ಪ್ರಧಾನಿಯಾಗಿ ದೇಶಕ್ಕೆ ಅಪಾರ ಕೊಡುಗೆ

7
ದೊಡ್ಡಬಳ್ಳಾಪುರದ ವಿವಿಧೆಡೆ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಪ್ರಧಾನಿಯಾಗಿ ದೇಶಕ್ಕೆ ಅಪಾರ ಕೊಡುಗೆ

Published:
Updated:
Deccan Herald

ದೊಡ್ಡಬಳ್ಳಾಪುರ: ದೇಶ ಕಂಡ ದಕ್ಷ ಆಡಳಿತಗಾರ, ಅಜಾತ ಶತ್ರು ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ತಾಲ್ಲೂಕಿನ ವಿವಿಧೆಡೆಗಲ್ಲಿ ಶ್ರದ್ಧಾಂಜಲಿ ಸಭೆಗಳು ನಡೆದವು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಪ್ರಧಾನ ಮಂತ್ರಿಯಾಗಿ ಅಟಲ್ ಜೀ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ನಿಧನದಿಂದ ರಾಜಕೀಯ ಕ್ಷೇತ್ರವು ಅಮೂಲ್ಯ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.

ಇಡೀ ರಾಜ್ಯದಲ್ಲಿ ಉಡುಪಿ ಮತ್ತು ದೊಡ್ಡಬಳ್ಳಾಪುರ ಪುರಸಭೆಗಳಲ್ಲಿ ಮಾತ್ರ ಪ್ರಥಮ ಬಾರಿಗೆ ಬಿಜೆಪಿ ಪಕ್ಷದ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ವಾಜಪೇಯಿ ಅವರ ನಿಕಟರಾಗಲು ಅವಕಾಶ ದೊರೆಯಿತು ಎಂದರು.

ಅವರು ದೇಶದ ಪ್ರಗತಿಯಲ್ಲಿ ಮಹತ್ವದ ಆಡಳಿತ ನೀಡಿದ್ದಾರೆ. ಇಡೀ ದೇಶಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆ ಚಾಲನೆ ನೀಡಿದ ಮಹಾನ್ ನಾಯಕ. ಎಲ್ಲ ಪಕ್ಷದವರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದ ಅಜಾತ ಶತ್ರು. ಬಿಜೆಪಿ ಕಟ್ಟಿ ಬೆಳೆಸುವಲ್ಲಿ ರಾತ್ರಿ ಹಗಲೆನ್ನದೆ ಶ್ರಮಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

‘ನೇಕಾರರಿಗೆ ಕೈಮಗ್ಗ ನಿಯಮದಿಂದ ಉಂಟಾದ ಸಮಸ್ಯೆ ಬಗೆಹರಿಸುವಂತೆ ಸಂಸತ್‍ನಲ್ಲಿ ಚರ್ಚೆ ಮಾಡಿ ಕಾಯ್ದೆಯನ್ನು ಸಡಿಲಿಸಲು ಆಗ್ರಹಿಸಿದ್ದರು. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ.ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ’ ಎಂದರು.

ಹಿರಿಯ ಬಿಜೆಪಿ ಮುಖಂಡ ಎಂ.ಪಿ.ನಾಗರಾಜ್ ಮಾತನಾಡಿ, 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಇಲ್ಲಿಂದ ಕೆಲವರು ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಹೋಗಿದ್ದನ್ನು ಉದಾಹರಿಸಿದರು. ಒಳ್ಳೆಯ ಕಾರ್ಯಗಳನ್ನು ಮಾಡಲು ಯಾವುದಕ್ಕೂ ಅಂಜದ ದೂರ ದೃಷ್ಟಿಯುಳ್ಳ ದೇಶ ಕಂಡ ಅಪರೂಪದ ನಾಯಕರಾಗಿದ್ದರು ಎಂದರು.

ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಜೋ.ನ.ಮಲ್ಲಿಕಾರ್ಜುನ್, ನಗರ ಅಧ್ಯಕ್ಷ ಕೆ.ಎಚ್.ರಂಗರಾಜು, ಪ್ರಧಾನ ಕಾರ್ಯದರ್ಶಿ ನಾಗರಾಜ್, ನಗರ ಕಾರ್ಯದರ್ಶಿ ಬಿ.ಜಿ.ಶ್ರೀನಿವಾಸ, ಸುಬ್ರಹ್ಮಣ್ಯ,ನಗರಸಭಾ ಸದಸ್ಯ ಕೆ.ಎಚ್. ವೆಂಕಟರಾಜು, ಮುಖಂಡರಾದ ಕೊಡಿಗೆಹಳ್ಳಿ ವೆಂಕಟೇಶ್, ಗೋಪಿ, ಉಮಾಮಹೇಶ್ವರಿ ಇದ್ದರು.

ಗೆಳೆಯರ ಬಳಗದಿಂದ ಶ್ರದ್ದಾಂಜಲಿ: ನಗರದ ಬೆಸ್ತರಪೇಟೆಯಲ್ಲಿನ ಸ್ವಾಮಿ ವಿವೇಕಾನಂದ ಗೆಳೆಯರ ಬಳಗದ ವತಿಯಿಂದ ವಾಜಪೇಯಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಧ್ಯಾಹ್ನ 12 ಗಂಟೆವರೆಗೆ ಬೆಸ್ತರಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಿದ ಅಂಗಡಿಗಳ ಮಾಲೀಕರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಾಜಪೇಯಿ ಅವರ ಕೊಡುಗೆಯನ್ನು ಸ್ಮರಿಸಿದರು.

ಮುಸ್ಲಿಂ ಮುಖಂಡರಿಂದ ಶ್ರದ್ಧಾಂಜಲಿ: ನಗರದ ದರ್ಗಾಮೊಹಲ್ಲಾದಲ್ಲಿ ಮುಸ್ಲಿಂ ಮುಖಂಡರು ಮಾಜಿ ಪ್ರಧಾನ ಮಂತ್ರಿ ದಿವಂಗತ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮುಖಂಡರಾದ ಬಿ.ಕೆ.ಬಾಬಾ, ಶಂಷೀದ್‌, ಆರೀಫ್‌, ಬಾಬಾಜಾನ್‌ ಇದ್ದರು.

ಕೆಸ್ತೂರು ಗ್ರಾಮದಲ್ಲಿ ಶ್ರದ್ದಾಂಜಲಿ: ವಾಜಪೇಯಿ ಅವರಿಗೆ ಕೆಸ್ತೂರು ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರಿಂದ ಶ್ರದ್ಧಾಂಜಲಿ ಸಭೆ ನಡೆಯಿತು. ಗ್ರಾಮದ ಮುಖಂಡರಾದ ಕೆ.ಎಸ್‌.ಚನ್ನರಾಮಣ್ಣ, ಬಚ್ಚೇಗೌಡ, ವಿಶ್ವನಾಥ್‌, ರಾಮಮೂರ್ತಿ, ಚನ್ನಕೇಶವಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !