ಮಂಗಳವಾರ, ಆಗಸ್ಟ್ 16, 2022
21 °C
ಉಮೇದುವಾರಿಕೆಗೆ ಕೊನೆಯ ದಿನ: ಅಂತರ ಕಾಪಾಡಿಕೊಳ್ಳಲು ಹಿಂದೇಟು

ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಗ್ರಾಮ ಪಂಚಾಯಿತಿ ಚುನಾವಣೆಯ 2ನೇ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರದಂದು ಬಹುತೇಕ ಪಂಚಾಯಿತಿಗಳಲ್ಲಿ ನಾಮಪತ್ರ ಸಲ್ಲಿಸಲು ಆಕಾಂಕ್ಷಿಗಳು ಮುಗಿಬಿದ್ದಿದ್ದರು.

ಡಿ. 11ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದ್ದರೂ ಅಮಾವಾಸ್ಯೆ, ಪಾಡ್ಯಮಿ, ಮಂಗಳವಾರದಂದು ನಾಮಪತ್ರ ಸಲ್ಲಿಕೆ ಮಾಡಿದರೆ, ಚುನಾವಣೆಯಲ್ಲಿ ಒಳಿತಾಗುವುದಿಲ್ಲ ಎನ್ನುವ ಭಯದಿಂದ ಕೊನೆಯ ದಿನದಂದು ಒಳ್ಳೆಯ ಸಮಯ ನೋಡಿಕೊಂಡು ನಾಮಪತ್ರ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದರು. ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಮ್ಮ ಬೆಂಬಲಿಗರೊಂದಿಗೆ ಪಂಚಾಯಿತಿಗಳ ಮುಂದೆ ಜಮಾಯಿಸಿದ್ದರು.

ಮಹಿಳೆಯರು ಸಿಂಹಪಾಲು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪುರುಷರಷ್ಟೇ ಸಿಂಹಪಾಲು ಮಹಿಳೆಯರು ಸ್ಪರ್ಧಿಸಲು ಅವಕಾಶವಿದೆ. ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ಗ್ರಾಮ ಪಂಚಾಯಿತಿಗಳ ಮುಂದೆ ತಮ್ಮ ಬೆಂಬಲಿಗರೊಟ್ಟಿಗೆ ಜಮಾಯಿಸಿದ್ದರು.

ಅಂತರ ಮರೆತರು: ಕೊರೊನಾ ಸಂಕಷ್ಟದ ನಡುವೆ ನಾಮಪತ್ರ ಸಲ್ಲಿಕೆಗಾಗಿ ಬರುವವರು ಕಡ್ಡಾಯವಾಗಿ ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕು ಎಂದು ನಿಬಂಧನೆ ಹಾಕಿದ್ದರೂ ನಾಮಪತ್ರ ಸಲ್ಲಿಸಲು ಬಂದಿದ್ದ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿತರು ಪಂಚಾಯಿತಿಗಳ ಮುಂದೆ ಗುಂಪು ಕಟ್ಟಿಕೊಂಡು ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಅವರು ಅಂತರ ಮರೆತಿದ್ದರು. ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಪಕ್ಷಗಳ ಅಭ್ಯರ್ಥಿಗಳಿಗೆ ಸಾಥ್ ನೀಡಿದರು.

ನಾಮಪತ್ರ ಸಲ್ಲಿಸದಂತೆ ತಡೆಯುವ ಪ್ರಯತ್ನ: ಹಲವು ಗ್ರಾಮಗಳಲ್ಲಿ ಅವಿರೋಧ ಆಯ್ಕೆ ಮಾಡುವ ಸಲುವಾಗಿ ಮುಖಂಡರು ಕಳೆದ ಎರಡು–ಮೂರು ದಿನಗಳಿಂದ ಆಕಾಂಕ್ಷಿಗಳ ಮನವೊಲಿಕೆ ಮಾಡುವಂತಹ ಪ್ರಯತ್ನ ನಡೆದಿತ್ತು. ಆದರೆ, ಆಕಾಂಕ್ಷಿಗಳೆಲ್ಲರೂ ನಾಮಪತ್ರ ಸಲ್ಲಿಸಿದ್ದು ನಾಮಪತ್ರಗಳು ವಾಪಸ್‌ ಪಡೆಯುವ ವೇಳೆ ಮತ್ತಷ್ಟು ಕಸರತ್ತು ನಡೆಯುವಂತಹ ಲಕ್ಷಣಗಳು ಗೋಚರಿಸುತ್ತಿವೆ.

ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಎರಡು– ಮೂರು ಮತಗಳ ಅಂತರದಿಂದ ಸೋಲನ್ನು ಕಂಡಿದ್ದ ಅಭ್ಯರ್ಥಿಗಳನ್ನು ತಮ್ಮ ಪಕ್ಷಗಳತ್ತ ಸೆಳೆಯುವ ಪ್ರಯತ್ನಗಳೂ ಕೂಡ ನಡೆಯುತ್ತಿವೆ.

ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು: ಕಾಂಗ್ರೆಸ್, ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಯಾ ಪಕ್ಷದ ಮುಖಂಡರು ತೀವ್ರ ಕರಸತ್ತು ನಡೆಸಬೇಕಾಯಿತು. ಹಲವು ಕಡೆಗಳಲ್ಲಿ ಇದುವರೆಗೂ ಸದಸ್ಯರಾಗಿದ್ದವರು ಎರಡನೇ ಬಾರಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಹೊಸಬರಿಗೆ ಅವಕಾಶ ಕಲ್ಪಿಸಲು ಮುಖಂಡರು, ಆಕಾಂಕ್ಷಿಗಳ ಮುಖ ವರ್ಚಸ್ಸು, ಜನಾಂಗದ ಬೆಂಬಲ, ಆರ್ಥಿಕ ಸಾಮರ್ಥ್ಯವನ್ನು ಗಮನಿಸಿಕೊಂಡು ಅವಕಾಶ ಮಾಡಿಕೊಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.