ಮಂಗಳವಾರ, ನವೆಂಬರ್ 19, 2019
26 °C
ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

ತ್ವರಿತವಾಗಿ ಕಾಮಗಾರಿ ಮುಕ್ತಾಯಗೊಳಿಸಿ

Published:
Updated:
Prajavani

ದೊಡ್ಡಬಳ್ಳಾಪುರ: ಸಬೂಬುಗಳನ್ನು ಹೇಳದೆ ಯೋಜನೆಗಳ ಅನುಷ್ಠಾನ ಅಧಿಕಾರಿಗಳು ಸಂಪೂರ್ಣ ತೊಡಗಿಕೊಳ್ಳಬೇಕು. ನಿಗದಿತ ಸಮಯದ ಒಳಗಾಗಿ ಯೋಜನೆಗಳ ಗುರಿ ಮುಟ್ಟಲೇಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಯೋಜನೆಗಳ ಯಶಸ್ವಿಗೆ ಅಧಿಕಾರಿಗಳ ಬೆಂಬಲ ಅಗತ್ಯವಾಗಿದೆ. ಅನೇಕ ಇಲಾಖೆಗಳು ಯೋಜನೆಗಳ ಪ್ರಗತಿಯಲ್ಲಿ ಹಿಂದುಳಿದಿದ್ದು ಯಾವುದೇ ಕಾರಣ ನೀಡದೆ ತ್ವರಿತವಾಗಿ ಪೂರ್ಣಗಳಿಸಬೇಕು’ ಎಂದು ಸೂಚನೆ ನೀಡಿದರು.

‘ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿತವಾಗಿದೆ. ಕೊಳವೆಬಾವಿ ಕೊರೆಸಿದ್ದರೂ ನೀರು ದೊರೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಭಾವನೆಯಿಂದ ಅಧಿಕಾರಿಗಳು ಹೊರಬರಬೇಕಿದೆ’ ಎಂದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ ವಸೂಲಿಗೆ ಅಧಿಕಾರಿಗಳು ಮುಂದಾಗಬೇಕಿದೆ. ನಾಗರಿಕ ಸೌಲಭ್ಯ ಪಡೆಯಲು ಕರ ಪಾವತಿಸುವುದು ನಮ್ಮ ಕರ್ತವ್ಯ ಎನ್ನುವ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಬೇಕಿದೆ. ಅಲ್ಲದೆ ಕರವಸೂಲಿಯಲ್ಲಿ ನಿರಂತರತೆ ಕಾಪಾಡಿಕೊಳ್ಳಬೇಕು’ ಎಂದರು.

ಅಂಗವಿಕಲರಿಗೆ ಜಾಬ್ ಕಾರ್ಡ್ ಕಡ್ಡಾಯ: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಟ 5 ಮಂದಿ ಅಂಗವಿಕಲರ ಶಕ್ತಿಗೆ ಅನುಸಾರವಾಗಿ ಕೆಲಸ ನೀಡುವುದು ಕಡ್ಡಾಯವಾಗಿದೆ. ಇವರಿಗೆ ಜಾಬ್ ಕಾರ್ಡ್ ನೀಡಿ ಶೇ 50ರಷ್ಟು ಉದ್ಯೋಗ ನೀಡಬೇಕು’ ಎಂದರು.

ಕೈ ತೋಟ ಉತ್ತೇಜಿಸಿ: ‘ಶಾಲಾ ಮಕ್ಕಳಿಗೆ ಅನ್ನಭಾಗ್ಯ ಯೋಜನೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ, ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಮೂಲಕ ನೀಡಲಾಗುವ ಗುಣಮಟ್ಟದ ಆಹಾರಕ್ಕೆ ಸ್ಥಳೀಯವಾಗಿ ತರಕಾರಿ ಬೆಳೆಯಲು ಅವಕಾಶ ಕಲ್ಪಿಸಬೇಕು. ಗುಣಮಟ್ಟದ ತರಕಾರಿಯಿಂದಾಗಿ ಶಾಲಾ ಮಟ್ಟದಲ್ಲಿಯೇ ಅಪೌಷ್ಠಿಕತೆ ದೂರಮಾಡಲು ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಕರಿಗೆ ಸೂಚನೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಲ್ಲಿ ಶುಚಿತ್ವ ಕಾಪಾಡುವುದು, ಗುಣಮಟ್ಟದ ಆಹಾರ ವಿತರಿಸುವುದು, ಶುದ್ದಕುಡಿಯುವ ನೀರನ್ನು ನೀಡಬೇಕು’ ಎಂದರು.

ಆರಂಭವಾಗದ ವಸತಿ ಯೋಜನೆ: ‘ತಾಲ್ಲೂಕಿನ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಗೆ ನೀಡಲಾಗಿರುವ ಸುಮಾರು 500 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಇದರಿಂದ ಯೋಜನೆ ಯಶಸ್ವಿಯಾಗುತ್ತಿಲ್ಲ. ಫಲಾನುಭವಿಗಳು ಮನೆ ನಿರ್ಮಿಸುತ್ತಾರೆಯೇ, ಇಲ್ಲವೆ ವಜಾಗೊಳಿಸಬೇಕೆ ಎಂಬ ಮಾಹಿತಿ ಅನಿರ್ವಾರ್ಯವಾಗಿದೆ. ಮನೆ ಇದ್ದರೂ ಒತ್ತಡಕ್ಕೆ ಮಣಿದು ಪಟ್ಟಿಯಲ್ಲಿ ಸೇರಿಸಿರುವುದು ಈ ಹಿನ್ನಡೆಗೆ ಕಾರಣವಾಗುತ್ತಿದೆ. ಮತ್ತೆ ಈ ರೀತಿ ಉಂಟಾಗದಂತೆ ನಿಗಾವಹಿಸಬೇಕು’ ಎಂದು ಹೇಳಿದರು.

ತ್ಯಾಜ್ಯ ಸಂಸ್ಕರಣೆ ಘಟಕ: ಗ್ರಾಮ ಪಂಚಾಯಿತಿಗಳ ವ್ಯಾಪ್ಯಿಯಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆ ಅವಕಾಶವಿದೆ. ಇದುವರೆಗೂ 16 ಗ್ರಾಮ ಪಂಚಾಯಿತಿಗಳು ಪಟ್ಟಿ ನೀಡಿದ್ದು ಉಳಿದವರು ಪಟ್ಟಿ ನೀಡಬಹುದಾಗಿದೆ. ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮನೆಗಳಲ್ಲಿ ಶೌಚಾಲಯ ನಿರ್ಮಾಣ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಅವಕಾಶವಿದೆ. ಈ ನಿಟ್ಟಿನಲ್ಲಿ ಅರಣ್ಯ ಪ್ರದೇಶದಲ್ಲಿಯೂ ಶೌಚಾಲಯ ನಿರ್ಮಾಣಕ್ಕೆ ಅವಕಾಶವಿದೆ. ಸಗಣಿಯಿಂದ ತಯಾರಿಸುವ ಅಡುಗೆ ಅನಿಲ ಸ್ಥಾವರ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಂತೆ ಯೋಜನಾ ನಿರ್ದೇಶಕ ಡಾ.ಶಿವರುದ್ರಪ್ಪ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಎಚ್‌.ಎಂ.ದ್ಯಾಮಪ್ಪ ಮಾತನಾಡಿ, ಶುದ್ದ ಕುಡಿಯುವ ನೀರಿನ ಘಟಕಗಳಿಂದ ಹರಿದು ಹೋಗುವ ತ್ಯಾಜ್ಯ ನೀರನ್ನು ತಪಾಸಣೆಗೆ ಕಳಿಸಲಾಗಿದೆ. ವರದಿ ಬಂದ ನಂತರ ಇಂಗು ಗುಂಡಿ ಸ್ಥಾಪನೆಗೆ ಮುಂದಾಗಬೇಕಿದೆ. ಎಲ್ಲಾ ಇಲಾಖೆಗಳ ಮಾಹಿತಿ ಉಳ್ಳ ದೊಡ್ಡಬಳ್ಳಾಪುರ ಆ್ಯಪ್ ನಿರ್ಮಾಣ ಪ್ರಗತಿಯಲ್ಲಿರುವ ಕುರಿತಂತೆ ಸಿಇಒ ಗಮನಕ್ಕೆ ತಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಾತನಾಡಿ, ‘ಸರ್ಕಾರಿ ಶಾಲೆಗಳ ವ್ಯಾಪ್ತಿಯಲ್ಲಿ ಸಸಿ ನೆಡುವುದು ಹಾಗೂ ತೋಟ ನಿರ್ಮಾಣಕ್ಕೆ ಕಾಂಪೌಂಡ್ ಇಲ್ಲದಿವುದು ಅಡ್ಡಿಯಾಗಿದ್ದು, ನರೇಗಾ ಯೋಜನೆಯಲ್ಲಿ ಕಾಂಪೌಂಡ್ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅನುಧಾನ ದೊರಕಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕರಿಯಪ್ಪ, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎಂ.ದ್ಯಾಮಪ್ಪ ಇದ್ದರು.

ಪ್ರತಿಕ್ರಿಯಿಸಿ (+)