ಪ್ಲಾಸ್ಟಿಕ್‌ ಬಳಕೆಗೆ ಆಕ್ಷೇಪ, ದಂಡ

7
ಜಿಲ್ಲಾಧಿಕಾರಿ ಕರೀಗೌಡ ನೇತೃತ್ವದ ತಂಡ ವಿವಿಧೆಡೆ ಭೇಟಿ

ಪ್ಲಾಸ್ಟಿಕ್‌ ಬಳಕೆಗೆ ಆಕ್ಷೇಪ, ದಂಡ

Published:
Updated:
Deccan Herald

ದೊಡ್ಡಬಳ್ಳಾಪುರ: ಜಿಲ್ಲಾಧಿಕಾರಿ ಕರೀಗೌಡ ನೇತೃತ್ವದಲ್ಲಿ ತಂಡವು ಮಂಗಳವಾರ ನಗರದ ವಿವಿಧ ಹೋಟೆಲ್ ಹಾಗೂ ವಾರ್ಡ್ ಗಳಿಗೆ ಭೇಟಿ ನೀಡಿ ಕಸ ವಿಲೇವಾರಿ, ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ಕುರಿತು ಪರಿಶೀಲನೆ ನಡೆಸಿತು.

ಬೆಳಿಗ್ಗೆ 5.30ಕ್ಕೆ ನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಪ್ಲಾಸ್ಟಿಕ್ ಪೇಪರ್ ಬಳಸುತ್ತಿರುವ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಹೋಟೆಲ್ ಗಳಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸದೆ ಇರುವರಿಗೆ ದಂಡ ವಿಧಿಸಿದರು.

ಕೆಲ ಸಾರ್ವಜನಿಕರು ಹಾಗೂ ಮಾಲೀಕರು ’ನಾವು ಕಸವನ್ನು ವಿಂಗಡಣೆ ಮಾಡಿ ನೀಡಿದರೂ ನಗರಸಭೆಯವರು ಎಲ್ಲ ಕಸವನ್ನು ಒಂದೇ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಾರೆ. ನಾವು ಪ್ರತ್ಯೇಕ ಮಾಡಿಕೊಟ್ಟರೂ ಪ್ರಯೋಜನ ಇಲ್ಲದಾಗುತ್ತಿದೆ’ ಎಂದು ದೂರಿದರು.

ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ನಗರಸಭೆ ಪರಿಸರ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಉತ್ತರಿಸಲಾಗದೆ ತಬ್ಬಿಬ್ಬಾದರು. ಹಸಿ ಹಾಗೂ ಒಣ ಕಸ ಸಂಗ್ರಹಣೆಯಲ್ಲಿ ಎಲ್ಲರ ಜವಾಬ್ದಾರಿ ಮುಖ್ಯವಾಗಿದೆ ಎಂದರು.

ಎರಡು ರೀತಿಯ ಕಸವನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಿ ಸಾಗಾಣಿಕೆ ಮಾಡಬೇಕು. ಕಸ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂದಿನಿ ಹಾಲು ಬಳಸಿ: ಪೆಟ್ಟಿಗೆ ಅಂಗಡಿಯಲ್ಲಿನ ಚಹಾ ಹೋಟೆಲ್ ಗಳಿಂದ ಮೊದಲುಗೊಂಡು ದೊಡ್ಡ ಹೋಟೆಲ್ ಗಳವರೆಗೆ ಎಲ್ಲ ಕಡೆಗೂ ಭೇಟಿ ನೀಡಿದ ಜಿಲ್ಲಾಧಿಕಾರಿ ತಿಂಡಿ, ಚಹಾ ಮಾಡುವುದನ್ನು ಪರಿಶೀಲನೆ ನಡೆಸಿದರು. ಅಂಗಡಿಗಳ ಮಾಲೀಕರಿಗೆ ನಂದಿನಿ ಹಾಲು ಬಳಕೆ ಮಾಡುವಂತೆ ಸಲಹೆ ನೀಡಿದರು.

ಗಡಿ ಗುರುತಿಸಲು ಸೂಚನೆ: ಕರೇನಹಳ್ಳಿ ಭಾಗದ ಪ್ರದೇಶ ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಎರಡೂ ಕಡೆಗೂ ಸೇರ್ಪಡೆಯಾಗಿದೆ. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ, ನಾಗರಿಕರಿಗೆ ಸೌಲಭ್ಯಗಳನ್ನು ನೀಡಲು ತೊಂದರೆಯಾಗಿದೆ. ಈ ಬಗ್ಗೆ ಸೂಕ್ತ ಗಡಿ ಗುರುತಿಸುವಿಕೆ ಮಾಡಬೇಕು ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

ಇದಕ್ಕೆ ಸ್ಪಂದಿಸಿದ ಅವರು, ನಗರಸಭೆ ಹಾಗೂ ತಾಲ್ಲೂಕು ಕಚೇರಿಯಲ್ಲಿನ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಗಡಿ ಗುರುತಿಸಿ ನೀಡಿದರೆ ಅಧಿಕೃತ ಆದೇಶ ಮಾಡಲಾಗುವುದು. ಇದರಿಂದ ಎಲ್ಲ ಗೊಂದಲಗಳು ಪರಿಹಾರವಾಗಲಿವೆ ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಭುದೇವ್, ಪೌರಾಯುಕ್ತ ಆರ್. ಮಂಜುನಾಥ್, ಕಾರ್ಯಾಪಾಲಕ ಎಂಜಿನಿಯರ್ ಷೇಕ್ ಫಿರೋಜ್, ನಗರಸಭೆ ಸದಸ್ಯ ವಡ್ಡರಹಳ್ಳಿ ರವಿ, ಪಿ.ಸಿ. ಲಕ್ಷ್ಮೀನಾರಾಯಣ್, ಶಿವಕುಮಾರ್, ಎಸ್.ಎ. ಭಾಸ್ಕರ್, ನಾಮಿನಿ ಸದಸ್ಯ ಅಂಜನಮೂರ್ತಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !