ಬುಧವಾರ, ಜನವರಿ 20, 2021
17 °C

ವಿಜಯಪುರ: ಚೆರ್ರಿ ತಳಿಯ ಟೊಮೆಟೊ ತಿಪ್ಪೆ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಂಡವಾಳ ಹಣ ಇಲ್ಲ, ಸಾಲ ಮಾಡಿ ಬೆಳೆದಿರುವ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆ ನಾಟಿ ಮಾಡಲು ಮಾಡಿಕೊಂಡಿರುವ ಸಾಲಗಳು ತೀರಿಸಲು ಸಾಧ್ಯವಾಗುತ್ತಿಲ್ಲ. ಮುಂದೇನು ಎನ್ನುವ ಆತಂಕ ಎದುರಾಗಿದೆ ಎಂದು ರೈತ ಗೋಪಾಲಪ್ಪ ತಮ್ಮ ಅಳಲು ತೋಡಿಕೊಂಡರು.

ಚನ್ನರಾಯಪಟ್ಟಣ ಹೋಬಳಿ ಚೀಮಾಚನಹಳ್ಳಿ ಗ್ರಾಮದ ರೈತ ಗೋಪಾಲಪ್ಪ ಅವರು ಮಾತನಾಡಿ, ‘ನನಗಿರುವ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆದಿದ್ದೇನೆ. ಒಂದು ಎಕರೆ ಪ್ರದೇಶದಲ್ಲಿ ಚೆರ್ರಿ ತಳಿಯ ಟೊಮೆಟೊ ಬೆಳೆದಿದ್ದೇನೆ. ಗಿಡದ ತುಂಬಾ ಕಾಯಿ ಬಿಡುತ್ತಿದ್ದಂತೆ ಮನೆ ಕಟ್ಟಲು, ತೋಟಗಳಿಗೆ ಮಾಡಿರುವ ಸಾಲವನ್ನು ಈ ಬಾರಿಯಾದರೂ ತೀರಿಸಿಕೊಂಡು ನೆಮ್ಮದಿಯ ಜೀವ ನಡೆಸುವ ಆಲೋಚನೆ ಮಾಡುತ್ತಿರುವಾಗಲೇ ಆವರಿಸಿದ ಕೊರೊನಾ ಭೀತಿ ಹಾಗೂ ಲಾಕ್‌ಡೌನ್ ಆದೇಶದ ಹಿನ್ನೆಲೆಯಲ್ಲಿ ತೋಟದಲ್ಲೆ ಹಣ್ಣಾದ ಟೊಮೆಟೊ ಹಣ್ಣನ್ನು ಎರಡು ಬಾರಿ ಮಾತ್ರ ಕಿತ್ತು ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಪ್ರತಿ ಕೆ.ಜಿಗೆ ₹ 100ರಂತೆ ಮಾರಾಟವಾಗಬೇಕಾಗಿದ್ದದ್ದು, ಕೇವಲ ₹ 20ಕ್ಕೆ ಮಾರಾಟ ಮಾಡಬೇಕಾಗಿದೆ’ ಎಂದರು.

‘ಇದರಿಂದ ಬೇಸರಗೊಂಡು ತೋಟದಲ್ಲಿನ ಗಿಡವನ್ನು ಹಣ್ಣಿನ ಸಮೇತ ಕಿತ್ತುಹಾಕಿದ್ದೇನೆ. ಇದುವರೆಗೂ ಟ್ಯಾಂಕರ್‌ಗ‌ಳಲ್ಲಿ ₹ 1.50 ಲಕ್ಷ ಬಂಡವಾಳ ಹಾಕಿ ನೀರು ಹಾಯಿಸಿದ್ದೇನೆ. ಇದ್ದ ಕೊಳವೆಬಾವಿಗಳು ಬತ್ತಿಹೋಗಿವೆ. 5ರಿಂದ 6 ಲಕ್ಷ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಬೆಳೆ ನಷ್ಟವಾಗಿದ್ದರಿಂದ ನನ್ನ ನಿರೀಕ್ಷೆಯೆಲ್ಲಾ ಸುಳ್ಳಾಯಿತು. ಮನೆಯ ಕೆಲಸ ಅರ್ಧಕ್ಕೆ ನಿಂತಿದೆ. ಸಾಲ ಹೇಗೆ ತೀರಿಸೋದು, ಮುಂದಿನ ಬೆಳೆಗೆ ಬಂಡವಾಳ ಹಾಕೋದು ಹೇಗೆ? ಎನ್ನುವ ಚಿಂತೆ ಕಾಡುತ್ತಿದೆ. ನನ್ನಂತೆ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಆಸರೆಯಾಗಿ ನಿಲ್ಲಬೇಕು. ನಷ್ಟ ಪರಿಹಾರವನ್ನು ಕೊಡಬೇಕು, ಕೊಳವೆಬಾವಿ ಕೊರೆಯಿಸಲಿಕ್ಕೂ ಹಣವಿಲ್ಲದಂತಹ ಪರಿಸ್ಥಿತಿಯಲ್ಲಿರುವ ನಮಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮಂಜೂರು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು