಿತುಕೊಂಡು ಕೆಲಸ ಮಾಡಿದಾಗ ಮಾತ್ರ ರಾಜಕೀಯ ಮೀಸಲಾತಿಗಾಗಿ ನಡೆಸಿದ ಹೋರಾಟಕ್ಕೆ ಅರ್ಥ ಬರಲಿದೆ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಮಹಿಳಾ ಸದಸ್ಯರಿಗೆ ಅಧಿಕಾರ ವ್ಯಾಪ್ತಿ ಕುರಿತಂತೆ ತರಬೇತಿ ನೀಡುವ ಕಡೆಗೂ ಮಹಿಳಾ ಸಂಘ –ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲೇ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಅಗತ್ಯ ಇರುವ ವೇದಿಕೆ ಇದ್ದಾಗಿತ್ತು. ತರಬೇತಿ ನೀಡುವ ಸಲುವಾಗಿ ಮಹಿಳಾ ಸಮಾಜ ಸ್ಥಾಪನೆ ಮಾಡಿದ ಮಹಾನ್‌ ಚೇತನ ಭೀಮಕ್ಕ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆ ಇದೆ. ಇಂತಹ ಮಹಾನ್‌ ವ್ಯಕ್ತಿಗಳು ಮಹಿಳೆಯ ಏಳಿಗೆಗಾಗಿ ಕಂಡಿದ್ದ ಕನಸು ಸಾಕಾರ ಮಾಡುವತ್ತ ಮಹಿಳಾ ಸಮಾಜದ ಪದಾಧಿಕಾರಿಗಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಲೇಖಕಿ ಡಾ.ಎನ್.ಗಾಯಿತ್ರಿ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಈ ವರ್ಷದ ಘೋಷ ವಾಕ್ಯ ‘ಕಾಯಕ ವರ್ಷ’ವನ್ನಾಗಿ ಘೋಷಣೆ ಮಾಡಲಾಗಿದೆ. ಮಹಿಳೆಯರನ್ನು ಅವರ ಕೆಲಸದ ಮೂಲಕ ಗುರುತಿಸಬೇಕಿದೆ. ಸಮಾಜ ಸುಧಾರಣೆ ಕೆಲಸ ಮಾಡುವಾಗ ಹಲವು ಟೀಕೆ ಬರುವುದು ಸಹಜ. ಆದರೆ, ಕಣ್ಣ ಮುಂದೆಯೇ ಹಲವು ಜನ ಮಹಿಳೆಯರು ಮಾಡಿರುವ ಸಾಧನೆ ಮಾದರಿ ಇವೆ. ಇವತ್ತಿನ ಸಮಾಜಕ್ಕೆ ಹೊಂದಿಕೊಂಡಂತೆ ಕೆಲಸ ಮಾಡುತ್ತಿರುವ ಸುಮಂಗಲಿ ಸೇವಾಶ್ರಮದ ಕೆಲಸ ಮಹಿಳೆಯರಿಗೆ ಉತ್ತಮ ಮಾದರಿಯಾಗಿ ಕಾಣುತ್ತಿದೆ ಎಂದರು.

ಉತ್ತಮ ಸಾಮಾಜಿಕ ಸಂಘಟಕರಾಗಿರುವ ಸುಶೀಲಮ್ಮ ಅರಿವು ಮೂಡಿಸುವ ಕೆಲಸವಷ್ಟೇ ಮಾಡದೆ ಅಗತ್ಯ ಇರುವ ಮಹಿಳೆಯರಿಗೆ ನೆರವಾಗುವ ಮೂಲಕ ಅದರ ಅನುಷ್ಟಾನಕ್ಕೆ ಅಗತ್ಯ ಇರುವ ಬಲ ನೀಡುತ್ತಿದ್ದಾರೆ. ತಮ್ಮ ಕೆಲಸ ಬಗ್ಗೆ ಹೊಗಳಿಕೆ, ತೆಗಳಿಕೆ ಯಾವುದಕ್ಕೂ ಕಿವಿಗೊಡದೆ ಕೆಲಸ ಮಾಡುವ ಮನೋಭಾವದ ವ್ಯಕ್ತಿತ್ವ ಸುಶೀಲಮ್ಮ ಅವರದ್ದಾಗಿದೆ. ತಾವು ನೆಟ್ಟ ಸಸಿ ನಮ್ಮ ಕಣ್ಣ ಮುಂದೆಯೇ ಬೆಳೆದು ಹತ್ತಾರು ಜನರಿಗೆ ನೆರಳು, ಪಕ್ಷಿಗಳಿಗೆ ಆಶ್ರಯ ನೀಡುವುದನ್ನು ಕಂಡು ಸಂತಸಪಡುವ ಗುಣವುಳ್ಳ ವ್ಯಕ್ತಿ ಗುರುತಿಸಿ ಭೀಮಕ್ಕ ಪ್ರಶಸ್ತಿ ನೀಡಿ ಗೌರವಿಸಿರುವುದು ಅಭಿನಂದನೀಯ ಎಂದರು.

ಮಹಿಳಾ ಸಮಾಜದ ಸಲಹೆಗಾರರಾದ ಅಮಲಿನಾಯ್ಕ್‌ ಮಾತನಾಡಿ, ಸುಶೀಲಮ್ಮ ಅವರ ಕೆಲಸದ ಸ್ಫೂರ್ತಿಯಿಂದ ತಾಲ್ಲೂಕು ಮಟ್ಟದಲ್ಲಿ ಭುವನೇಶ್ವರಿ ಮಹಿಳಾ ಸಹಕಾರಿ ಬ್ಯಾಂಕ್‌ ಸ್ಥಾಪನೆ ಮಾಡಲಾಗಿದೆ. ಈ ಸಹಕಾರಿ ಬ್ಯಾಂಕ್‌ಗೆ ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ತಾಲ್ಲೂಕಿನ ಎಲ್ಲ ಮಹಿಳೆಯರು ಸದಸ್ಯರಾಗಬಹುದಾಗಿದೆ. ಹಾಗೆಯೇ ಸಾಲಸೌಲಭ್ಯ ಪಡೆದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದಾಗಿದೆ ಎಂದರು.

ಸಮಾರಂಭದಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ದೇವಕಿ, ಸಹ ಕಾರ್ಯದರ್ಶಿ ವರಲಕ್ಷ್ಮಿ, ಖಾಜಾಂಚಿ ಯಶೋದ, ನಿರ್ದೇಶಕರಾದ ವತ್ಸಲಾ, ಗೌರಮ್ಮ ಇದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರು ಬಿಡಿಸಿರುವ ಚಿತ್ರಗಳ ಪ್ರದರ್ಶನ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು