ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ.ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸ್ಸಿಗೆ ಒತ್ತಾಯ

Last Updated 6 ಸೆಪ್ಟೆಂಬರ್ 2019, 13:24 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಮಾದಿಗ ಸಮುದಾಯದ ಒಳ ಮೀಸಲಾತಿಗಾಗಿ ನ್ಯಾ.ಎ.ಜೆ ಸದಾಶಿವ ಅವರು ರಾಜ್ಯಕ್ಕೆ ಶಿಫಾರಸು ಮಾಡಿರುವ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಮಾದಿಗ ದಂಡೋರ ಜಿಲ್ಲಾ ಘಟಕ ಅಧ್ಯಕ್ಷ ಜಿ.ಮಾರಪ್ಪ ಒತ್ತಾಯಿಸಿದರು.‌

ಇಲ್ಲಿನ ಪ್ರವಾಸಿ ಮಂದಿರಲ್ಲಿ ಮಾದಿಗ ದಂಡೋರ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಮಾದಿಗ ಸಮುದಾಯದ ಹದಿನೈದು ವರ್ಷಗಳ ಹೋರಾಟದ ಫಲವಾಗಿ ಮೊದಲ ಬಾರಿ ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ಸಮೀಕ್ಷೆ ನಡೆಸಿ ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಜನಸಂಖ್ಯೆ ಕುರಿತು ಸಮಗ್ರ ವರದಿ ನೀಡುವಂತೆ ನ್ಯಾ.ಎ.ಜೆ. ಸದಾಶಿವರನ್ನು ನೇಮಕ ಮಾಡಿದ್ದರು. ಪ್ರಸ್ತುತ ವರದಿ ನೀಡಿದ ನಂತರ ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ವರದಿ ಕೇಂದ್ರಕ್ಕೆ ಶಿಫಾರಸು ಮಾಡಲು ವಿಫಲವಾಗಿವೆ’ ಎಂದು ದೂರಿದರು.

‘ಯಡಿಯೂರಪ್ಪ ಅವಧಿಯಲ್ಲಿ ಡಾ.ಬಾಬು ಜಗಜೀವನರಾಮ್ ಭವನ, ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ತಲೆ ಎತ್ತಿವೆ. ಪರಿಶಿಷ್ಟರಿಗೆ ಆನೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಬೇಕು’ ಎಂದು ಆಗ್ರಹಿಸಿದರು.

ಮಾದಿಗ ದಂಡೋರ ಪ್ರಚಾರ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ‘ಬಿಜೆಪಿ ಆಡಳಿತದಲ್ಲಿ ಪ್ರಸ್ತುತ ಮಾದಿಗ ಸಮುದಾಯಕ್ಕೆ ಪ್ರಮುಖ ಖಾತೆಯನ್ನು ನೀಡಲಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ. ಪ್ರಸ್ತುತ ರಾಜ್ಯ ಸರ್ಕಾರ ವರದಿಯನ್ನು ಸ್ವೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ತಿರಸ್ಕರಿಸಿದ್ದೇವೆ’ ಎಂದು ಘೊಷಣೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಾದಿಗ ಸಮುದಾಯದಿಂದ ಬಿಜೆಪಿಯಿಂದ ಐದು ಶಾಸಕರು ಆಯ್ಕೆಗೊಂಡಿದ್ದಾರೆ. ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಕು. ರಾಜ್ಯದಲ್ಲಿ ಬಿಜೆಪಿಯು ಮಾದಿಗ ಸಮುದಾಯಕ್ಕೆ ಈವರೆಗೆ ಅಧ್ಯಕ್ಷ ಸ್ಥಾನ ನೀಡಿಲ್ಲ. ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾದಿಗ ಸಮುದಾಯವನ್ನು ಪರಿಗಣಿಸಬೇಕು. ರಾಜ್ಯದಲ್ಲಿ ಆಯ್ಕೆಯಾಗಿರುವ ಮಾದಿಗ ಸಮುದಾಯದ ಶಾಸಕರು, ಸಂಸದರು ಮತ್ತು ಸಚಿವರನ್ನು ಒಗ್ಗೂಡಿಸಿ ದೇವನಹಳ್ಳಿಯಲ್ಲಿ ಸಮಾವೇಶ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಸ್ವಾಮಿ, ಮಾದಿಗ ದಂಡೋರ ತಾಲ್ಲೂಕು ಘಟಕ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್.ರಾಜಣ್ಣ ,ಪ್ರಧಾನ ಕಾರ್ಯದರ್ಶಿ ಮುನಿರಾಜು, ವಿಜಯಪುರ ಹೋಬಳಿ ಘಟಕ ಅಧ್ಯಕ್ಷ ಮಾರಪ್ಪ, ತಾಲ್ಲೂಕು ಘಟಕ ಕಾರ್ಯದರ್ಶಿ ಕುಮಾರ್, ಮುಖಂಡರಾದ ಮ್ಯಾಥ್ಯೂ ಮುನಿಯಪ್ಪ, ವೇಣುಗೋಪಾಲ್, ಮುನಿಯಪ್ಪ, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT