ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ರಾಮರಾಜ್ಯ ನಿರ್ಮಾಣ: ಎಂ.ಟಿ.ಬಿ. ನಾಗರಾಜ್‌

ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್‌ ಅಭಿಮತ
Last Updated 16 ಮಾರ್ಚ್ 2023, 6:59 IST
ಅಕ್ಷರ ಗಾತ್ರ

ಹೊಸಕೋಟೆ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವವೇ ಮೆಚ್ಚುವಂತಹ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಮರಾಜ್ಯ ನಿರ್ಮಾಣ ಮೋದಿ ಅವರಿಂದ ಮಾತ್ರ ಸಾಧ್ಯ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್‌ ತಿಳಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡಘಟ್ಟಿಗನಬ್ಬೆ ಗ್ರಾ.ಪಂ. ವ್ಯಾಪ್ತಿಯ ಚೀಮಂಡಹಳ್ಳಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಿಜೆಪಿ ತನ್ನದೇ ಆದ ತತ್ವ, ಸಿದ್ಧಾಂತ ಹೊಂದಿದೆ. ನಿಷ್ಠಾವಂತ ತಳಮಟ್ಟದ ಕಾರ್ಯಕರ್ತರಿಗೂ ರಾಜಕೀಯ ಸ್ಥಾನಮಾನ ನೀಡುವ ಮೂಲಕ ಉತ್ತಮ ಅವಕಾಶ ಕಲ್ಪಿಸಿ ಕೊಡುತ್ತಿದೆ. ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದೇ ಮೋದಿ ಅವರ ಸಂಕಲ್ಪ. ಅವರ ಪ್ರೇರಣೆಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ ಎಂದರು.

2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಲು, ಗೆಲುವಿಗೆ ಪಕ್ಷವನ್ನು ಬಲಗೊಳಿಸಲು ಬೂತ್‌ ಮಟ್ಟದಲ್ಲಿ ಸಂಘಟನೆಯಲ್ಲಿ ತೊಡಗಬೇಕು. ಬೆಂಬಲಿತ ಅಭ್ಯರ್ಥಿಗಳು ಅತ್ಯಧಿಕ ಮತ ಗಳಿಸಲು ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗೊತ್ತಿ ಶ್ರಮಿಸಬೇಕು ಎಂದು
ಹೇಳಿದರು.

ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌ ಮಾತನಾಡಿ, ಹೊಸಕೋಟೆ ಕ್ಷೇತ್ರದಲ್ಲಿ ನಮ್ಮ ರಾಜಕೀಯ ವಿರೋಧಿಗಳು ಕೇವಲ ಅಧಿಕಾರಕ್ಕಾಗಿ ವಿನಾಕಾರಣ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ನಾವು ಎಂದಿಗೂ ದ್ವೇಷದ ರಾಜಕೀಯ ಮಾಡಿಲ್ಲ. ಅಭಿವೃದ್ಧಿಗಾಗಿ ರಾಜಕೀಯ ಮಾಡಿದ್ದೇವೆ. ವಿರೋಧಿಗಳ ಹೇಳಿಕೆಗೆ ಎಂದಿಗೂ ಮತದಾರರು ಸೊಪ್ಪು ಹಾಕಬೇಡಿ. ಉಪ ಚುನಾವಣೆಯಲ್ಲಿ ಮಾಡಿದ ತಪ್ಪಿನ ಅರಿವು ಇಂದು ಕ್ಷೇತ್ರದ ಮತದಾರರಿಗೆ ಆಗಿದೆ ಎಂದು ಹೇಳಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ. ಸತೀಶ್, ಟೌನ್‌ ಅಧ್ಯಕ್ಷ ಡಾ.ಸಿ. ಜಯರಾಜ್, ತಾಲ್ಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಅಬಕಾರಿ ಶ್ರೀನಿವಾಸಯ್ಯ, ಪುರಸಭೆ ಮಾಜಿ ಅಧ್ಯಕ್ಷ ಚೌಡಪ್ಪ, ತಾ.ಪಂ. ಮಾಜಿ ಸದಸ್ಯ ಚೀಮಂಡಹಳ್ಳಿ ರಾಜೇಂದ್ರ, ಗ್ರಾ.ಪಂ. ಸದಸ್ಯರಾದ ನಂದಿನಿ ರಾಜ್‌ ಗೋಪಾಲ್, ಚಂದ್ರಶೇಖರ್‌ ಹಾಜರಿದ್ದರು.

ಹೆಲಿಕಾಪ್ಟರ್‌ ಮೂಲಕ ಪುಷ್ಪ ಮಳೆ: ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ಸಚಿವ ಎಂ.ಟಿ.ಬಿ ನಾಗರಾಜ್, ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌ ಅವರಿಗೆ ಬಿಜೆಪಿ ಕಾರ್ಯಕರ್ತರು ಹೆಲಿಕಾಪ್ಟರ್‌ ಮೂಲಕ ಪುಷ್ಪ ಮಳೆ ಸುರಿಸಿ ಸ್ವಾಗತಿಸಿದರು. ನಂತರ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೂರ್ಣಕುಂಭದೊಂದಿಗೆ, ಕಲಾ ತಂಡಗಳ ಮೂಲಕ ವೇದಿಕೆವರೆಗೆ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT