ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು, ಹಾಸನ, ಮಂಡ್ಯ ಜೆಡಿಎಸ್‌ನ 3 ಕಣ್ಣುಗಳು: ಬಿ.ಮುನೇಗೌಡ

ಪದಾಧಿಕಾರಿಗಳು ಭಾವನಾತ್ಮಕವಾಗಿಯು ಸಂಬಂಧಗಳನ್ನು ಗಟ್ಟಿಗೊಳ್ಳಿಸಿಕೊಳ್ಳಬೇಕು
Last Updated 2 ಏಪ್ರಿಲ್ 2019, 14:55 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ದೇಶದ ರಾಜಕೀಯ ದಿಕ್ಸೂಚಿಯನ್ನೇ ಬದಲಿಸಲಿದೆ. ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಉತ್ತಮ ಫಲಿತಾಂಶ ನೀಡಲಿದೆ’ ಎಂದು ಸಂಸತ್‌ ಸದಸ್ಯ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಹೇಳಿದರು.

ಮಂಗಳವಾರ ನಗರದ ಕನ್ನಡ ಜಾಗೃತ ಭನವದಲ್ಲಿ ನಡೆದ ಕಾಂಗ್ರೆಸ್‌-ಜೆಡಿಎಸ್‌ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಏಳು ತಾಲ್ಲೂಕುಗಳಲ್ಲಿ ಅಧಿಕಾರದಲ್ಲಿದ್ದಾರೆ. ಸ್ಥಳೀಯ ಮಟ್ಟದಿಂದಲು ಎರಡೂ ಪಕ್ಷದವರು ಒಟ್ಟಾಗಿಯೇ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್‌-ಕಾಂಗ್ರೆಸ್‌ ಪದಾಧಿಕಾರಿಗಳ ನಡುವೆ ಇದ್ದ ಎಲ್ಲ ಭಿನ್ನಾಭಿಪ್ರಾಯಗಳನ್ನು ಮಾತುಕತೆಗಳ ಮೂಲಕ ಪರಿಹರಿಸಲಾಗಿದೆ. ಎರಡೂ ಪಕ್ಷಗಳ ನಡುವೆ ಯಾವುದೇ ಅಸಮಧಾನ ಉಂಟಾಗದಂತೆ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಪದಾಧಿಕಾರಿಗಳು ಭಾವನಾತ್ಮಕವಾಗಿಯು ಸಂಬಂಧಗಳನ್ನು ಗಟ್ಟಿಗೊಳ್ಳಿಸಿಕೊಳ್ಳಬೇಕು’ ಎಂದರು.

ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ ‘ತುಮಕೂರು, ಹಾಸನ, ಮಂಡ್ಯ ಜೆಡಿಎಸ್‌ ಪಕ್ಷದ ಮೂರು ಕಣ್ಣುಗಳು ಇದ್ದಂತೆ. ಈ ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ ಪಕ್ಷದ ಶಾಸಕರು ಹಾಗೂ ಪಕ್ಷದ ಮುಖಂಡರು ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚನೆ ನೀಡಬೇಕು. ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಸುಗಮವಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಲು ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಅನಿವಾರ್ಯವಾಗಿದೆ. ಕಾರ್ಯಕರ್ತರು ಇದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು. ಸ್ಥಳೀಯ ಶಾಸಕರು ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಈ ಬಗ್ಗೆ ವೀರಪ್ಪ ಮೊಯಿಲಿ ಅವರ ಸಮ್ಮುಖದಲ್ಲಿ ಈಗಾಗಲೇ ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದರು.

ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ‘ದೇಶದಲ್ಲಿ ಜಾತ್ಯಾತೀತ ಪಕ್ಷಗಳು ಅಧಿಕಾರಕ್ಕೆ ಬರಬೇಕು. ಈ ದೃಷ್ಟಿಯಿಂದ ರಾಹುಲ್‌ಗಾಂಧಿ ಅವರು ಪ್ರಧಾನ ಮಂತ್ರಿಯಾಗಲು ಎಲ್ಲರು ಒಟ್ಟಾಗಿ ಶ್ರಮಿಸಬೇಕಿದೆ. ಬದಲಾಗಿರುವ ಸನ್ನಿವೇಶದಲ್ಲಿ ಪ್ರತಿಸ್ಪರ್ಧಿಗಳು ಒಟ್ಟಾಗಿ ಮುನ್ನಡೆಯುವ ಅನಿವಾರ್ಯ ಸ್ಥಿತಿ ಇದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್‌ ಮಾತನಾಡಿ ‘ಹೊಸಕೋಟೆ ತಾಲ್ಲೂಕಿನಲ್ಲಿ ಬಚ್ಚೇಗೌಡ ಅವರು ಶಾಸಕರಾಗಿದ್ದಾಗಿನ ಅಶಾಂತಿಯ ವಾತಾವರಣ ಈಗ ದೂರವಾಗಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ರಾಜ್ಯದಲ್ಲಿ ಮೈತ್ರಿ ಅನಿವಾರ್ಯವಾಗಿತ್ತು’ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ ‘ಕ್ಷೇತ್ರದಲ್ಲಿ ಮೈತ್ರಿ ಧರ್ಮವನ್ನು ಪಾಲಿಸುವ ಮೂಲಕ ಎರಡೂ ಪಕ್ಷವನ್ನು ಒಟ್ಟಾಗಿ ಕೊಂಡೊಯ್ಯಲಾಗುವುದು. ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ 100 ಕೋಟಿ ವೆಚ್ಚದ ಇಎಸ್‌ಐ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಖುಸ್ಥಾಪನೆಯಾಗಿ ಐದು ವರ್ಷಗಳು ಕಳೆದರು ಸಹ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಣ ನೀಡದೆ ತಡ ಮಾಡಿದೆ’ ಎಂದು ಅವರು ದೂರಿದರು.

‘ತಾಲ್ಲೂಕಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 207ರ ಕಾಮಗಾರಿಗೆ ಹಣ ನೀಡದೆ ತಡೆ ನೀಡಿದ್ದು, ಹೆದ್ದಾರಿ ಕಾಮಗಾರಿ ಸ್ಥಗಿತವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದರೆ ಈ ಎಲ್ಲ ಕೆಲಸಗಳು ಸುಗಮವಾಗಿ ನಡೆಯಲಿವೆ. ಕೋಮುವಾದಿಗಳನ್ನು ದೂರವಿಡಲು ಕ್ಷೇತ್ರದ ಮತದಾರರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂ.ವೀರಪ್ಪಮೊಯಿಲಿ ಅವರನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಮುನಿಶಾಮಯ್ಯ, ಮಾಜಿ ಶಾಸಕ ಎಂ.ವೆಂಕಟಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ, ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿ ರವಿ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಎಂ.ಬೈರೇಗೌಡ, ನಗರ ಅಧ್ಯಕ್ಷ ಕೆ.ಜಿ.ಅಶೋಕ್‌, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ತೂಬಗೆರೆ ಹೋಬಳಿ ಬ್ಲಾಕ್‌ ಅಧ್ಯಕ್ಷ ಎನ್‌.ರಂಗಪ್ಪ, ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇವತಿ ಅನಂತರಾಂ, ಜೆಡಿಎಸ್‌ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದೇವರಾಜಮ್ಮ, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್‌, ಜಿ.ಲಕ್ಷ್ಮೀಪತಿ, ಮುಖಂಡರಾದ ಟಿ.ಎನ್‌.ಪ್ರಭುದೇವ್‌, ತಿ.ರಂಗರಾಜು, ಎ.ನರಸಿಂಹಯ್ಯ, ಅಪ್ಪಕಾರನಹಳ್ಳಿ ಶ್ರೀನಿವಾಸ್‌, ಲಕ್ಷ್ಮೀನಾರಾಯಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT