ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಕುಂಠ ಏಕಾದಶಿಗೆ ಸಿದ್ಧಗೊಂಡ ವಿಜಯಪುರದ ವೆಂಕಟರವಣಸ್ವಾಮಿ ದೇವಾಲಯ

Last Updated 17 ಡಿಸೆಂಬರ್ 2018, 12:31 IST
ಅಕ್ಷರ ಗಾತ್ರ

ವಿಜಯಪುರ: ದೇವಾಲಯಗಳ ನಗರಿಯೆಂದೆ ಖ್ಯಾತಿಯನ್ನು ಗಳಿಸಿರುವ ವಿಜಯಪುರದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ 15 ನೇ ಬಾರಿಗೆ ವಿಶೇಷ ಅಲಂಕಾರದೊಂದಿಗೆ ಉತ್ತರದ್ವಾರ ಪ್ರವೇಶ ಮತ್ತು ಸಪ್ತದ್ವಾರಗಳ ವಿಶೇಷ ದರ್ಶನವು ಡಿ. 18 ರಂದು ಬೆಳಿಗ್ಗೆ 1.35 ರಿಂದ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬಲಿಜ ಸಂಘದ ಅಧ್ಯಕ್ಷ ಎನ್. ಮುನಿಕೃಷ್ಣಪ್ಪ ತಿಳಿಸಿದ್ದಾರೆ.

1943 ರಲ್ಲಿ ಲಕ್ಷ್ಮೀ ಅಮ್ಮನವರ ಸಮೇತ ನಿರ್ಮಾಣವಾಗಿರುವ ವೆಂಕಟ ರಮಣಸ್ವಾಮಿ ಹಾಗೂ ರಾಮಾನುಜಾಚಾರ್ಯರ ಪ್ರತಿಷ್ಠಾಪನೆಯಾಗಿದೆ.

ಇಲ್ಲಿನ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ದಕ್ಷಿಣದ ಕಡೆಗೆ ನೋಡಿದರೆ, ದೇವಾಲಯದ ದ್ವಾರ ಕಾಣಿಸುತ್ತದೆ. ಒಳಗೆ ಹೋದರೆ, ಶಂಖ, ಚಕ್ರಗಳು, ದೇವಾಲಯದ ತುದಿಗಳಲ್ಲಿ ಗರುಡಗಳ ನಡುವೆ ಮೂರು ನಾಮಗಳು, ಒಳ ಹೋಗುತ್ತಿದ್ದಂತೆ 8 ಕಂಬಗಳಲ್ಲಿ ನಿರ್ಮಾಣಗೊಂಡಿರುವ ಮೇಲ್ಚಾವಣಿಯ ಕೆಳಗೆ ಗರುಡ ದೇವಾಲಯ, ಪಕ್ಕದಲ್ಲೇ ಬನ್ನಿ ಮರ ಎದುರಾಗುತ್ತದೆ.

ಬಾಗಿಲುಗಳ ಮೇಲೆ ಅಷ್ಟ ಲಕ್ಷ್ಮೀಯರ ದರ್ಶನ ಹಾಗೂ ಸ್ವಾಮಿಯ ದಶಾವತಾರಗಳ ಚಿತ್ರಗಳು ಕಣ್ಣಿಗೆ ಗೋಚರಿಸುತ್ತವೆ. ದೇವಾಲಯದ ಒಳಭಾಗದಲ್ಲಿ ದೇವರ ಎಡ ಭಾಗದಲ್ಲಿ ಲಕ್ಷ್ಮೀ ಅಮ್ಮನವರ ವಿಗ್ರಹ ಪ್ರತಿಷ್ಠಾಪನೆಯಾಗಿದ್ದರೆ ಬಲಭಾಗದಲ್ಲಿ ರಾಮಾನುಚಾರ್ಯರು, ಕೈವಾರ ನಾರೇಯಣ ಯತೀಂದ್ರರು, ನಮ್ಮ ಆಚಾರ್ಯರು, ಆಳ್ವಾರುಗಳ ವಿಗ್ರಹಗಳು ಕಾಣಿಸುತ್ತವೆ.

ಇಲ್ಲಿ ಪ್ರತಿ ವರ್ಷ ವಾರ್ಷಿಕೋತ್ಸವದ ಅಂಗವಾಗಿ ಶ್ರೀಮತ್ಕಲ್ಯಾಣೋತ್ಸವ ಮಾಡಲಾಗುತ್ತಿದೆ. ಆಷಾಢ ಮಾಸದಲ್ಲಿ ಪ್ರಥಮ ಏಕಾದಶಿಯ ಅಂಗವಾಗಿ 7 ದಿನಗಳ ಅಖಂಡ ಶ್ರೀರಾಮನಾಮ ಸಪ್ತಾಹ ಹಾಗೂ 8 ನೇ ದಿನ ಅನ್ನಸಂತರ್ಪಣೆ ನಡೆಸಲಾಗುತ್ತಿದೆ.

1988 ರಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. 1991 ರಲ್ಲಿ ನವಗ್ರಹ ವಿಗ್ರಹಗಳ ಪ್ರತಿಷ್ಠಾಪನೆಯನ್ನೂ ಮಾಡಲಾಗಿದೆ. 2001 ರಲ್ಲಿ ಗರ್ಭಗುಡಿಯ ಮೇಲೆ ವಿಮಾನಗೋಪುರ ನಿರ್ಮಿಸಲಾಗಿದೆ. 2003 ರಲ್ಲಿ ಮಹಾದ್ವಾರವನ್ನು ನಿರ್ಮಿಸಲಾಗಿದೆ. 2006 ರಲ್ಲಿ ತುಮಕೂರು ಸಿದ್ಧಗಂಗಾಮಠದ ಶಿವಕುಮಾರ ಸ್ವಾಮೀಜಿ ಅವರು ಕಲ್ಲುಗಾಲಿ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

2008 ರಲ್ಲಿ ಕೈವಾರ ಯೋಗಿನಾರೇಯಣ ಯತೀಂದ್ರರ ಪ್ರತಿಷ್ಠಾಪನೆಯನ್ನು ಕೈವಾರದ ಧರ್ಮದರ್ಶಿ ಡಾ.ಎಂ.ಆರ್. ಜಯರಾಂ ಅವರು ಮಾಡಿದ್ದಾರೆ. 2010 ರಿಂದ ಶ್ರಾವಣ ಮಾಸದಲ್ಲಿ ನಿತ್ಯ ಕಲ್ಯಾಣೋತ್ಸವಗಳು ಆರಂಭಗೊಂಡು ಮುಂದುವರೆಯುತ್ತಿವೆ. ದೇವಾಲಯದ ಕಾರ್ಯಗಳನ್ನು ಬಲಿಜ ಸಂಘದ ಸಮಿತಿಯಿಂದ ನಡೆಸಲಾಗುತ್ತಿದೆ.

ವೆಂಕಟೇಶ್ವರ ವುಡ್ ಇಂಡಸ್ಟ್ರಿಯ ಎನ್. ಪ್ರಕಾಶ್ ಅವರು, ‘ದೇವಾಲಯ ಬಹಳಷ್ಟು ಪ್ರಖ್ಯಾತಿಯನ್ನು ಗಳಿಸಿಕೊಂಡಿದೆ. ರಾಜ್ಯವು ಸೇರಿದಂತೆ ಆಂಧ್ರ, ತಮಿಳುನಾಡು, ಕೇರಳ, ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ನಾವೂ ಸೇವಾಕರ್ತರಾಗಿ ಪೂಜಾ ಕೈಂಕರ್ಯಗಳನ್ನು ಮಾಡುತ್ತಿದ್ದೇವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT