ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಕೆಟ್‌ ವಂಚಿತರ ಹತಾಶೆ ಸ್ಥಿತಿ’

ವೀರಪ್ಪ ಮೊಯಿಲಿ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಕಾಂಗ್ರೆಸ್‌ ಟೀಕೆ
Last Updated 7 ಜನವರಿ 2019, 13:35 IST
ಅಕ್ಷರ ಗಾತ್ರ

ವಿಜಯಪುರ: ಸಂಸದ ವೀರಪ್ಪ ಮೊಯಿಲಿ ಅವರ ಕಾರ್ಯವೈಖರಿ ಕುರಿತು ವ್ಯಂಗ್ಯವಾಡಿರುವ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಣ್ಣ ಖಂಡಿಸಿದರು.

‘ಬಹುವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ನಾರಾಯಣಸ್ವಾಮಿ ಆಗ ಆರೋಪ ಮಾಡಲಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿಗೆ ಸೇರಿದ ಮೇಲೆ ಅವರ ಮಾತಿನ ಧಾಟಿ ಬದಲಾಗಿದೆ’ ಎಂದು ದೂರಿದರು.

ಹತ್ತು ವರ್ಷಗಳ ಹಿಂದೆ ಮೊಯಿಲಿ ಅವರು ಚುನಾವಣೆಗೆ ಸ್ಪರ್ಧೆ ಮಾಡಿದಾಗ ಚಕಾರ ಎತ್ತದ ಅವರು, ಸುಳ್ಳುಗಾರ ಎಂದು ವ್ಯಂಗ್ಯವಾಡಿದ್ದಾರೆ. ಹುಟ್ಟೂರು ಚನ್ನರಾಯಪಟ್ಟಣ ಹೋಬಳಿ ಬೀಡಿಗಾನಹಳ್ಳಿ ಎಂದು ಹೇಳುತ್ತಿದ್ದವರು ಈಗ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಉದ್ದೇಶದಿಂದ ಕುಟುಂಬದ ಮೂಲ ಕೋಲಾರ ಎಂದು ಕರಪತ್ರ ಮುದ್ರಿಸಿ ಮತಯಾಚನೆ ಮಾಡಲು ಮುಂದಾಗಿದ್ದಾರೆ. ಇದಕ್ಕಿಂತ ಸುಳ್ಳು ಇನ್ನೊಂದು ಬೇಕೇ ? ಯಾರು ಸುಳ್ಳುಗಾರರು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ’ ಎಂದು ಟೀಕಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ರಾಜಗೋಪಾಲ್ ಮಾತನಾಡಿ, ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆಗೆ ಕೇವಲ ಕಾಂಗ್ರೆಸ್ ಮುಖಂಡರು ಮಾತ್ರ ಹೋಗಿಲ್ಲ. ಎಲ್ಲ ಪಕ್ಷಗಳ ಮುಖಂಡರು, ರೈತ ಸಂಘದ ಪ್ರತಿನಿಧಿಗಳು ವೀಕ್ಷಣೆ ಮಾಡಿದ್ದಾರೆ. ಯೋಜನೆ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ ಅವರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಇಲ್ಲ. ರೈತರ ಪರಿಸ್ಥಿತಿಯೂ ಗೊತ್ತಿಲ್ಲ’ಎಂದು ಟೀಕಿಸಿದರು.

ಯುಪಿಎ ಸರ್ಕಾರದಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿ ಈಗ ಉಪ್ಪು ತಿಂದ ಮನೆಗೆ ದ್ರೋಹ ಬಗೆದರೆ ಹೇಗೆ ? ಟಿಕೆಟ್ ವಂಚಿತರಾಗಿ ಹತಾಶೆಯಿಂದ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ವಿಜಯಪುರ ನಗರ ಘಟಕದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್ ಮಾತನಾಡಿ, ಬಿಜೆಪಿ ಮುಖಂಡರು ಹೇಳಿಕೆ ನೀಡುವಾಗ ಜನರನ್ನು ಗೊಂದಲಕ್ಕೆ ಈಡಾಗದಂತೆ ಜವಾಬ್ದಾರಿಯುತವಾಗಿ ನೀಡಬೇಕು. ಸತ್ಯ ಮರೆಮಾಚಿ ಚುನಾವಣೆಗೋಸ್ಕರ ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ಖಂಡಿಸುವುದಾಗಿ ತಿಳಿಸಿದರು.

ಮುಖಂಡ ಅಣ್ಣಮ್ಮತಾಯಿ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT