ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ- ಶಿಡ್ಲಘಟ್ಟ ಹೆದ್ದಾರಿಯಲ್ಲಿ ಕಸದ ರಾಶಿ

Last Updated 17 ಅಕ್ಟೋಬರ್ 2019, 14:03 IST
ಅಕ್ಷರ ಗಾತ್ರ

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ಕೈಗಾರಿಕೆ ಪ್ರದೇಶವನ್ನು ಹಾದು ಹೋಗುವ ಹೊಸಕೋಟೆ- ಶಿಡ್ಲಘಟ್ಟ ರಾಜ್ಯ ಹೆದ್ದಾರಿಯಲ್ಲಿ ಕೈಗಾರಿಕೆಗಳ ತ್ಯಾಜ್ಯ, ಸನಿಹದಲ್ಲಿರುವ ವಸತಿ ಸಮುಚ್ಛಯಗಳ ಕಸದ ರಾಶಿಗಳು ಹಾಗೂ ಪ್ಲಾಸ್ಟಿಕ್ ಕವರ್ ಗಳು ಹೆದ್ದಾರಿಯ ಉದ್ದಕ್ಕೂ ರಾಶಿ ರಾಶಿಯಲ್ಲಿ ಕಂಡು ಬರುತ್ತಿವೆ.

ಈ ಹೆದ್ದಾರಿಯಲ್ಲಿ ವಸತಿ ಪ್ರದೇಶ ಕಡಿಮೆಯಿದ್ದು, ಜನರ ಓಡಾಟ ಇಲ್ಲದಿರುವ ಹಾಗೂ ಕೈಗಾರಿಕೆಗಳಿಗೆ ಬರುವ, ಹೆದ್ದಾರಿಯಲ್ಲಿ ಸಾಗುವ ವಾಹನಗಳು ಮಾತ್ರ ಸಂಚರಿಸುವ ಪ್ರದೇಶವಾಗಿದೆ. ಇಲ್ಲಿ ಯಾರು ಹೇಳುವವರು ಕೇಳುವವರು ಇಲ್ಲದ ಅನಾಥವಾಗಿರುವ ನಿರ್ಜನ ಪ್ರದೇಶವಾಗಿರುವುದರಿಂದ ಕೈಗಾರಿಕೆಯವರು ಹಾಗೂ ವಸತಿ ಸಮುಚ್ಚಯದವರು ತ್ಯಾಜ್ಯವನ್ನು ಎಸೆದು ಹೋಗುವುದಕ್ಕೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ ಎಂದು ದೂರಲಾಗಿದೆ.

ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕಂಬಳೀಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೊಸಕೋಟೆ ಕೈಗಾರಿಕೆ ಪ್ರದೇಶದ ಹಲವಾರು ಕೈಗಾರಿಕೆಗಳು ಇವೆ. ತಾಲ್ಲೂಕಿನಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿ ಆಗುವ ಪಂಚಾಯಿತಿಗಳಾಗಿದ್ದರೂ ಕಸ ಹಾಗೂ ಕೈಗಾರಿಕೆಗಳ ವಿಲೇವಾರಿಯ ಸರಿಯಾದ ನಿರ್ವಹಣೆ ಮಾಡುವಲ್ಲಿ ಹಾಗೂ ತ್ಯಾಜ್ಯ ಮುಕ್ತ ಪಂಚಾಯಿತಿ ಮಾಡುವ ಪ್ರಯತ್ನ ಮಾಡದಿರುವುದು ಅಧಿಕಾರಿಗಳ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಸಮೀಪದ ಗ್ರಾಮಸ್ಥರೊಬ್ಬರು ದೂರಿದ್ದಾರೆ.

‘ಯಾರಾದರೂ ವಾಹನಗಳಲ್ಲಿ ಕಸ ತಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದರೆ ಪೊಲೀಸ್ ಠಾಣೆಗೆ ದೂರು ಕೂಡಲು ಸಿಬ್ಬಂದಿಗೆ ತಿಳಿಸಿದ್ದೇನೆ, ಕಸದ ರಾಶಿ ಇದ್ದರೆ ಕೂಡಲೇ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕಂಬಳೀಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಣ್ಣ ಅವರು ತಿಳಿಸಿದರು.

ಸಂಬಂಧ ಪಟ್ಟ ಕೈಗಾರಿಗೆಗಳಿಗೆ ನೋಟಿಸ್ ನೀಡಲಾಗುವುದು, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕದ ಯೋಜನೆ ತಯಾರಿಸಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಗ್ರಾಮದಲ್ಲಿ ಸಂಗ್ರಹವಾಗುವ ಕಸವನ್ನು ಮಾತ್ರ ವಿಲೇವಾರಿ ಮಾಡುತ್ತೇವೆ ಎಂದು ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರ್ಮದಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT