‘ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಆಜಾತಶತ್ರು’

7

‘ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಆಜಾತಶತ್ರು’

Published:
Updated:
Deccan Herald

ದೊಡ್ಡಬಳ್ಳಾಪುರ: ‘ಅಧ್ಯಕ್ಷ ಮಹೋದಯ್‌ ಆಯಿಯೇ..ಆಯಿಯೇ… ಎಂದು ನಗುಮುಖದಿಂದ ಕರೆಯುತ್ತಿದ್ದವರು ಅಟಲ್‌ ಬಿಹಾರಿ ವಾಜಪೇಯಿ’ ಎಂದು ಅವರೊಂದಿಗಿನ ಒಡನಾಟವನ್ನು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ನೆನಪು ಮಾಡಿಕೊಂಡರು.

‘ಇಡೀ ರಾಜ್ಯದಲ್ಲಿ ಉಡುಪಿ (ವಿ.ಎಸ್‌.ಆಚಾರ್ಯ ಉಡುಪಿ ನಗರಸಭೆ ಅಧ್ಯಕ್ಷರಾಗಿದ್ದರು) ಮತ್ತು ದೊಡ್ಡಬಳ್ಳಾಪುರ ಪುರಸಭೆಗಳಲ್ಲಿ ಮಾತ್ರ ಪ್ರಥಮ ಬಾರಿಗೆ ಬಿಜೆಪಿ ಪಕ್ಷದ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯನಾಗಿ ಹಾಗೂ ಜಿಲ್ಲಾ ಘಟದ ಅಧ್ಯಕ್ಷನಾಗಿ ನಾಲ್ಕು ಬಾರಿ ಕಾರ್ಯನಿರ್ವಹಿಸಿದ್ದೆ’ ಎಂದು ನೆನಪಿಸಿಕೊಂಡರು.

ಈ ಎಲ್ಲ ಕಾರಣದಿಂದ ಪಕ್ಷದ ವತಿಯಿಂದ ನಡೆಯುತ್ತಿದ್ದ ಯಾವುದೇ ಸಭೆಗಳಲ್ಲಿ ವಾಜಪೇಯಿ ಅವರನ್ನು ಭೇಟಿಯಾದಾಗ ನಗು ಮುಖದೊಂದಿಗೆ ‘ಅಧ್ಯಕ್ಷ ಮಹೋದಯ್‌ ಆಯಿಯೇ…’ ಎಂದು ಕರೆಯುತ್ತಿದ್ದರು.

‘ಅವರಿಗೆ ಉಡುಪುಗಳ ಪೈಕಿ ರೇಷ್ಮೆ ಶಾಲು ಅಂದರೆ ತುಂಬಾ ಇಷ್ಟ. ಅವರು ಸದಾ ಒಂದು ರೇಷ್ಮೆ ಶಾಲನ್ನು ಹೆಗಲ ಮೇಲೆ ಹಾಕಿಕೊಂಡೇ ಇರುತ್ತಿದ್ದರು’.

‘ಅವರು ಅನಾರೋಗ್ಯಕ್ಕೆ ಸಿಲುಕುವ ವವರೆಗೂ ಅವರನ್ನು ಭೇಟಿ ಮಾಡಿದ್ದ ಎಲ್ಲ ಸಂದರ್ಭಗಳಲ್ಲೂ ನಮ್ಮಲ್ಲಿ ನೇಯುತ್ತಿದ್ದ ರೇಷ್ಮೆ ಶಾಲನ್ನು ಹೊದಿಸುತ್ತಿದ್ದೆ. ತುಂಬ ಖುಷಿ ಪಟ್ಟು ಶಾಲನ್ನು ಮುಟ್ಟಿ ನೋಡುತ್ತಿದ್ದರು’ ಎಂದು ವಿವರಿಸಿದರು.

40 ವರ್ಷಗಳ ಹಿಂದೆ ಜನಸಂಘದಿಂದ ರಾಜಕಾರಣಕ್ಕೆ ಬಂದ ಕೆ.ಎಂ.ಹನುಮಂತರಾಯಪ್ಪ ಅವರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ 1983 ರಿಂದ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದಾಗ ವಾಜಪೇಯಿ ಅವರು ಪ್ರಚಾರ ಸಭೆಗಳಿಗೆ ಬಂದಿದ್ದರು.

ಕೇಂದ್ರ ಕೈಮಗ್ಗ ಅಧಿನಿಯಮದಿಂದ ಇಲ್ಲಿನ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ. ಇದೇ ವೇಳೆ 1984ರಲ್ಲಿ ಅನಾರೋಗ್ಯ ನಿಮಿತ್ತ ನಂದಿಬೆಟ್ಟಕ್ಕೆ ವಿಶ್ರಾಂತಿಗಾಗಿ ಅಟಲ್‌ ಬಿಹಾರಿ ವಾಜಪೇಯಿ ಅವರು ಭೇಟಿ ಕೊಟ್ಟಿದ್ದರು.

ನೇಕಾರರ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಡಲು ವಾಜಪೇಯಿ ಅವರನ್ನು ನಗರಕ್ಕೆ ಕರೆತಂದು ಇಲ್ಲಿನ ವಿದ್ಯುತ್‌ ಮಗ್ಗಗಳನ್ನು ನಡೆಸುತ್ತಿರುವವರ ಮನೆಗಳಿಗೆ ಭೇಟಿ ನೀಡಿ ಕೈ ಮಗ್ಗ ಅಧಿನಿಯಮ ಕಾಯ್ದೆಯಿಂದ ಆಗುತ್ತಿರುವ ತೊಂದರೆಗಳನ್ನು ಮನವರಿಕೆ ಮಾಡಿಕೊಡಲಾಗಿತ್ತು. ಇದೇ ವಿಚಾರವಾಗಿ ಸಂಸತ್‌ನಲ್ಲಿ ಚರ್ಚೆ ಮಾಡಿ ಕಾಯ್ದೆಯನ್ನು ಸರಳಗೊಳಿಸಲು ಆಗ್ರಹಿಸಿದ್ದರು ಎಂದು ನೆನಪು ಮಾಡಿಕೊಂಡರು ಹನುಮಂತರಾಯಪ್ಪ.

‘1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಇಲ್ಲಿಂದಲೂ ಕೆಲವರು ಬೆಂಗಳೂರಿನ ಸೆಂಟ್ರಲ್‌ ಜೈಲಿಗೆ ಹೋಗಿದ್ದೇವೆ. ಆಗ ಜೈಲಿನಲ್ಲಿ ವಾಜಪೇಯಿ, ಅಡ್ವಾಣಿ, ಮಧು ದಂಡವತೆ ಮತ್ತಿತರರೊಂದಿಗೆ ನಾವು  ಓಡಾಡಿದ್ದು ಸ್ಮರಣೀಯ ದಿನಗಳಾಗಿವೆ’ ಎಂದು ನೆನಪಿಸಿಕೊಂಡರು.

‘ಜನಸಂಘ ನಂತರ ಭಾರತೀಯ ಜನತಾ ಪಾರ್ಟಿಯಲ್ಲಿ ನನಗಿಂತ ಹಿಂದಿನಿಂದಲೂ ನಗರದಲ್ಲಿ ಸಕ್ರಿಯರಾಗಿದ್ದ ದಿವಂಗತ ಕೆ.ಎಸ್‌.ವಿಶ್ವನಾಥ್‌, ಟಿ.ಸಿ.ಅಶ್ವತ್ಥನಾರಾಯಣ ಹಾಗೂ ಈಗಲೂ ಬಿಜೆಪಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಡಿ.ವಿ.ನಾರಾಯಣಶರ್ಮ ಅವರು ವಾಜಪೇಯಿ ಅವರೊಂದಿಗೆ ಅತ್ಯಂತ ನಿಕಟ ಸಂಪರ್ಕದಲ್ಲಿದ್ದರು’ ಎಂದು ತಿಳಿಸಿದರು.

‘ಪಕ್ಷದ ಸಂಘಟನೆ ವಿಚಾರವಾಗಿ ದೆಹಲಿಗೆ ತೆರಳಿದ್ದ ಹಾಗೂ ವಾಜಪೇಯಿ ಅವರು ಬೆಂಗಳೂರಿಗೆ ಬರುತ್ತಿದ್ದ ಸಂದರ್ಭಗಳಲ್ಲಿ ತಪ್ಪದೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದೆವು. ಎಂದೂ ಅವರು ನಮ್ಮನ್ನು ಮರೆತವರಲ್ಲ’

‘ಮೂರು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯ ವಿಧಾನ ಸಭೆಗೆ ಸ್ಪರ್ಧಿಸಿ ಸೋಲು ಕಂಡಾಗಲು ನಮ್ಮನ್ನು ಪಕ್ಷದ ರಾಷ್ಟ್ರೀಯ ಅಥವಾ ರಾಜ್ಯ ವರಿಷ್ಠರು ಕಡೆಗಣಿಸಿ ಕಂಡವರಲ್ಲ. ಪಕ್ಷ ಸಂಘಟನೆ ಮುಖ್ಯ, ನಂತರ ಸೋಲು ಗೆಲುವಿನ ಲೆಕ್ಕಾಚಾರ ಎಂದು ಹುರಿದುಂಬಿಸುತ್ತಿದ್ದರು’.

2000ರಲ್ಲಿ ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದರು ಎಂದು ಒಡನಾಟವನ್ನು ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !