ಭಾನುವಾರ, ಆಗಸ್ಟ್ 25, 2019
20 °C
ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ದೇವಿಯ ಲಕ್ಷಣಗಳು

‘ಅಷ್ಟ ಐಶ್ವರ್ಯದ ಅಧಿದೇವತೆ ಲಕ್ಷ್ಮಿ’

Published:
Updated:
Prajavani

ವಿಜಯಪುರ: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮನೆಗಳಲ್ಲಿ ಲಕ್ಷ್ಮಿಯ ವಿಗ್ರಹ ಪ್ರತಿಷ್ಠಾಪಿಸಿ, ಬಂಗಾರದ ಒಡವೆ, ಹಣ, ಹಣ್ಣು–ಕಾಯಿ ಇಟ್ಟು, ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಮಹಿಳೆಯರು ಪೂಜೆ ಸಲ್ಲಿಸಿದರು.

ರಾತ್ರಿಯಿಡೀ ಹಬ್ಬದ ತಯಾರಿಯ ಅಂಗವಾಗಿ ಲಕ್ಷ್ಮಿ ವಿಗ್ರಹಕ್ಕೆ ಅಲಂಕಾರ ಮಾಡಿ, ವಿವಿಧ ಬಗೆಯ ಸಿಹಿತಿಂಡಿಗಳನ್ನು ತಯಾರಿಸುವಲ್ಲಿ ನಿರತರಾಗಿದ್ದ ಮಹಿಳೆಯರು ಬೆಳಿಗ್ಗೆ ಸ್ನೇಹಿತರು, ಬಂಧುಗಳನ್ನು ಕರೆದು ಪೂಜೆ ಸಲ್ಲಿಸಿ, ಅರಿಶಿನ–ಕುಂಕುಮ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಗೃಹಿಣಿ ಸೌಮ್ಯಶ್ರೀ ಮಾತನಾಡಿ, ‘ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಲಕ್ಷ್ಮಿದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡುತ್ತಾರೆ. ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮಿಯ ಲಕ್ಷಣಗಳೆಂದು ಹಿರಿಯರು ಹೇಳುತ್ತಾರೆ. ವರಮಹಾಲಕ್ಷ್ಮಿ ವ್ರತ ಆಚರಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಪ್ರತಿವರ್ಷವೂ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತೇವೆ’ ಎಂದರು.

ಗೃಹಿಣಿ ರಾಜೇಶ್ವರಿ ಮಾತನಾಡಿ, ‘ಅಷ್ಟದಳ ಪದ್ಮದ ರಂಗೋಲಿ ಹಾಕಿ, ಅದರ ಮೇಲೆ ಕಲಶ ಸ್ಥಾಪಿಸುತ್ತೇವೆ. ಒಂದು ತಂಬಿಗೆಯಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ, ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮಿದೇವಿಯ ಬೆಳ್ಳಿಯ ಮುಖವಾಡವನ್ನು ತೆಂಗಿನಕಾಯಿಗೆ ಜೋಡಿಸುತ್ತೇವೆ. ವೀಳ್ಯದೆಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಟ್ಟು ಕಲಶಕ್ಕೆ ಹೊಸ ರವಿಕೆ, ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತೇವೆ’ ಎಂದು ದೇವಿಯ ಅಲಂಕಾರದ ಬಗೆಯನ್ನು ತಿಳಿಸಿದರು.

‘ದೇವಿಗೆ ಪೊಂಗಲ್ ನೈವೇದ್ಯ ಮಾಡಿ ಅರ್ಪಿಸುತ್ತೇವೆ. ಮುತ್ತೈದೆಯರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ ಮುಗಿದ ನಂತರ ಊಟ ಮಾಡುತ್ತಾರೆ’ ಎಂದು ಆಚರಣೆ ಕುರಿತು ಹೇಳಿದರು.

Post Comments (+)