ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಗಾಳಿ ಮಳೆಗೆ ಹಾರಿ ಹೋದ ಮೇಲ್ಚಾವಣಿ, 10ಕ್ಕೂ ಹೆಚ್ಚು ಮನೆಗೆ ಹಾನಿ

Last Updated 1 ಮೇ 2019, 13:25 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಗಾಳಿ, ಮಳೆಯಿಂದಾಗಿ ಹತ್ತಕ್ಕೂ ಹೆಚ್ಚಿನ ಮನೆಗಳ ಮೇಲ್ಚಾವಣಿಯ ಸಿಮೆಂಟ್‌ ಶೀಟ್‌ಗಳು ಹಾರಿ ಹೋಗಿವೆ. ಬಾಳೆ, ಮಾವಿನ ತೋಟಗಳೂ ಹಾಳಾಗಿವೆ.

ಹೊನ್ನಾಘಟ್ಟ ಗ್ರಾಮದಲ್ಲಿ ನಾರಾಯಣಪ್ಪ ಎಂಬುವವರ ಹಸು ಸಾಕಾಣಿಕೆ ಮನೆಯ ಸಿಮೆಂಟ್‌ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಕಸಬಾ ಹೋಬಳಿಯ ಹೊಸಹಳ್ಳಿ ಗ್ರಾಮದ ಸುವರ್ಣಮ್ಮ ಎಂಬುವವರ ವಿದ್ಯುತ್‌ ಮಗ್ಗದ ಮನೆ ಮೇಲಿನ ಸಿಮೆಂಟ್‌ ಶೀಟ್‌ಗಳು ಹಾರಿ ಹೋಗಿವೆ. ಮಗ್ಗ, ರೇಷ್ಮೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಸಮೀಪದ ಮಾದೇಗೌಡರ ನಾಲ್ಕು ಎಕರೆ ಪ್ರದೇಶದಲ್ಲಿನ ಮಾವಿನ ತೋಟದಲ್ಲಿ ಬಿದ್ದು ಹಾಗೂ ಗಾಳಿಯಿಂದಾಗಿ ಮಾವಿನ ಫಸಲು ನೆಲಕಚ್ಚಿದೆ. ಕುರುಬರಹಳ್ಳಿಯಲ್ಲಿ ತಿಪ್ಪಣ್ಣ ಎಂಬುವವರಿಗೆ ಸೇರಿದ್ದ ಫಸಲಿಗೆ ಬಂದಿದ್ದ ಬಾಳೆ ಗಿಡಗಳು ಮುರಿದು ಹೋಗಿವೆ. ಇದಲ್ಲದೆ ಸಾಸಲು ಹೋಬಳಿಯಲ್ಲೂ ಗಾಳಿ, ಮಳೆಗೆ ವಿದ್ಯುತ್‌ ಕಂಬಗಳು ಮುರಿದು ಬಿದ್ದ ಪರಿಣಾಮ ಸಾಸಲು ಹೋಬಳಿಯ ಗ್ರಾಮಗಳು ಇಡೀ ರಾತ್ರಿ ವಿದ್ಯುತ್‌ ಇಲ್ಲದೆ ಕತ್ತಲಿನಲ್ಲಿ ಜನ ಕಾಲ ಕಳೆಯುವಂತಾಗಿತ್ತು.

ಮಳೆ, ಗಾಳಿಯಿಂದ ಹಾನಿ ಸಂಭವಿಸಿರುವ ಕುರುಬರಹಳ್ಳಿ, ಹೊಸಹಳ್ಳಿ ಗ್ರಾಮಗಳಿಗೆ ಶಾಸಕ ಟಿ.ವೆಂಕಟರಮಣಯ್ಯ ಅವರು ಬುಧವಾರ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಅಲ್ಲದೆ ಸರ್ಕಾರದಿಂದ ಅಗತ್ಯ ನೆರವು ಕೊಡಿಸುವ ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಹಸನ್‌ಘಟ್ಟ ರವಿ, ಮುಖಂಡರಾದ ಕೆಂಪಣ್ಣ, ನಟರಾಜ್‌ ಸೇರಿದಂತೆ ಹಲವಾರು ಜನ ಸ್ಥಳೀಯ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT