ಶನಿವಾರ, ಮೇ 15, 2021
24 °C
ಕೂಲಿ ವೆಚ್ಚವೂ ಸಿಗದೆ ಕಂಗಾಲು

ಟೊಮೆಟೊ ಬೆಲೆ ಕುಸಿತ: ರೈತನಿಗೆ ದೊಡ್ಡ ಹೊಡೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಟೊಮೆಟೊ ಬೆಳೆದ ರೈತ ಬೆಲೆ ಕುಸಿತದ ಹೊಡೆತಕ್ಕೆ ಸಿಲುಕಿದ್ದಾನೆ. ಬೆಲೆ ಕುಸಿತದಿಂದ ಬೆಳೆ ಕಟಾವು ಮಾಡಿಸಲು ಹೂಡುವ ಕೂಲಿ ಹಣದಷ್ಟು ಸಹ ಮಾರಾಟದಿಂದ ಸಿಗುತ್ತಿಲ್ಲವೆಂದು ಬೆಳೆಯನ್ನು ಕಟಾವು ಮಾಡುತ್ತಿಲ್ಲ. ಟೊಮೆಟೊ ತೋಟದಲ್ಲಿಯೇ ಕೊಳೆಯುತ್ತಿದ್ದು ರೈತ ಕಂಗಾಲಾಗಿದ್ದಾನೆ.

‘ಒಂದು ಎಕರೆ ವಿಸ್ತೀರ್ಣದಲ್ಲಿ ಟೊಮೆಟೊ ಬೆಳೆಯನ್ನು ಬೆಳೆಯಲಾಗಿತ್ತು. ಬಿತ್ತನೆ, ಕ್ರಿಮಿನಾಶಕ, ಆಳುಗಳ ಕೂಲಿ ವೆಚ್ಚ ಇನ್ನಿತರ ವೆಚ್ಚಗಳು ಸೇರಿದಂತೆ ಸುಮಾರು ₹ 1 ಲಕ್ಷ ಖರ್ಚಾಗಿದೆ. ಕಳೆದ ವಾರ 15 ಜನ ಕೂಲಿ ಆಳುಗಳು 100 ಚೀಲ ಟೊಮೆಟೊ ಕಟಾವು ಮಾಡಿದ್ದರು. ಒಬ್ಬರಿಗೆ ₹ 300 ಕೂಲಿ, ಚೀಲದ ವೆಚ್ಚ ₹ 4, ಸಾಗಾಟ ವೆಚ್ಚ ಚೀಲಕ್ಕೆ ₹ 18 ಆಗುತ್ತದೆ. ಟೊಮೆಟೊ ಚೀಲ ಒಂದಕ್ಕೆ ₹ 25-35ಕ್ಕೆ ಮಾರಾಟವಾಯಿತು. ಟೊಮೆಟೊ ಬೆಲೆಗಿಂತ ಕಟಾವು ಮತ್ತು ಸಾಗಾಟದ ವೆಚ್ಚ ಹೆಚ್ಚಾದ್ದರಿಂದ ಬೆಳೆಯನ್ನು ಕಟಾವು ಮಾಡದೆ ತೊಟದಲ್ಲಿಯೇ ಬಿಟ್ಟಿದ್ದೇವೆ’ ಎನ್ನುತ್ತಾರೆ ಪಟ್ಟಣದ ವಾಲ್ಮಿಕಿ ನಗರದ ರೈತ ಕೃಷ್ಣಪ್ಪನ ಮಗ ಮಂಜುನಾಥ್.

ಸೂಲಿಬೆಲೆ ಕುರುಬರಪೇಟೆ ರೈತರೊಬ್ಬರು 2 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದರು. ಬೆಳೆಯ ವೆಚ್ಚ ಸುಮಾರು ₹ 3ರಿಂದ 4 ಲಕ್ಷ ಆಗಿದೆ. 25 ಕೆ.ಜಿ ಬಾಕ್ಸ್ ₹ 100ಕ್ಕೆ ಮಾರಾಟವಾಗಿದೆ. ಸಾಗಾಟ ವೆಚ್ಚ ₹ 25, ಕಮೀಷನ್ ಶೇ 10. ಇದೆಲ್ಲ ನೀಡಬೇಕಾದರೆ ನಾವೇ ಕೈಯಿಂದ ನೀಡಬೇಕು ಎನ್ನುತ್ತಾರೆ.

‘ಕೊರೊನಾ ಸೋಂಕಿನ ಕಾರಣದಿಂದ ಹೊರ ದೇಶಗಳಿಗೆ ರಫ್ತಾಗದಿರುವುದು, ಕಾರ್ಯಕ್ರಮಗಳಿಗೆ ನಿಯಂತ್ರಣ, ಟೊಮೆಟೊ ಬೆಲೆ ಕುಸಿತಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಅರಸನಹಳ್ಳಿ ರೈತ ಮುನಿರಾಜು.

‘ಪ್ರತಿ ವರ್ಷದಂತೆ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಟೊಮೆಟೊ ಬೆಳೆಗೆ ಹೆಚ್ಚಾಗಿ ನಾಟಿ ಮಾಡಿದ್ದಾರೆ. ಇದರಿಂದ ಏಪ್ರಿಲ್, ಮೇ ತಿಂಗಳಿನಲ್ಲಿ ಬೆಲೆ ಕುಸಿತ ಆಗುತ್ತಿದೆ. ಹಬ್ಬ, ಹರಿದಿನ, ಇನ್ನಿತರ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯದಿರುವುದರಿಂದ ಬೆಲೆ ಕುಸಿತ ಕಂಡಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹೊಸಕೋಟೆ ವಲಯದ ಹಿರಿಯ ಸಹಾಯಕ ನಿರ್ದೇಶಕ ‌ಪ್ರಶಾಂತ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.