ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ

7
ದೇವನಹಳ್ಳಿಯಲ್ಲಿ ಬರ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆ–ಮೇವಿನ ಬೀಜ ವಿತರಣೆ ಮಾಹಿತಿ

ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ

Published:
Updated:
Prajavani

ದೇವನಹಳ್ಳಿ: ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಬರ ನಿರ್ವಹಣೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮೇವಿನ ದಾಸ್ತಾನು ಕುರಿತು ಜಿಲ್ಲಾ ಪಶು ಇಲಾಖೆ ಅಧಿಕಾರಿ ಜಯರಾಮ್ ಮಾತನಾಡಿ, ‘ಬರ ನಿರ್ವಹಣೆಗಾಗಿ ಮಂಡ್ಯ, ಭದ್ರಾವತಿ, ಚಿತ್ತೂರು ಜಿಲ್ಲೆಗಳಲ್ಲಿ ಮೇವು ಖಾತರಿ ಇರುವ ಕಡೆ ನೋಡಿ ಬಂದಿದ್ದೇವೆ’ ಎಂದು ತಿಳಿಸಿದರು.

ಸಚಿವರು ಮಾತನಾಡಿ, ‘ಬರಗಾಲ ಘೋಷಣೆ ಮಾಡಿ ಎರಡು ತಿಂಗಳಿಂದ ಎಷ್ಟು ಬಾರಿ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದೇವೆ. ಮೇವು ಮುಂಜಾಗ್ರತೆಗಾಗಿ ಏನು ಮಾಡಿದ್ದೀರಾ ಎಂದರೆ ಏರಿಯಾ ನೋಡಿಕೊಂಡು ಬಂದಿದ್ದೇವೆ ಎನ್ನುತ್ತೀರಾ, ಪ್ರಶ್ನೆಗೂ ಉತ್ತರಕ್ಕೂ ತಲೆ ಅಲ್ಲಾಡಿಸುತ್ತೀರಾ, ನನ್ನ ಭಾಷೆ ಇವರಿಗೆ ಅರ್ಥ ಆಗಿಲ್ಲ. ವಸತಿ ಸಚಿವರೇ ನಿಮ್ಮ ಭಾಷೆಯಲ್ಲೆ ಹೇಳಿ’ ಎಂದು ಪಕ್ಕದಲ್ಲಿದ್ದ ಸಚಿವ ಎನ್. ನಾಗರಾಜ್ ಗೆ ಹೇಳಿದರು.

ನಂತರ ಮಾತನಾಡಿದ ನಾಗರಾಜ್, ‘ಭಾಷೆ ಅರ್ಥವಾಗುತ್ತೆ. ಇವರು ಕೆಲಸದ ಬಗ್ಗೆ ಅಸಡ್ಡೆ, ಸೂಕ್ತ ಮಾಹಿತಿ ತಂದಿಲ್ಲ’ ಎಂದು ದನಿಗೂಡಿಸಿದರು.

ಜಿಲ್ಲಾಧಿಕಾರಿ ಕರೀಗೌಡ, ಜಿಲ್ಲೆಯಲ್ಲಿ 1.86 ಲಕ್ಷ ಪಶುಗಳ ಪೈಕಿ 1.2 ಲಕ್ಷ ಮಿಶ್ರ ತಳಿಗಳಿವೆ. ಮೇವಿನ ಬೀಜದ ಪ್ರತಿ ಪ್ಯಾಕೆಟ್ 5 ಕೆ.ಜಿ ಯಂತೆ 40 ಸಾವಿರ ಪೈಕಿ 21 ಸಾವಿರ ಪ್ಯಾಕೆಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಎರಡು ತಿಂಗಳ ಹಿಂದೆ ಕಾಲುಬಾಯಿ ಜ್ವರದ ಸೊಂಕು ಕಾಣಿಸಿಕೊಂಡಿತ್ತು. ಈಗಿಲ್ಲ, ಹೊಸಕೋಟೆ ಮತ್ತು ದೇವನಹಳ್ಳಿ ತಾಲ್ಲೂಕಿನಲ್ಲಿ ಮೇವಿನ ಸಮಸ್ಯೆ ಹೆಚ್ಚಾಗಬಹುದು. ಇದರ ಬಗ್ಗೆ ಮುಂಜಾಗ್ರತೆ ವಹಿಸಲಾಗುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್. ಲತಾ ಕುಡಿಯುವ ನೀರಿನ ಬಗ್ಗೆ ಪ್ರಸ್ತಾಪಿಸಿ, ‘ಜಿಲ್ಲೆಯಲ್ಲಿ ಪ್ರಸ್ತುತ 12 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು ಟಾಸ್ಕ್ ಫೋಸ್ಕ್‌ ಅಡಿಯಲ್ಲಿ ಕೊರೆಯಿಸಲಾದ 10 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ್ಲ’ ಎಂದರು.

ಖಾಸಗಿ ಕೊಳವೆ ಬಾವಿಯಿಂದ ನೀರು ಖರೀದಿಸಲು ಪ್ರತಿ ತಿಂಗಳು ₹ 15 ಸಾವಿರ ನೀಡಲು ಅವಕಾಶವಿದ್ದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ರೈತರಿಂದ ಗುತ್ತಿಗೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ವಸತಿ ಸಚಿವ ಮಾತನಾಡಿ, ‘2016–17 ನೇ ಸಾಲಿನಲ್ಲಿ ಟ್ಯಾಂಕರ್ ಮೂಲಕ ಪೂರೈಕೆ ಮಾಡಿದ ಹಣ ನೀಡಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ, ಸರಿಯಾಗಿ ನಿರ್ವಹಣೆ ಮಾಡಿದ್ದರೆ ಗುತ್ತಿಗೆದಾರರು ಮುಂದೆ ಬರುತ್ತಿದ್ದರು, ಚೊಕ್ಕನಹಳ್ಳಿ ಗ್ರಾಮದಲ್ಲಿ 1,480 ಅಡಿ ಕೊರೆದರೂ ನೀರು ಸಿಕ್ಕಿಲ್ಲ’ ಎಂದು ಹೇಳಿದರು.

ಕೃಷ್ಣ ಬೈರೇಗೌಡ ಮಾತನಾಡಿ ತಹಶೀಲ್ದಾರ್‌ಗೆ ಪ್ರಗತಿ ಮಾಹಿತಿ ಕೇಳಿದರು. ಆಗ ಮಾಹಿತಿ ನೀಡಲು ಅವರು ತಡಬಡಾಯಿಸಿದರು. ಆಗ ಮತ್ತೆ ‘ಅವರಿಗೂ ಭಾಷೆ ಅರ್ಥ ಆಗೋದಿಲ್ಲವಾ’ ಎಂದರು.

ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !