ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಫಲವತ್ತತೆ ಕಾಪಾಡುವುದು ಇಂದಿನ ತುರ್ತು’

ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಆಹಾರ ದಿನಾಚರಣೆ
Last Updated 16 ಅಕ್ಟೋಬರ್ 2019, 18:45 IST
ಅಕ್ಷರ ಗಾತ್ರ

ಹಾಡೋನಹಳ್ಳಿ (ದೊಡ್ಡಬಳ್ಳಾಪುರ): ‘ಹಸಿವು ಮುಕ್ತ ವಿಶ್ವಕ್ಕಾಗಿ ಆರೋಗ್ಯಕರ ಆಹಾರ ಪದ್ಧತಿಗಳು ಈ ವರ್ಷದ ವಿಶ್ವ ಆಹಾರ ದಿನಾಚರಣೆಯ ಧ್ಯೇಯವಾಕ್ಯವಾಗಿದೆ. ಕುಟುಂಬದ ಸದಸ್ಯರೆಲ್ಲರೂ ಕೃಷಿಯಲ್ಲಿ ತೊಡಗಿ ಗುಣಮಟ್ಟದ ಆಹಾರ ಉತ್ಪಾದನೆ ಮಾಡಿದರೆ ವಿಶ್ವದ ಜನತೆಗೆ ಆಹಾರ ಪೂರೈಕೆ ಜೊತೆಗೆ ಬಡತನ ನಿರ್ಮೂಲನೆಯಾಗುವುದರಲ್ಲಿ ಸಂದೇಹವಿಲ್ಲ’ ಎಂದು ಕೃಷಿ ವಿಶ್ವವಿದ್ಯಾನಿಲಯದ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ ಕಿರಿಯ ವಿಜ್ಞಾನಿ ಡಾ.ಎಂ.ಗೀತಾಯಂಕಂಚಿ ಹೇಳಿದರು.

ಇಲ್ಲಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ, ಗೃಹ ವಿಜ್ಞಾನ (ಆಹಾರ ಮತ್ತು ಪೋಷಣೆ), ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಹವಾಮಾನದಿಂದ ಕೃಷಿ ಮತ್ತು ಆಹಾರದಲ್ಲೂ ಬದಲಾವಣೆಯ ಅವಶ್ಯಕತೆ ಇದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಹೆಚ್ಚಿನ ಇಳುವರಿ ಪಡೆಯಲು ಭೂ ಫಲವತ್ತತೆ ಹಾಳಾಗದಂತೆ ಕಾಪಾಡಬೇಕು. ಸೂಕ್ತ ರೀತಿಯಲ್ಲಿ ಆಹಾರ ಧಾನ್ಯಗಳ ಶೇಖರಣೆ ಮಾಡುವುದು ಅಗತ್ಯ. ವಿಶ್ವ ಆಹಾರ ದಿನಾಚರಣೆ ಸಂದರ್ಭದಲ್ಲಿ ಹಸಿವೆಂಬುದನ್ನು ಜಾಗತಿಕ ಮಟ್ಟದಲ್ಲಿ ಕ್ಲಿಷ್ಟ ಸಮಸ್ಯೆಯೆಂದು ಪರಿಗಣಿಸಿ, ಆಹಾರ ಪೂರೈಕೆಯ ಜೊತೆಗೆ ಅದರ ಗುಣಮಟ್ಟ ಮತ್ತು ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನಗೌಡ ಮಾತನಾಡಿ, ‘ವಿಶ್ವ ಆಹಾರ ದಿನಾಚರಣೆಯು ಸಂಧಿಗ್ಧ ಪರಿಸ್ಥಿತಿಯಲ್ಲಿ ಆಹಾರ ಭದ್ರತೆ ಸಾಧನೆಗೈಯ್ಯುವುದು ಹಾಗೂ ಪ್ರಪಂಚದಲ್ಲಿ ಹಸಿವು, ಬಡತನದಿಂದ ನರಳುತ್ತಿರುವ ಜನರ ಸ್ಥಿತಿಗತಿ, ಅವ್ಯವಸ್ಥೆಗಳತ್ತ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಉತ್ತಮ ಗುಣಮಟ್ಟದ ಪೋಷಕಾಂಶಯುಕ್ತ ಆಹಾರ ಒದಗಿಸುವ ನಿಟ್ಟಿನಲ್ಲಿ ಭೂಮಿಯ ಆರೋಗ್ಯ ಕಾಪಾಡುವುದು ಅತಿ ಅವಶ್ಯ’ ಎಂದರು.

ಪೋಷಕಾಂಶ ಕುರಿತು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷಿ ವಿಶ್ವವಿದ್ಯಾಲಯದ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ, ಗೃಹ ವಿಜ್ಞಾನ (ಆಹಾರ ಮತ್ತು ಪೋಷಣೆ), ಸಂಶೋಧನಾ ಸಹಚರರಾದ ಡಾ.ವೀಣಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೆಶಕ ನಾರಾಯಣಸ್ವಾಮಿ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ಕೃಷಿ ಇಲಾಖೆ ಸಿಬ್ಬಂದಿ ರೈತ ಮಹಿಳೆಯರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT