ಮನೆಯಲ್ಲಿ ಗ್ರಾಪಂ ಕಚೇರಿಯಿಂದ ತೊಂದರೆ

7
ವೆಂಕಟಗಿರಿಕೋಟೆ ನಿವಾಸಿಗಳಿಂದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ದೂರು

ಮನೆಯಲ್ಲಿ ಗ್ರಾಪಂ ಕಚೇರಿಯಿಂದ ತೊಂದರೆ

Published:
Updated:
Prajavani

ವಿಜಯಪುರ: ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿಗೆ ಇದುವರೆಗೂ ಸ್ವಂತ ಕಟ್ಟಡವಿಲ್ಲದ ಕಾರಣದಿಂದ ಖಾಸಗಿ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ಪಡೆದುಕೊಳ್ಳಲಾಗಿದೆ. ಆದರೆ ವೃದ್ಧರು, ಅಂಗವಿಕಲರು ಪಂಚಾಯಿತಿಗೆ ಹೋಗಲು ಸಾಧ್ಯವಿಲ್ಲದಂತೆ ಆಗಿದ್ದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯ ನಿವಾಸಿ ಚಿನ್ನಪ್ಪ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದರೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇದುವರೆಗೂ ಭೂಮಿ ಒದಗಿಸಿಕೊಟ್ಟಿಲ್ಲ. ಅಂಗವಿಕಲರು ಯಾವುದೇ ಕೆಲಸಕ್ಕೆ ಹೋಗಬೇಕಾದರೂ ಬೇರೆಯವರ ಮೇಲೆ ಅವಲಂಬಿತರಾಗಬೇಕಾಗಿದೆ. ಪಂಚಾಯಿತಿ ಕಚೇರಿಯ ಕೆಳಗೆ ವಾಸದ ಮನೆಯಿದೆ. ನ್ಯಾಯಕ್ಕಾಗಿ ಹೋರಾಟ ಮಾಡುವಂತಿಲ್ಲ. ಕೆಳಗೆ ಹೆಚ್ಚಿನ ಜನಸಂದಣಿ ಇರುವಂತಿಲ್ಲ ಎಂದರು.

ಸ್ಥಳೀಯ ನಿವಾಸಿ ಮುನಿರಾಜು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವೆಂಕಟಗಿರಿಕೋಟೆ, ಹೊಸಹುಡ್ಯ, ಸಿಂಗವಾರ, ದೊಡ್ಡಸಾಗರಹಳ್ಳಿ, ಮುದುಗುರ್ಕಿ, ಹುರುಳುಗುರ್ಕಿ, ಗ್ರಾಮಗಳಿಂದ ನೂರಾರು ಜನರು ಬರುತ್ತಾರೆ ಎಂದರು.

ನ್ಯಾಯಕ್ಕಾಗಿ ಹೋರಾಟ ಮಾಡಲು ಜನರು ಸೇರಿದರೆ ಮನೆಯವರಿಗೆ ಅಡಚಣೆಯಾಗುತ್ತದೆ. ವಿನಾಕಾರಣ ಎಲ್ಲರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಪಂಚಾಯಿತಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಗೆ ಸೇರಿದ 6 ಹಳ್ಳಿಗಳ ಪೈಕಿ ವೆಂಕಟಗಿರಿಕೋಟೆ ಗ್ರಾಮ ಎರಡು ಭಾಗವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕೆಳಗೆ ಅರ್ಧ ಭಾಗ ಊರು ಇದೆ. ಉಳಿದ ಅರ್ಧಭಾಗದ ಊರು ಈಗ ನಡೆಯುತ್ತಿರುವ ಪಂಚಾಯಿತಿ ಕಟ್ಟಡದಿಂದ ಮೇಲ್ಭಾಗಕ್ಕಿದೆ.

ಉಳಿದೆಲ್ಲ ಊರುಗಳು ಇದೇ ಭಾಗಕ್ಕೆ ಇವೆ. ಈ ಮುಂಚೆ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿದ್ದಾರೆ. ಕೆಳಗಿನ ಊರಿನಲ್ಲಿರುವವರು ಇಲ್ಲೇ ಕಟ್ಟಡ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಉಳಿದವರೆಲ್ಲರೂ ಗುರುತಿಸಿದ ಜಾಗದಲ್ಲೆ ನಿರ್ಮಾಣ ಮಾಡಬೇಕು ಎಂದು ಪಟ್ಟು ಹಿಡಿದಿರುವುದರಿಂದ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದೆ ಎಂದು ವಿವರಿಸಿದರು.

ಈಗ ತಿಂಗಳಿಗೆ ನಾಲ್ಕು ಸಾವಿರ ಬಾಡಿಗೆ ಕೊಟ್ಟು ಈ ಕಟ್ಟಡ ಉಪಯೋಗ ಮಾಡುತ್ತಿದ್ದೇವೆ. ಅಂಗವಿಕಲರಿಗೆ ತೊಂದರೆಯಾಗುತ್ತಿರುವುದು ನಿಜ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ ಮಾತನಾಡಿ, ‘ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲಿಕ್ಕಾಗಿ ನಾವೂ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಗ್ರಾಮಸಭೆ ನಡೆಯುವಾಗ ಶಾಸಕರ ಗಮನಕ್ಕೆ ತಂದು ಹೊಸ ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನ ಮಾಡಿಸುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !