ಬುಧವಾರ, ನವೆಂಬರ್ 20, 2019
27 °C

ಕಾಲುಬಾಯಿ ಜ್ವರ ತಡೆಗೆ ಲಸಿಕೆ ಹಾಕಿಸಿ

Published:
Updated:
Prajavani

ದೊಡ್ಡಬಳ್ಳಾಪುರ: ‘ಆರು ತಿಂಗಳಿಗೊಮ್ಮೆ ಕಾಲುಬಾಯಿ ಜ್ವರದ ಲಸಿಕೆಯನ್ನು ರಾಸುಗಳಿಗೆ ಕಡ್ಡಾಯವಾಗಿ ಹಾಕಿಸಬೇಕು. ಇಲ್ಲವಾದರೆ ರೈತರ ಬದುಕಿಗೆ ಆಧಾರವಾಗಿರುವ ರಾಸುಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಕಾಲುಬಾರಿ ರೋಗ ತಡೆಗಟ್ಟಲು ಉಚಿತವಾಗಿ ನೀಡಲಾಗುವ 16ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಇಲ್ಲಿನ ನಾಗದೇನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಕಾಲುಬಾಯಿ ಜ್ವರ ಕಾಣಿಸಿಕೊಂಡು ನೂರಾರು ರಾಸುಗಳು ಮರಣ ಹೊಂದಿದ್ದವು. ಕಾಲುಬಾಯಿ ಜ್ವರ ವೈರಸ್‌ನಿಂದ ಬರುವುದರಿಂದ ಇದನ್ನು ತಡೆಯಲು ಮುಂಜಾಗ್ರತೆಯಾಗಿ ಲಸಿಕೆ ಹಾಕಿಸಬೇಕು. ಗ್ರಾಮದಲ್ಲಿ ಒಂದೆರಡು ರಾಸುಗಳಿಗೆ ಲಸಿಕೆ ಹಾಕಿಸದಿದ್ದರೂ ರೋಗ ಹರಡುವ ಅಪಾಯ ಇರುತ್ತದೆ. ವೈದ್ಯರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಎಲ್ಲ ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಬೇಕು’ ಎಂದರು.

‘ಸರ್ಕಾರದ ವತಿಯಿಂದ ಉಚಿತವಾಗಿ ರಾಸುಗಳಿಗೆ ಹಾಕಲಾಗುತ್ತಿರುವ ಲಸಿಕಾ ಆಂದೋಲನ ನ. 4ರವೆರೆಗೆ ನಡೆಯಲಿದೆ. ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಪಶು ವೈದ್ಯರು ಭೇಟಿ ನೀಡಿ ಚುಚ್ಚು ಮದ್ದು ನೀಡಲಿದ್ದಾರೆ. ರೈತರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರು ಪಶು ವೈದ್ಯರಿಗೆ ಸಹಕಾರ ನೀಡುವ ಮೂಲಕ ಕಾಲುಬಾಯಿ ಜ್ವರದ ವೈರಸ್‌ ನಿರ್ಮೂಲನೆಗೆ ಶ್ರಮಿಸಬೇಕು’ ಎಂದರು.

ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕ ಆಂಜಿನಪ್ಪ, ಜಿಲ್ಲಾ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಬಾಲಚಂದ್ರ, ಸಹಾಯಕ ನಿರ್ದೇಶಕ ಡಾ.ರಾಜೇಂದ್ರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್‌, ನಾಗದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್‌ ಇದ್ದರು.

ಪ್ರತಿಕ್ರಿಯಿಸಿ (+)