ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮನಹಳ್ಳಿ: ನೀರಿನ ಟ್ಯಾಂಕ್‌ ಸ್ವಚ್ಛತೆಗೆ ನಿರ್ಲಕ್ಷ್ಯ

ಗ್ರಾ.ಪಂ. ವಿರುದ್ಧ ತಿಮ್ಮನಹಳ್ಳಿ ಗ್ರಾಮಸ್ಥರ ಆಕ್ರೋಶ
Last Updated 25 ನವೆಂಬರ್ 2022, 4:14 IST
ಅಕ್ಷರ ಗಾತ್ರ

ವಿಜಯಪುರ (ಬೆಂ.ಗ್ರಾಮಾಂತರ): ಚರಂಡಿಗಳಲ್ಲಿ ಗಿಡಗಂಟಿಗಳು ದಟ್ಟವಾಗಿ ಬೆಳೆದು ನಿಂತಿವೆ. ನೀರಿನ ಟ್ಯಾಂಕ್‌ಗಳ ಬಳಿ ಸ್ವಚ್ಛತೆ ಕಾಪಾಡುತ್ತಿಲ್ಲ. ಟ್ಯಾಂಕ್‌ ತೊಳೆದು ವರ್ಷಗಳೇ ಕಳೆದಿವೆ. ನೀರಿನಲ್ಲಿ ಹುಳುಗಳು ಬರುತ್ತಿವೆ ಎಂದುತಿಮ್ಮನಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ,

ಟ್ಯಾಂಕ್‌ ಬಳಿಯಲ್ಲಿ ನಿಂತಿರುವ ಕೊಳಚೆ ನೀರಿನಲ್ಲಿಯೇ ಬಿಂದಿಗೆ ಇಟ್ಟುಕೊಂಡು ನೀರು ಹಿಡಿಯಬೇಕು. ಕೊಳಾಯಿಗಳಲ್ಲಿ ನೀರು ಹಿಡಿಯುವುದರ ಬದಲಿಗೆ ಪೈಪ್‌ಗಳಿಗೆ ಡ್ರಿಪ್ ಪೈಪ್ ಅಳವಡಿಸಿ ನೀರು ಹಿಡಿಯುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಿಮ್ಮನಹಳ್ಳಿನಲ್ಲಿ 60 ಕುಟುಂಬಗಳಿವೆ. 400ಕ್ಕೂ ಹೆಚ್ಚು ಜನಸಂಖ್ಯೆ ಇದ್ದಾರೆ. 6 ನೀರಿನ ಟ್ಯಾಂಕ್‌ಗಳಿವೆ. ಆದರೆ, ಟ್ಯಾಂಕ್‌ಗಳನ್ನು ತೊಳೆಯುವುದಿಲ್ಲ. ಕೊಳಾಯಿಗಳಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟಿದ್ದಾರೆ. ಬಾಟಲಿಗಳಲ್ಲಿ ಪಾಚಿಕಟ್ಟಿಕೊಂಡಿದೆ. ಅದೇ ನೀರು ಹಿಡಿಯಬೇಕು. ಟ್ಯಾಂಕ್‌ಗಳ ಬಳಿ ಚರಂಡಿಯ ಕಲ್ಲುಗಳು ಕಿತ್ತುಹೋಗಿವೆ. ಕಸ, ಕಡ್ಡಿಯೆಲ್ಲಾ ತುಂಬಿಕೊಂಡಿದ್ದರೂ ತೆರವು ಮಾಡಿಲ್ಲ.

ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್‌ ಹಾಕಿ ವರ್ಷಗಳೇ ಕಳೆದಿವೆ. ಪಂಚಾಯಿತಿಯ ಗಮನಕ್ಕೆ ತಂದರೆ ಅವರು ಸ್ಥಳೀಯ ಸದಸ್ಯರಿಗೆ ಹೇಳಿ ಎನ್ನುತ್ತಾರೆ. ಸದಸ್ಯರನ್ನು ಕೇಳಿದರೆ ಜಲಗಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುತ್ತಾರೆ. ನಾವು ಯಾರನ್ನು ಕೇಳಬೇಕು ಎಂದು ಸ್ಥಳೀಯ ನಿವಾಸಿಗಳಾದ ಮುನಿಯಪ್ಪ, ಸಿ. ನಾರಾಯಣಪ್ಪ, ಹನುಮಕ್ಕ, ಮುಕುಂದ್ ಬೇಸರ ತೋಡಿಕೊಂಡರು.

ಚರಂಡಿಗಳಲ್ಲಿ ಕಸ, ಕಡ್ಡಿಗಳು ತುಂಬಿಕೊಂಡಿರುವ ಕಾರಣ, ಮಳೆ ಬಂದರೆ ನೀರು ಮುಂದೆ ಹೋಗುವುದಿಲ್ಲ. ದುರ್ವಾಸನೆ ಬೀರುತ್ತಿದೆ. ಸಂಜೆಯಾದರೆ ಮನೆಗಳಲ್ಲಿ ವಾಸ ಮಾಡುವುದು ತುಂಬಾ ಕಷ್ಟ ಎನಿಸುತ್ತದೆ. ಸೊಳ್ಳೆ ಕಾಟ ಜಾಸ್ತಿಯಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ಗಮನಹರಿಸುತ್ತಿಲ್ಲ. ಗ್ರಾಮದ ಜಲಗಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೀರಿನ ಟ್ಯಾಂಕ್‌ಗಳು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಮಾತನಾಡಿ, ‘ತಿಮ್ಮನಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಜಲಗಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪಂಚಾಯಿತಿಗೆ ಬಂದು ಹಾಜರಾತಿ ಹಾಕುತ್ತಿಲ್ಲ. ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಕೇಳಿಬಂದಿವೆ. ಸದಸ್ಯರೊಟ್ಟಿಗೆ ಚರ್ಚೆ ನಡೆಸಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಸ್ವಚ್ಛತೆ ಮಾಡಿಸುತ್ತೇವೆ’ ಎಂದರು.

ಜಲಗಾರ ವೆಂಕಟೇಶ್ ಮಾತನಾಡಿ, ‘ನನಗೆ 6 ತಿಂಗಳಿನಿಂದ ಗ್ರಾಮ ಪಂಚಾಯಿತಿಯಿಂದ ಸಂಬಳ ಕೊಟ್ಟಿಲ್ಲ. ನಾನು ಜೀವನ ಮಾಡುವುದು ಹೇಗೆ? ಪ್ರತಿನಿತ್ಯ ನೀರು ಬಿಡುತ್ತಿದ್ದೇನೆ. ಇನ್ನು ಮುಂದೆ ತೊಳೆದು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT