ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್, ಆಕ್ಸಿಜನ್ ಕೊರತೆ ಉಂಟಾಗದು: ಕೇಂದ್ರ ಸಚಿವ ಸದಾನಂದಗೌಡ

Last Updated 24 ಏಪ್ರಿಲ್ 2021, 5:09 IST
ಅಕ್ಷರ ಗಾತ್ರ

ಆನೇಕಲ್: ‘ಜೀವರಕ್ಷಕ ಔಷಧಿಗಳ ಕೊರತೆ ಉಂಟಾಗದಂತೆ ಮತ್ತು ಎಲ್ಲಾ ರಾಜ್ಯಗಳಿಗೂ ಸಮರ್ಪಕವಾಗಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ರೆಮ್‌ಡಿಸಿವಿರ್‌ ಉತ್ಪಾದನೆ ಮಾಡುವ ಕಂಪನಿಗಳು ಶೇ.70ರಷ್ಟನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಶೇ.30ರಷ್ಟನ್ನು ಕಂಪನಿಗಳಸಾಮಾನ್ಯ ಬೇಡಿಕೆಯನ್ನು ಈಡೇರಿಸಲು ಬಳಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಅವರು ತಾಲ್ಲೂಕಿನ ಜಿಗಣಿಯ ಮೈಲಾನ್‌ ಫಾರ್ಮ ಕಂಪನಿಗೆ ಭೇಟಿ ನೀಡಿ ರೆಮ್‌ಡಿಸಿವಿರ್‌ ಔಷಧಿಗಳ ಉತ್ಪಾದನೆ ಮತ್ತು ವಿತರಣೆಯ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.

ಮೈಲಾನ್‌ ಫಾರ್ಮ ಕಂಪನಿಯು ಬಳಸಿಕೊಳ್ಳುವ ಶೇ.30ರಷ್ಟು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸ್ವಲ್ಪ ಭಾಗವನ್ನು ಪೂರೈಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ. ಕಂಪನಿಯು ಬಹುತೇಕ ಒಪ್ಪಿಕೊಂಡಿದ್ದು ಇದರಿಂದ ಸ್ಥಳೀಯವಾಗಿ ಹೆಚ್ಚುವರಿ ಜೀವ ರಕ್ಷಕ ಔಷಧಿ ದೊರೆಯುತ್ತದೆ. ಮೈಲಾನ್‌ ಸೇರಿದಂತೆ ಏಳು ಕಂಪನಿಗಳು ಜೀವ ರಕ್ಷಕ ಔಷಧಿ ರೆಮ್‌ಡಿಸಿವಿರ್‌ ಉತ್ಪಾದನೆ ಮಾಡುತ್ತವೆ. ಈ ಕಂಪನಿಗಳಿಂದಲೂ ರಾಜ್ಯಕ್ಕೆ ಹೆಚ್ಚುವರಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕದಲ್ಲಿ ಔಷಧಿಯ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ 25ಸಾವಿರ ವೈಯಲ್ಸ್‌ ರೆಮ್‌ಡಿಸಿವಿರ್‌ ಪೂರೈಕೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದೇಶ ಮಾಡಲಾಗಿದೆ. ರಾಜ್ಯಕ್ಕೆ ಕೇಂದ್ರದಿಂದ 50 ಸಾವಿರ ವೈಯಲ್ಸ್‌ ರೆಮ್‌ಡಿಸಿವಿರ್‌ ಹಂಚಿಕೆ ಮಾಡಲಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್‌ ಅವರು ತಿಳಿಸಿದಂತೆಕರ್ನಾಟಕಕ್ಕೆ 2 ಲಕ್ಷ ರೆಮ್‌ಡಿಸಿವಿರ್‌ ಬೇಡಿಕೆಯಿದೆ. ಇದನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆಯ ಮಾಹಿತಿಯಂತೆ ಮೇ 10ರ ವೇಳೆಗೆ ಕಂಪನಿಗಳಲ್ಲಿ ಎರಡು ಪಟ್ಟು ಹೆಚ್ಚುವರಿ ಉತ್ಪಾದನೆಯಾಗಲಿದೆ. ಈ ವೇಳೆಗೆ 25 ಲಕ್ಷ ವೈಯಲ್ಸ್‌ ರೆಮ್‌ಡಿಸಿವಿರ್‌ ಔಷಧಿ ದೊರೆಯಲಿದೆ. ಹಾಗಾಗಿ ದೇಶದಲ್ಲಿ ರೆಮ್‌ಡಿಸಿವಿರ್‌ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಜನರ ಜೀವ ಮುಖ್ಯ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳುಗರಿಷ್ಠ ಪ್ರಮಾಣದಲ್ಲಿ ಶ್ರಮ ಹಾಕಿ ಸೇವೆ ಮಾಡಲು ಬದ್ಧವಾಗಿವೆ ಎಂದರು.

ರಾಜ್ಯಕ್ಕೆ 419 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಬೇಡಿಕೆಯಿತ್ತು. ಬೇಡಿಕೆಯ ಪೂರೈಕೆಯಾಗಿದೆ. ವಿವಿಧ ಕಾರ್ಖಾನೆಗಳು ಆಕ್ಸಿಜನ್‌ ಉತ್ಪಾದನೆ ಮಾಡುತ್ತಿದ್ದು ಇದನ್ನು ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಬಳಕೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಲವಾರು ಕಂಪನಿಗಳು ಒಪ್ಪಿದ್ದು ಪೂರೈಕೆ ಮಾಡುತ್ತಿವೆ. ಸಂಕಷ್ಟದ ಸಮಯದಲ್ಲಿ ಜನರ ಪ್ರಾಣ ಉಳಿಸುವುದು ಅತ್ಯಂತ ಮುಖ್ಯವಾದುದ್ದು. ಹಾಗಾಗಿ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸಮರ್ಪಕವಾಗಿ ಔಷಧಿ ಮತ್ತು ಅವಶ್ಯಕ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಜೀವ ರಕ್ಷಕ ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ದೂರುಗಳಿವೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು, ಆರೋಗ್ಯ ಕಾರ್ಯದರ್ಶಿಗಳು, ಡ್ರಗ್‌ ಕಂಟ್ರೋಲರ್‌ ಆಫ್‌ ಇಂಡಿಯಾದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದ್ದು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹೆಚ್ಚು ಪೂರೈಕೆಯಾದಾಗ ಕಾಳಸಂತೆಯ ಸಮಸ್ಯೆ ಬರುವುದಿಲ್ಲ. ಹಾಗಾಗಿ ಅವಶ್ಯಕವಿರುವಷ್ಟು ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರಗಳು ಸಂಪೂರ್ಣ ಸಹಕಾರ ನೀಡಬೇಕು. ಕೊರೊನಾ ಮಹಾಮಾರಿಯನ್ನು ಓಡಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಸಂಸದ ಪಿ.ಸಿ.ಮೋಹನ್‌, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT