ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಚಿತ್ರರಂಗಕ್ಕೆ ಅನನ್ಯ ಕೊಡುಗೆ’

ರಕ್ತದಾನ ಶಿಬಿರ, ಯೋಧರಿಗೆ ನಮನ ಸಲ್ಲಿಸುವ ಮೂಲಕ ಡಾ. ರಾಜ್ ಸ್ಮರಣೆ
Last Updated 24 ಏಪ್ರಿಲ್ 2019, 15:27 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:‘ಯುವ ಜನತೆಗೆ ರಾಜ್‍ಕುಮಾರ್ ಆವರ ಬದುಕಿನ ಮೌಲ್ಯಗಳನ್ನು ಬಿಂಬಿಸುವ ಚಲನಚಿತ್ರಗಳನ್ನು ಪರಿಚಯಿಸಬೇಕಾದ ಅಗತ್ಯವಿದೆ’ ಎಂದು ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಹೇಳಿದರು.

ಶ್ರೀಗಂಗಾ, ಭಗತ್ ಸಿಂಗ್-ಚಂದ್ರಶೇಖರ್ ಆಜಾದ್‌ ಆಸ್ಪತ್ರೆ, ಖಾಸ್‍ಬಾಗ್ ವತಿಯಿಂದ ತಾಲ್ಲೂಕು ಶಿವರಾಜ್‍ಕುಮಾರ್ ಕನ್ನಡ ಸೇನಾ ಸಮಿತಿ ಸಹಯೋಗದಲ್ಲಿ ಡಾ.ರಾಜ್‍ಕುಮಾರ್ ಅವರ 91ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ರಕ್ತದಾನ ಹಾಗೂ ದೊಡ್ಡಬಳ್ಳಾಪುರ ಮೂಲದ ಯೋಧರ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ರಾಜ್ ಅವರ ಚಿತ್ರಗಳು ಕುಟುಂಬ ಸಮೇತರಾಗಿ ನೋಡಬಹುದಾಗಿದ್ದು, ಸಾಮಾಜಿಕ ಕಳಕಳಿಯನ್ನು ಒಳಗೊಂಡಿವೆ. ಕನ್ನಡಪರ ಹೋರಾಟಗಾರರಿಗೆ ರಾಜ್ ಸ್ಪೂರ್ತಿಯಾಗಿದ್ದರು. ದೊಡ್ಡಬಳ್ಳಾಪುರದೊಂದಿಗೆ ಅವಿನಭಾವ ಸಂಬಂಧ ಹೊಂದಿದ್ದ ಅವರು ನಿರ್ಮಾಪಕರನ್ನು ಅನ್ನದಾತರು ಎಂದು ಸಂಬೋಧಿಸುತ್ತಿದ್ದರು’ ಎಂದು ಸ್ಮರಿಸಿದರು.

ಕನ್ನಡ ಪಕ್ಷದ ಅಧ್ಯಕ್ಷ ಎಂ.ಸಂಜೀವ್‌ನಾಯಕ್ ಮಾತನಾಡಿ ‘ಬೆಂಗಳೂರಿನಲ್ಲಿ ತಮಿಳು ಪ್ರಾಬಲ್ಯ ಹೆಚ್ಚಾದಾಗ ಕನ್ನಡ ಹೋರಾಟಕ್ಕೆ ರಾಜ್ ಚಿತ್ರಗಳು ಹೊಸ ದಿಕ್ಸೂಚಿಯಾದವು’ ಎಂದರು.

ನಿವೃತ್ತ ಯೋಧ ಎಚ್.ಎಸ್.ಸೋಮೇಶ್ ಮಾತನಾಡಿ ‘ದೇಶಭಕ್ತಿ ಎನ್ನುವುದು ಎಲ್ಲರಲ್ಲಿಯೂ ಮೂಡಬೇಕಿದೆ. ಕನ್ನಡ ಚಿತ್ರರಂಗಕ್ಕೆ ರಾಜ್ ಅವರ ಕೊಡುಗೆ ಅನನ್ಯವಾಗಿದ್ದು, ಇಂತಹ ಮಹನೀಯರನ್ನು ಸ್ಮರಿಸುವ ಸಮಯದಲ್ಲಿ ಯೋಧರಿಗೆ ಗೌರವಾರ್ಪಣೆ ಮಾಡುತ್ತಿರುವುದು ಅಭಿನಂದನೀಯ’ ಎಂದರು.

ಡಾ.ರಮೇಶ್‌ಗೌಡ ಮಾತನಾಡಿ ‘ಕನ್ನಡ ಭಾಷೆಯ ಬಳಕೆಯನ್ನು ರಾಜ್ ಅವರಿಂದ ಕಲಿಯಬೇಕಿದ್ದು, ಇಂದಿನ ಚಿತ್ರರಂಗ ಹಾಗೂ ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಕನ್ನಡದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕನ್ನಡಿಗರ ಆರಾಧ್ಯ ದೈವ ಡಾ.ರಾಜ್‍ಕುಮಾರ್ ಜನ್ಮ ದಿನಾಚರಣೆಯಲ್ಲಿ ರಕ್ತದಾನ ಶಿಬಿರ ಹಾಗೂ ಯೋಧರಿಗೆ ನಮನ ಏರ್ಪಡಿಸಲಾಗುತ್ತಿದ್ದು, ಸಮಾಜ ಸೇವೆಯೊಂದಿಗೆ ರಾಜ್ ಅವರನ್ನು ಸ್ಮರಿಸಲಾಗುತ್ತಿದೆ’ ಎಂದರು.

ನಿವೃತ್ತ ಯೋಧರಾದ ರವಿಕುಮಾರ್, ಚಂದ್ರಶೇಖರ್, ಮಂಜುನಾಥ್, ನಾಗೇಶ್‌ಕುಮಾರ್ ಹಾಗೂ ಕುಟುಂಬದವರನ್ನು ಸನ್ಮಾನಿಸಲಾಯಿತು. ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮರಣ ಹೊಂದಿದವರಿಗೆ ಸಂತಾಪ ಸೂಚಿಸಲಾಯಿತು. ಶಿಬಿರದಲ್ಲಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಅಭಿನಂದನಾ ಪತ್ರಗಳೊಂದಿಗೆ ಕನ್ನಡ ಸಾಹಿತ್ಯ ಕೃತಿಗಳನ್ನು ನೀಡಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ವಿ.ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಡಾ.ಹುಲಿಕಲ್ ನಟರಾಜ್, ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸ್, ವೈದ್ಯೆ ಡಾ.ವಿಜಯಲಕ್ಷ್ಮೀ, ತಾಲ್ಲೂಕು ಶಿವರಾಜ್‍ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜೆ.ಆರ್.ರಮೇಶ್, ಉಪಾಧ್ಯಕ್ಷ ಜಿ.ರಾಮು, ಕರವೇ ಶಿವರಾಮೇಗೌಡ ಬಣದ ತಾಲ್ಲೂಕು ಅಧ್ಯಕ್ಷ ಮರುಳಾರಾಧ್ಯ, ಬಿಜೆಪಿ ಹಿರಿಯ ಮುಖಂಡ ಕೆ.ಬಿ.ಮುದ್ದಪ್ಪ, ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷೆ ಪ್ರಮೀಳಾ ಮಹದೇವ್, ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ತಾಲ್ಲೂಕು ಗೌರವ ಅಧ್ಯಕ್ಷ ಪು.ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT