ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲವಾಗುವ ಗ್ರಾಮದ ಸದಸ್ಯರಾಗಲು ಹೋರಾಟ! ಲಕ್ಕೇನಹಳ್ಳಿ ಜನರ ಬೇಸರ

ಎತ್ತಿನಹೊಳೆ ಯೋಜನೆ l ದೊಡ್ಡಬಳ್ಳಾ‍ಪುರ ತಾಲ್ಲೂಕಿನ ಹಳ್ಳಿಗಳಿಗೆ ಮುಳುಗಡೆ ಭೀತಿ
Last Updated 17 ಡಿಸೆಂಬರ್ 2020, 2:48 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:‘ಕೆಲವೇ ದಿನಗಳಲ್ಲಿ ಇಲ್ಲೊಂದು ಊರು ಇತ್ತು ಎನ್ನುವ ಕುರುಹೇ ಇಲ್ಲದಂತಾಗುವ ಗ್ರಾಮಕ್ಕೆ ನಾವು ಸದಸ್ಯರಾಗಲು ಹೋರಾಟ ಮಾಡುವಂತಾಗಿದೆ’

–ಇದು ಸಾಸಲು ಹೋಬಳಿಯ ಲಕ್ಕೇನಹಳ್ಳಿಯ ವೀರೇಂದ್ರ ಅವರ ಮಾತು.

ಎತ್ತಿನಹೊಳೆ ಯೋಜನೆಯಿಂದ ಬಯಲುಸೀಮೆ ಜಿಲ್ಲೆಗೆ ಹರಿದು ಬರುವ ನೀರು ಸಂಗ್ರಹಿಸಲು ನಿರ್ಮಿಸಲಾಗುತ್ತಿರುವ ಬೈರಗೊಂಡ್ಲು ಜಲಾಶಯ ಕಾಮಗಾರಿ ಕೆಲಸ ಅಂದುಕೊಂಡಿರುವಂತೆ ನಡೆದರೆ ಸಾಸಲು ಹೋಬಳಿಯ ಐದು ಗ್ರಾಮಗಳಿಗೆ 2020ರ ಗ್ರಾಮ ಪಂಚಾಯಿತಿ ಚುನಾವಣೆ ಕೊನೆಯ ಚುನಾವಣೆಯಾಗಲಿದೆ.

ತಾಲ್ಲೂಕಿನ ಸಾಸಲು ಹೋಬಳಿಯ ಗರುಡಗಲ್ಲು ಹಾಗೂ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಒಳಗೊಂಡಂತೆ ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಿಸಲು ಬೈರಗೊಂಡ್ಲು ಜಲಾಶಯ ನಿರ್ಮಿಸಲು ಪೈಪ್‌ಲೈನ್‌ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಇದರಿಂದಾಗಿ ಇತಿಹಾಸದ ಪುಟಗಳಲ್ಲೂ ದಾಖಲಿರುವ ಶ್ರೀರಾಮನಹಳ್ಳಿ, ಮಚ್ಚೇನಹಳ್ಳಿಯ ಒಂದಿಷ್ಟು ಭಾಗ, ಗರಡಗಲ್ಲು, ಲಕ್ಕೇನಹಳ್ಳಿ, ದಾಸರಪಾಳ್ಯ ಗ್ರಾಮಗಳು ಬೈರಗೊಂಡ್ಲು ಜಲಾಶಯ ನಿರ್ಮಾಣದಿಂದ ಸಂಪೂರ್ಣವಾಗಿ ಮುಳುಗಡೆಯಾಗಲಿವೆ. ಇದರಿಂದಾಗಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಈ ಗ್ರಾಮಗಳ ಜನರು ಮತ ಚಲಾಯಿಸಲಿದ್ದಾರೆ. ನಂತರದ ದಿನಗಳಲ್ಲಿ ಈ ಗ್ರಾಮಗಳ ಜನರು ಎಲ್ಲಿ ನೆಲೆ ನಿಲ್ಲುತ್ತಾರೆ ಎನ್ನುವುದು ಇನ್ನೂ ನಿಗದಿಯಾಗಿಲ್ಲ.

ದೊಡ್ಡಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬೆಲ್ಲದಹಳ್ಳಿ, ಸುಂಕನಹಳ್ಳಿ, ಗದ್ದೆಮೋಹನಹಳ್ಳಿ, ವೀರಸಾಗರ, ಲಕ್ಕಮುತ್ತನಹಳ್ಳಿಯು ಬೈರಗೊಂಡ್ಲು ಜಲಾಶಯ ನಿರ್ಮಾಣದಿಂದ ಸಂಪೂರ್ಣವಾಗಿ ಮುಳುಗಡೆಯಾಗಲಿವೆ. ಎರಡು ತಾಲ್ಲೂಕಿನ ಸುಮಾರು 5,500 ಎಕರೆ ಕೃಷಿ ಭೂಮಿ ಮುಳುಗಡೆಯಾಗಲಿದೆ. ಜಲಾಶಯಕ್ಕೆ ಬಳಕೆಯಾಗುತ್ತಿರುವ ಬಹುತೇಕ ಭೂಮಿ ಕೊಳವೆಬಾವಿಗಳ ಮೂಲಕ ನೀರಾವರಿ ಹಾಗೂ ಮಳೆ ಆಶ್ರಯದಲ್ಲಿ ಕೃಷಿ ಮಾಡುತ್ತಿರುವ ಭೂಮಿಯಾಗಿದೆ. ಒಟ್ಟಾರೆ ಫಲವತ್ತಾದ ಭೂಮಿ ನೀರು ಪಾಲಾಗಲಿದೆ ಎನ್ನುತ್ತಾರೆ ಈ ಭಾಗದ ರೈತರು.

ಪರ್ಯಾಯ ಮಾರ್ಗ ಇತ್ತು:ಎತ್ತಿನಹೊಳೆಯಿಂದ ನೀರು ತರುವ ಅಥವಾ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವುದಕ್ಕೆ ನಮ್ಮ ವಿರೋಧ ಇಲ್ಲ ಎನ್ನುವ ಮಚ್ಚೇನಹಳ್ಳಿ ಗ್ರಾಮದ ದೊಡ್ಡನಾಗಪ್ಪ, ಲಕ್ಕೇನಹಳ್ಳಿ ಗ್ರಾಮದ ವಿರೇಂದ್ರ, ‘ಜಲಾಶಯ ನಿರ್ಮಿಸಲು ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯದೆ ಪರ್ಯಾಯ ವ್ಯವಸ್ಥೆ ಮಾಡಲು ಅವಕಾಶ ಇದ್ದವು. ಈ ಭಾಗದಲ್ಲಿನ ತೀತಾ ಡ್ಯಾಂ, ಮಾವುತ್ತೂರು ಕೆರೆ, ಇದಲ್ಲದೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ತಾಲ್ಲೂಕಿಗಳಲ್ಲಿನ ದೊಡ್ಡ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ಸಂಗ್ರಹಿಸಬಹುದಾಗಿತ್ತು. ಇದರಿಂದ ನಮ್ಮ ಹಿರಿಯರು ಬಾಳಿ ಬದುಕಿದ ಊರು ಉಳಿಯುತಿತ್ತು. ತಾಲ್ಲೂಕಿನ ಎಲ್ಲಾ ಪ್ರದೇಶದಲ್ಲೂ ಅಂರ್ತಜಲಮಟ್ಟ ವೃದ್ಧಿಯಾಗುವ ಮೂಲಕ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತಿತ್ತು’ ಎನ್ನುವುದು ಅವರ ಅಭಿಪ್ರಾಯ.

ಅಭಿವೃದ್ದಿಯೇ ಇಲ್ಲ ದಾಗಿದೆ:ಬೈರಗೊಂಡ್ಲು ಜಲಾಶಯಕ್ಕೆ ಮುಳುಗಡೆಯಾಗುತ್ತಿರುವ ಗರಡುಗಲ್ಲು-ಲಕ್ಕೇನಹಳ್ಳಿ 7ನೇ ವಾರ್ಡ್‌ನಲ್ಲಿ 533 ಜನ ಮತದಾರರಿದ್ದಾರೆ. ಹಾಗೆಯೇ ಮಚ್ಚೇನಹಳ್ಳಿ-ದಾಸರಪಾಳ್ಯ ಗ್ರಾಮದಲ್ಲಿ 1150 ಜನ ಮತದಾರರಿದ್ದಾರೆ.

ಎತ್ತಿನಹೊಳೆ ಯೋಜನೆಯ ಪ್ರಸ್ತಾಪ ಆರಂಭವಾದಾಗಿನಿಂದಲೂ ನಮ್ಮೂರಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾತ್ರ ಇಲ್ಲಿಯವರೆಗೂ ನಡೆದಿಲ್ಲ ಎನ್ನುವ ಲಕ್ಕೇನಹಳ್ಳಿಯ ವೀರೇಂದ್ರ, ದಾಸರಪಾಳ್ಯದ ಉದಯ್‌ಕುಮಾರ್‌, ‘ಮುಳುಗಡೆಯಾಗುತ್ತಿರುವ ಗ್ರಾಮದಲ್ಲಿ ಏಕೆ ಅಭಿವೃದ್ಧಿ ಕೆಲಸ ಎನ್ನುತ್ತಾರೆ ಅಧಿಕಾರಿಗಳು. ಆದರೆ ಗ್ರಾಮವನ್ನು ಎಲ್ಲಿಗೆ ಸ್ಥಳಾಂತರ ಮಾಡುತ್ತೇವೆ ಎನ್ನುವ ಬಗ್ಗೆ ಮಾತ್ರ ಇಲ್ಲಿಯವರೆಗೂ ಯಾವುದೇ ಸ್ಪಷ್ಟತೆ ಇಲ್ಲದಾಗಿದೆ’ ಎನ್ನುತ್ತಾರೆ.

‘ಸ್ಥಳಾಂತರ ಮಾಡುವ ಗ್ರಾಮದಲ್ಲಾದರು ಎಲ್ಲಾ ನಾಗರಿಕ ಸೌಲಭ್ಯ ದೊರೆಯುವಂತೆ ಮಾಡಬೇಕು ಎನ್ನುವುದೇ ನಮ್ಮ ಕನಸಾಗಿದೆ’ ಎನ್ನುತ್ತಾರೆ ಜಲಾಶಯಕ್ಕೆ ಮುಳುಗಡೆಗೆ ಒಳಗಾಗುತ್ತಿರುವ ಗ್ರಾಮದ ಜನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT