ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಚ್ಚಾಣಿಕೆಯಾಗದ ನೂಲು, ಸರ್ಕಾರಕ್ಕೆ ಮನವಿ

15 ದಿನದಿಂದ ಮೋಡ ಮುಸುಕಿದ ವಾತಾವರಣದಿಂದ ಸಮಸ್ಯೆ
Last Updated 21 ಆಗಸ್ಟ್ 2019, 13:49 IST
ಅಕ್ಷರ ಗಾತ್ರ

ವಿಜಯಪುರ: ಹದಿನೈದು ದಿನದಿಂದ ಮೋಡ ಮುಸುಕಿದ ವಾತಾವರಣವಿರುವ ಕಾರಣ ರೈತರು ಬೆಳೆದ ರೇಷ್ಮೆಗೂಡಿನ ನೂಲು ಬಿಚ್ಚಾಣಿಕೆ ಸರಿಯಾಗಿ ಆಗದೆ ರೀಲರುಗಳು (ನೂಲು ಬಿಚ್ಚಾಣಿಕೆದಾರರು) ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ರೀಲರ್ ಸಲೀಂ ಹೇಳಿದರು.

ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಾತನಾಡಿದ ಅವರು, ‘ನಾವು ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳನ್ನು ನಂಬಿಕೊಂಡು ಜೀವನ ರೂಪಿಸಿಕೊಂಡು ಬಿಟ್ಟಿದ್ದೇವೆ. ಇದು ಬಿಟ್ಟರೆ ಬೇರೆ ಕಸುಬು ಗೊತ್ತಿಲ್ಲ. ಮಾರುಕಟ್ಟೆಗೆ ಬರುತ್ತಿರುವ ಗೂಡಿನಿಂದ ಸರಿಯಾಗಿ ನೂಲು ಬಿಚ್ಚಾಣಿಕೆ ಆಗುತ್ತಿಲ್ಲ. ಹರಾಜಿನಲ್ಲಿ ಭಾಗವಹಿಸಿ ಖರೀದಿ ಮಾಡದಿದ್ದರೆ ಬೇರೆ ವಿಧಿಯಿಲ್ಲ. ಬಿಸಿಲಿನ ವಾತಾವರಣವಿಲ್ಲದೆ ಬಿಚ್ಚಾಣಿಕೆ ಮಾಡಿರುವ ರೇಷ್ಮೆನೂಲನ್ನು ಹಾಗೇ ಇಟ್ಟಿಕೊಂಡಿದ್ದೇವೆ. ಮಾರಾಟ ಮಾಡೋಣವೆಂದರೆ ಖರೀದಿಸುವವರೂ ಇಲ್ಲವಾಗಿದ್ದಾರೆ’ ಎಂದರು.

‘ಒಂದು ಕೆ.ಜಿ.ರೇಷ್ಮೆ ನೂಲಿಗೆ ₹ 2,600 ರಿಂದ ₹ 3 ಸಾವಿರಕ್ಕೆ ಮಾರಾಟವಾಗುತ್ತಿದೆ. ಈ ದರಕ್ಕೆ ರೇಷ್ಮೆ ಮಾರಾಟ ಮಾಡಿದರೆ ನಾವು ನಷ್ಟ ಅನುಭವಿಸುತ್ತೇವೆ. ನಮ್ಮಿಂದ ರೇಷ್ಮೆ ಖರೀದಿ ಮಾಡಲಿಕ್ಕೆ ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ (ಕೆ.ಎಸ್.ಎಂ.ಬಿ.) ಮುಂದೆ ಬರುತ್ತಿಲ್ಲ. ಹಾಗಾಗಿ ಮದ್ಯವರ್ತಿಗಳ ಮೂಲಕ ಮಾರಾಟ ಮಾಡಿಕೊಳ್ಳುವ ಪರಿಸ್ಥಿತಿ ಇದೆ’ ಎಂದರು.

ರೀಲರ್ ಸಾದಿಕ್‌ ಪಾಷ ಮಾತನಾಡಿ, ರೀಲರುಗಳಿಗೆ ದುಡಿಮೆ ಬಂಡವಾಳ ಕೊಡುವುದಾಗಿ ಆಯುಕ್ತರು ಹೇಳಿದ್ದರು. ಇದುವರೆಗೂ ಒಂದು ರೂಪಾಯಿ ದುಡಿಮೆ ಬಂಡವಾಳ ಕೊಟ್ಟಿಲ್ಲ. ರೇಷ್ಮೆ ನೂಲಿಗೆ ಒಂದು ಯೂನಿಟ್‌ಗೆ ಮಹಿಳೆಯರಿಗೆ ₹ 75, ಪುರುಷರಿಗೆ ₹ 65 ಪರಿಶಿಷ್ಟ ಜಾತಿ, ಪಂಗಡದವರಿಗೆ ₹ 90 ಪ್ರೋತ್ಸಾಹಧನ ಕೊಡುತ್ತಿದ್ದರು. 2016-17 ನೇ ಸಾಲಿನವರೆಗೂ ಕೊಟ್ಟಿದ್ದಾರೆ. ನಂತರ ಕೊಟ್ಟಿಲ್ಲ. ನಾವು ಇಲಾಖೆ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಕೊಟ್ಟಂತೆ ನಮಗೂ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದರು.

‘ಕೆಲವೊಮ್ಮೆ ರೀಲರುಗಳ ಬಳಿಯಿರುವ ರೇಷ್ಮೆನೂಲು ಮಾರಾಟವಾಗದೆ ಇದ್ದಾಗ ಪುನಃ ಗೂಡು ಖರೀದಿಗಾಗಿ ಸಾಲ ಮಾಡಬೇಕಾಗಿದೆ. ಈಗ ಸಾಲ ಕೊಡುವವರೂ ಇಲ್ಲ. ಒಡವೆಗಳನ್ನು ಗಿರವಿ ಇಟ್ಟು ಬಂಡವಾಳ ಹೂಡುತ್ತಿದ್ದೆವು. ಈಗ ಋಣಮುಕ್ತ ಕಾಯ್ದೆ ಜಾರಿಗೆ ಬಂದ ನಂತರ ಹಣನೂ ಕೊಡ್ತಿಲ್ಲ, ಒಡವೆಗಳನ್ನು ಗಿರವಿಗೂ ಇಟ್ಟುಕೊಳ್ಳುತ್ತಿಲ್ಲ. ಮುಂದೇನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ’ ಎಂದು ಅವರು ಹೇಳಿದರು.

‘ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನೂಲು ಬಿಚ್ಚಾಣಿಕೆದಾರರಿಗೆ ಅಗತ್ಯವಾಗಿರುವ ದುಡಿಮೆ ಬಂಡವಾಳ ಹಾಗೂ ಪ್ರೋತ್ಸಾಹಧನ ಬಿಡುಗಡೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದೇವೆ’ ಎಂದರು.

ರೈತ ವಿಜಯಕುಮಾರ್ ಮಾತನಾಡಿ, ‘ನಾವು ಕುಪ್ಪಂನಿಂದ ಗೂಡು ತೆಗೆದುಕೊಂಡು ಬಂದಿದ್ದೇವೆ. ನೀರಿಲ್ಲದೆ ಸಾಕಷ್ಟು ಸಮಸ್ಯೆ ಅನುಭವಿಸಿಕೊಂಡು ಗೂಡು ಬೆಳೆದಿದ್ದೇವೆ. ಇಲ್ಲಿಗೆ ಬಂದರೆ ₹ 325 ಕ್ಕೆ ಮಾರಾಟವಾಗಿದೆ. ನಾವು ಒಂದು ಕೆ.ಜಿ. ಗೂಡು ಬೆಳೆಯಲಿಕ್ಕೆ ಈಗಿನ ಬೆಲೆಗಳಲ್ಲಿ ₹ 400 ಖರ್ಚು ಬರುತ್ತಿದೆ. ಈ ಬೆಲೆಯಲ್ಲಿ ನಮಗೆ ನಷ್ಟವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT