ಶನಿವಾರ, ಸೆಪ್ಟೆಂಬರ್ 21, 2019
21 °C
ದೇವನಹಳ್ಳಿ-ಕೋಲಾರ ಮಾರ್ಗ ಮೇಲ್ದರ್ಜೆಗೆ

ರಸ್ತೆ ಚತುಷ್ಪಥ ಕಾಮಗಾರಿಗೆ ಒತ್ತಾಯ

Published:
Updated:
Prajavani

ವಿಜಯಪುರ: ದೇವನಹಳ್ಳಿಯಿಂದ ವಿಜಯಪುರದ ಮಾರ್ಗವಾಗಿ ಕೋಲಾರದ ಕಡೆಗೆ ಸಂಚರಿಸುವ ಮುಖ್ಯರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಕಾಂಗ್ರೆಸ್ ನಾಯಕ ಆರ್.ಸಿ.ಮಂಜುನಾಥ್ ಒತ್ತಾಯಿಸಿದ್ದಾರೆ.

ಇಲ್ಲಿ ಮಾತನಾಡಿದ ಅವರು, ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ ನಂತರ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇಲ್ಲಿನ ದರ್ಗಾ ಸಮೀಪದ ರಸ್ತೆಯಂತೂ ಅಪಘಾತ ವಲಯವಾಗಿಬಿಟ್ಟಿದೆ. ವಾರದಲ್ಲಿ ಎರಡರಿಂದ ಮೂರು ಅಪಘಾತಗಳು ಸಂಭವಿಸುತ್ತವೆ. ದೇವನಹಳ್ಳಿ ರಸ್ತೆಯುದ್ಧಕ್ಕೂ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿರುವ ಸ್ಥಿತಿ ಬಂದಿದೆ.‌

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಚತುಷ್ಪಥವಾಗಿಸಲು ₹ 149 ಕೋಟಿ ಅನುದಾನ ಮೀಸಲಿಟ್ಟು ಟೆಂಡರ್ ಕೂಡಾ ಆಗಿತ್ತು. ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಭೈರೇಗೌಡ ಅವರು ಕಾಮಗಾರಿ ಆರಂಭಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದರು. ಆದರೂ ಕಾಮಗಾರಿ ಆರಂಭಗೊಳ್ಳಲಿಲ್ಲ. ಇದಕ್ಕೆ ಮೂಲ ಕಾರಣವೇನು ಎನ್ನುವ ಕುರಿತು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಬೇಕು. ಕೂಡಲೇ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ಅಗಲೀಕರಣ ಮಾಡಲಿಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮುಖಂಡ ರಾಮಕೃಷ್ಣಪ್ಪ ಮಾತನಾಡಿ, ‘ರಸ್ತೆ ಅಗಲೀಕರಣ ಮಾಡಬೇಕು ಎಂದು ಲೋಕೋಪಯೋಗಿ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ ಅವರಿಗೆ ಮೂರು ಬಾರಿ ಮನವಿ ಕೊಟ್ಟಿದ್ದೆವು. ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ ರಸ್ತೆಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಟೆಂಡರ್ ಆದ ನಂತರ ಕಾಮಗಾರಿ ಆಗದಿದ್ದ ಮೇಲೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ ಎನ್ನುವುದರ ಕುರಿತು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ‘ಈ ಕುರಿತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ್ ಪ್ರತಿಕ್ರಿಯಿಸಿ, ‘ದೇವನಹಳ್ಳಿ-ಕೋಲಾರ ರಸ್ತೆಯನ್ನು ಚತುಷ್ಪಥ ರಸ್ತೆಯನ್ನು ಮಾಡಲು ಒಬ್ಬರಿಗೆ ಟೆಂಡರು ವಹಿಸಲಾಗಿತ್ತು. ಅವರು ಇಎಂಡಿ ಮೊತ್ತ ₹ 7 ಕೋಟಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಆ ಟೆಂಡರು ರದ್ದುಪಡಿಸಲಾಗಿದೆ. ಈಗ ಆ ಕಾಮಗಾರಿಯನ್ನು ರಾಜ್ಯ ಹೆದ್ದಾರಿ ಯೋಜನಾ ಪ್ರಾಧಿಕಾರದವರಿಗೆ ವಹಿಸಲಾಗಿದೆ’ ಎಂದರು.

Post Comments (+)