ಭಾನುವಾರ, ಜನವರಿ 26, 2020
31 °C

ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಎಲ್ಲ ಸಮುದಾಯಗಳೊಂದಿಗೆ ವಿಶ್ವಾಸದಿಂದ ನಡೆದುಕೊಂಡ ಹೋಗುವ ಮೂಲಕ ಸಮಾಜದೊಂದಿಗೆ ಸೌಹಾರ್ದ ಬೆಳೆಸಿಕೊಂಡು ಸಂಘಟನೆಯನ್ನು ಒಗ್ಗಟ್ಟಿನಿಂದ ಬಲ ಪಡಿಸಿದರೆ ಅಭಿವೃದ್ಧಿ ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್‌.ವೆಂಕಟನಾರಾಯಣ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಗಾಯತ್ರಿ ವಿಪ್ರ ವೃಂದದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಘ ಸಂಸ್ಥೆಗಳು ಚಟುವಟಿಕೆಗಳ ಮೂಲಕ ಜೀವಂತವಾಗಿರಬೇಕು. ಇಲ್ಲವಾದಲ್ಲಿ ಕೇವಲ ದಾಖಲೆಗಳಿಗೆ ಸಂಘ ಸಂಸ್ಥೆಗಳನ್ನು ಸ್ಥಾಪಿಸಬಾರದು. ರಾಜ್ಯದಲ್ಲಿ 700ಕ್ಕೂ ಹೆಚ್ಚು ಸಂಘಗಳಿವೆ. ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿವೆ. ಬ್ರಾಹ್ಮಣ ಸಮಾಜದ ಅಭಿವೃದ್ಧಿಗಾಗಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಬೇಕಾದ ಅವಶ್ಯಕತೆಯಿದೆ ಎಂದು ಒತ್ತಾಯಿಸಿದರು.

ಸಮುದಾಯವು ಪ್ರಸ್ತುತ ಕಾಲಘಟ್ಟದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗಾಗಿ ತೆಲಂಗಾಣ, ಆಂಧ್ರಪ್ರದೇಶದ ಮಾದರಿಯಲ್ಲಿ ಪ್ರತ್ಯೇಕ ಮಂಡಳಿಯನ್ನು ಕರ್ನಾಟದಲ್ಲಿ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚೆ ಮಾಡಲಾಗುತ್ತಿದೆ ಎಂದರು.

ಸಂಸ್ಕೃತ ವಿದ್ವಾನ್‌ ಕೃಷ್ಣರಾಜ್‌ ಕುತ್ಪಾಡಿ ಮಾತನಾಡಿ, ‘ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಸಂಪ್ರದಾಯ, ಆಚರಣೆಗಳು, ಪರಂಪರೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಸಂಘಗಳು, ಪೋಷಕರು ಮಾಡಬೇಕು. ಇಲ್ಲವಾದಲ್ಲಿ ನಮ್ಮ ಪರಂಪರೆ ನಾಶವಾಗುತ್ತದೆ. ಮುಂದಿನ ಪೀಳಿಗೆಗೆ ಪರಂಪರೆ ಸಾಗಿಬರಲು ಅದರ ಅರಿವು ಮೂಡಿಸುವ ಅವಶ್ಯಕತೆಯಿದೆ’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು. ಸಂಘದ ವತಿಯಿಂದ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.

ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷ ಲಕ್ಷ್ಮೀಕಾಂತ, ಕಾರ್ಯದರ್ಶಿ ರಾಮಪ್ರಸಾದ್, ಗಾಯತ್ರಿ ವಿಪ್ರ ವೃಂದದ ಅಧ್ಯಕ್ಷ ಪಿ.ಕೃಷ್ಣಮೂರ್ತಿ, ಗೌರವ ಅಧ್ಯಕ್ಷ ಸೋಮಶೇಖರ್‌ ರಾವ್‌, ಕಾರ್ಯದರ್ಶಿ ಗುರುರಾಜ್‌ ಕಳ್ಳಿಹಾಲ್, ಖಜಾಂಚಿ ದತ್ತಾತ್ತ್ರೇಯ ನಾಡಿಗೇರ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್‌ ಪಟಾಪಟ್‌, ಮುಖಂಡರಾದ ರವಿ, ವೆಂಕಟೇಶ್‌ ಕುಲಕರ್ಣಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು