ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೆನೆ ಹೊತ್ತ ಮಹಿಳೆ’ಗೆ ಶಕ್ತಿ ಇಲ್ಲ: ಮೋದಿ ಟೀಕೆ

ಕರ್ನಾಟಕದ ಭಾಗ್ಯ ಬದಲಿಸುವ ಶಕ್ತಿಯೇ ಇಲ್ಲ
Last Updated 3 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬುದ್ಧಿ ಇರುವ ಯಾರೊಬ್ಬರೂ ಜೆಡಿಎಸ್‌ ಪಕ್ಷಕ್ಕೆ ಮತ ಹಾಕುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೆಂಗೇರಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಜೆಡಿಎಸ್‌ಗೆ ಕರ್ನಾಟಕದ ಭಾಗ್ಯ ಬದಲಿಸುವ ಶಕ್ತಿ ಇಲ್ಲ’ ಎಂದೂ ಮೂದಲಿಸಿದರು.

ಎರಡು ದಿನಗಳ ಹಿಂದೆಯಷ್ಟೇ ಉಡುಪಿಯಲ್ಲಿ ಮಾತನಾಡಿದ್ದ ಮೋದಿ, ‘ದೇವೇಗೌಡರು ಕರ್ನಾಟಕದ ಮಣ್ಣಿನ ಮಗ, ರೈತರ ಹೆಮ್ಮೆಯ ಪುತ್ರ’ ಎಂದು ಬಣ್ಣಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ ನಾಯಕರು, ‘ಬಿಜೆಪಿ–ಜೆಡಿಎಸ್‌ ಒಳ ಒಪ್ಪಂದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ’ ಎಂದು ಪ್ರಶ್ನಿಸಿದ್ದರು.

ಈ ವಾಕ್ಸಮರ ಮುಂದುವರಿದ ಮಧ್ಯೆಯೇ ಮೋದಿ, ‘ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಲು ಜೆಡಿಎಸ್‌ಗೆ ಸಾಧ್ಯವಿಲ್ಲ. ಸರ್ಕಾರ ರಚಿಸಲೂ ಆ ಪಕ್ಷಕ್ಕೆ ಆಗದು. ಜೆಡಿಎಸ್‌ ಸೋಲು ನಿಶ್ಚಿತ. ಕುಂಟುತ್ತಾ, ತೆವಳುತ್ತಾ ಆ ಪಕ್ಷ ಮೂರನೇ ಸ್ಥಾನಕ್ಕೆ ಬಂದು ನಿಲ್ಲಲಿದೆ ಎಂದು ಎಲ್ಲ ರಾಜಕೀಯ ಪಂಡಿತರು ಮತ್ತು ಸಮೀಕ್ಷೆಗಳು ಹೇಳಿವೆ’ ಎಂದರು.

‘ಜೆಡಿಎಸ್ ಅಭ್ಯರ್ಥಿಗಳ ಪರ  ಪ್ರಚಾರಕ್ಕೆ ಅತಿ ಮೂಲಭೂತವಾದಿಯೊಬ್ಬರು (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ) ಬೇರೆ ರಾಜ್ಯದಿಂದ ಬಂದಿದ್ದಾರೆ. ಉಗ್ರವಾದವನ್ನು ಸಮರ್ಥಿಸುವ ಶಕ್ತಿಯ ಜೊತೆಗೆ ಆ ಪಕ್ಷ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ, ಕರ್ನಾಟಕದ ಭವಿಷ್ಯವನ್ನೇ ನಿರ್ನಾಮ ಮಾಡಲು ಹೊರಟಿದೆ’ ಎಂದು ಕಿಡಿಕಾರಿದರು.

ಪ್ರಧಾನಿ ‘ದಲಿತ ಅಸ್ತ್ರ’ ಪ್ರಯೋಗ

ಕಲಬುರ್ಗಿಯಲ್ಲಿ ಮಾತನಾಡಿದ ಮೋದಿ, ‘ಹಿಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಮತ ಪಡೆದಿದ್ದ ಕಾಂಗ್ರೆಸ್‌, ದಲಿತರಿಗೆ ಮೋಸ ಮಾಡಿದೆ’ ಎಂದು ಆರೋಪಿಸಿದರು.

ದೇವೇಗೌಡರನ್ನು ಹೊಗಳಿ ಒಕ್ಕಲಿಗ ಸಮುದಾಯದ ಒಲವು ಗಳಿಸಲು ಮುಂದಾದ ಮೋದಿ, ಇದೀಗ ದಲಿತ ವರ್ಗವನ್ನು ಓಲೈಸಲು ಈ ಮಾತು
ಗಳನ್ನಾಡಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

ಆದರೆ, ಮರುಕ್ಷಣವೇ ‘ಕಾಂಗ್ರೆಸ್‌ನಿಂದ ಪರಿವಾರದ ಅಭಿವೃದ್ಧಿಯಷ್ಟೇ ಸಾಧ್ಯ. ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತು ಎಷ್ಟಿದೆ ಎಂಬ ಅಂದಾಜು ಯಾರಿಗಾದರೂ ಇದೆಯೇ’ ಎಂದು ಪ್ರಶ್ನಿದರು.

ಮೋದಿ ಮಾತಿಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ದಲಿತರ ಮೇಲೆ ಪ್ರೀತಿ ಇದ್ದರೆ ಆ ಸಮುದಾಯದ ಮುಖಂಡ ಗೋವಿಂದ ಕಾರಜೋಳ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಲಿ’ ಎಂದೂ ಸವಾಲೆಸೆದರು.

ಜೆಡಿಎಸ್‌ ದುಸ್ವಪ್ನ ಕುಮಾರಸ್ವಾಮಿ

ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ‘ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಅನ್ನು ಗುರಿಯಾಗಿರಿಸಿಕೊಂಡು ಟೀಕೆ ಮಾಡುತ್ತಿರುವುದನ್ನು ಗಮನಿಸಿದರೆ ಒಂದು ಅಂಶವಂತೂ ಸ್ಪಷ್ಟವಾಗುತ್ತಿದೆ. ಎರಡೂ ಪಕ್ಷಗಳಿಗೆ ನಮ್ಮ ಬಗ್ಗೆ ಭಯ ಹುಟ್ಟಿದೆ. ನಾವು ಅಧಿಕಾರಕ್ಕೆ ಬರುವ ಭಯ ಅವರಿಗೆ ದುಸ್ವಪ್ನವಾಗಿ ಕಾಡುತ್ತಿದೆ. ನಮ್ಮ ಪಕ್ಷ ಯಾರ ಟೀಕೆಗೂ ಹೆದರುವುದಿಲ್ಲ, ಯಾರ ಹೊಗಳಿಕೆಗೂ ಹಿಗ್ಗುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಪೊಳ್ಳು ಲವ್ ತೋರಿಸ್ತೀರೇನು?: ‘ನಾನು ಮುಖ್ಯಮಂತ್ರಿ ಆಗುವುದನ್ನು ಕಾಂಗ್ರೆಸ್ ತಪ್ಪಿಸಿತು ಅಂತೀರಲ್ಲ, ಅರೇ, ನೀವೇನು ಮಾಡಿದ್ರಿ? ನಾನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗುವ ಅವಕಾಶ ಇದ್ದಾಗಲೂ ಅದಕ್ಕೆ ಅವಕಾಶ ಕೊಡಲಿಲ್ಲ ನೀವು' ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

* ಮುಖ್ಯಮಂತ್ರಿ ಸ್ಥಾನಕ್ಕಿಂತಲೂ ಉನ್ನತ ಹುದ್ದೆ ಮಲ್ಲಿಕಾರ್ಜುನ ಖರ್ಗೆಗೆ ಸಿಕ್ಕಿದೆ. ಲೋಕಸಭೆಯ ಕಾಂಗ್ರೆಸ್‌ ನಾಯಕರಾಗಿ ಬೆಳೆದಿದ್ದಾರೆ

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಏನೂ ಇಲ್ಲ. ಸಾಸಿವೆ ಕಾಳನ್ನು ಪರ್ವತದಿಂದ ಕಟ್ಟಿಕೊಡುವ ಕೆಲಸವನ್ನು ಪ್ರಣಾಳಿಕೆಯಲ್ಲಿ ಮಾಡಿದೆ

-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT