ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕೃತಿ ಆಧಾರದಲ್ಲಿ ಇರಲಿ ಶಿಕ್ಷಣ’

ವಿದ್ಯೆಯಿಂದ ಪಡೆಯಬೇಕಾಗಿದ್ದ ಜ್ಞಾನವನ್ನು ಮನುಕುಲ ಪಡೆದುಕೊಂಡಿಲ್ಲ – ಸಮ್ಮೇಳನಾಧ್ಯಕ್ಷ
Last Updated 23 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ವಿಜಯಪುರ (ಬೆಂಗಳೂರು ಗ್ರಾಮಾಂತರ ಜಿ): ‘ಜಗತ್ತಿನಲ್ಲಿ ಅಶಾಂತಿ, ಅತೃಪ್ತಿ ತಾಂಡವಾಡುತ್ತಿದೆ. ಇದರ ಪರಿಣಾಮ ಹಿಂಸೆ ಮತ್ತು ಭಯೋತ್ಪಾದನೆ. ಇದಕ್ಕೆ ಮೂಲ ಕಾರಣ ವಿದ್ಯೆಯಿಂದ ಪಡೆಯಬೇಕಾಗಿದ್ದ ಜ್ಞಾನವನ್ನುಮನುಕುಲ ಪಡೆದುಕೊಂಡಿಲ್ಲ’ ಎಂದುಸಮ್ಮೇಳನಾಧ್ಯಕ್ಷ ಹಾಗೂ ಸಂಸದ ಎಂ.ವೀರಪ್ಪ ಮೊಯಿಲಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಗಾಂಧಿಚೌಕದಲ್ಲಿ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಗಳ ಕಸಾಪ ಅಖಿಲ ಕರ್ನಾಟಕ ಮಿತ್ರ ಸಂಘದ ಸಹಯೋಗದಲ್ಲಿ ‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘ನಿರಂತರ ಅಧ್ಯಯನ ಇಲ್ಲದೆ ಸಾಹಿತ್ಯ ರಚನೆ ಅಸಾಧ್ಯ.ಯುವ ಸಾಹಿತಿಗಳು ಸಾಧಿಸಲು ಅಸಾಧ್ಯವಾದದ್ದು ಯಾವುದೂ ಇರುವುದಿಲ್ಲ. ಸಾಧನೆ ಮಾಡಲು ಮುಂದಾಗಿ ಸಾಹಿತ್ಯ ಕ್ಷೇತ್ರವನ್ನು ಉಳಿಸಿ’ ಎಂದು ಸಲಹೆ ನೀಡಿದರು.

‘ಮನಸ್ಸು ಭೌತಿಕವಾಗಿ ನಿರ್ಮಲವಾಗಬೇಕು. ಶಿಕ್ಷಣವು ಸಾಹಿತ್ಯದ ಸಹಾಯದಿಂದ ಮನುಷ್ಯನನ್ನು ಮೃಗದಿಂದ ಪ್ರತ್ಯೇಕಿಸುತ್ತದೆ. ಮಕ್ಕಳಲ್ಲಿ ಪ್ರೀತಿ, ಶ್ರದ್ಧೆ ಮತ್ತು ಆದರ್ಶಗಳು ಬೆಳೆಯಬೇಕಾದರೆ ಪರಭಾಷೆಯಲ್ಲಿ ಕಲಿತ ವಿದ್ಯೆ ಸಹಾಯ ಮಾಡುವುದಿಲ್ಲ. ತತ್ವಪದಗಳು, ಯಕ್ಷಗಾನ, ನಾಟಕಗಳು, ಜಾತ್ರೆಗಳು ಸುಸಂಸ್ಕೃತರನ್ನಾಗಿ ಮಾಡುತ್ತವೆ’ ಎಂದರು.

ವಿದ್ಯಾಭ್ಯಾಸದಲ್ಲಿ ಸಂಸ್ಕೃತಿಯ ಆಧಾರದ ಮೇಲೆ ಶಿಕ್ಷಣ ವ್ಯವಸ್ಥೆ ನಿಂತಿರಬೇಕು. ಸಂಸ್ಕೃತಿ ಎಂದರೆ ಮನುಷ್ಯನ ಅನ್ಯೋನ್ಯ ಸಂಬಂಧಗಳಲ್ಲಿ ನಯ, ವಿನಯಗಳ ಸೊಬಗು, ಸ್ವಗುಣ ಮತ್ತು ಪರರ ಗುಣಗಳ ಸಂಮಿಶ್ರಿತ ಕಾಂತಿಯಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ‘ಸಮಾಜದಲ್ಲಿ ಜಾತ್ಯತೀತ ಮನೋಭಾವ, ಶಾಂತಿ, ಸೌಹಾರ್ದತೆ, ಸಮಾನತೆ ಕೋಮು ಸೌಹಾರ್ದತೆ ಮೂಡಿಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಲಿವೆ’ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಿ.ಮಾ.ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೈಸೂರಿನ ಡಾ.ಪ್ರಧಾನ ಗುರುದತ್ ಅವರು, ವೀರಪ್ಪ ಮೊಯಿಲಿ ಅವರು ರಚಿಸಿರುವ ಕಾವ್ಯಗಳು, ಕಾದಂಬರಿಗಳ ಕುರಿತು ಮಾತನಾಡಿದರು.ಉತ್ಸವಾಧ್ಯಕ್ಷ ಬಸವರಾಜ್ ಹಾರಗದ್ದೆ ಶುಭ ಕೋರಿದರು.

ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಪುರಸಭಾ ಸದಸ್ಯರಾದ ಎಂ.ಸತೀಶ್ ಕುಮಾರ್, ಎಸ್.ಭಾಸ್ಕರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಚಿನ್ನಪ್ಪ, ಕಮಲಾಕ್ಷಿ ರಾಜಣ್ಣ, ಜ್ಯೋತಿ ಬಸವರಾಜು, ಕಸಾಪ ಮೂರು ಜಿಲ್ಲೆಗಳ ತಾಲ್ಲೂಕು ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಇದ್ದರು.

ಮೆರವಣಿಗೆ ಮೆರುಗು...

‘ತಂಡಗಳ ಕಲರವ..ಡೊಳ್ಳು ಕುಣಿತ ಕಲಾವಿದರ ತಾಳಗಳಿಗೆ ಸಾಹಿತ್ಯ ಪ್ರೇಮಿಗಳ ಹೃದಯಗಳ ಮಿಡಿತ.. ಎಲ್ಲೆಲ್ಲೂ ಕನ್ನಡ ಭಾಷೆಯ ಕಂಪನ್ನು ಹರಡುವ ಘೋಷಣೆಗಳು, ತಮಟೆ ವಾದನಗಳು.. ವೀರಗಾಸೆ ಕುಣಿತ ಕಲಾವಿದರ ವೀರಾವೇಷದ ಸಂಭಾಷಣೆಯ ನಡುವೆ ಸಾಗಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ..

ಬೆಳಿಗ್ಗೆ 9 ಗಂಟೆಗೆ ಗ್ರೇಡ್-2 ತಹಶೀಲ್ದಾರ್ ರಾಷ್ಟ್ರಧ್ವಜ ಆರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೈವಾರ ಶ್ರೀನಿವಾಸ್ ನಾಡಧ್ವಜ ಆರೋಹಣ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಶಿವಕುಮಾರ್ ಪರಿಷತ್ತಿನ ಧ್ವಜ ಆರೋಹಣ ಮಾಡಿದರು. ಸಾಂಸ್ಕೃತಿಕ ಕಲಾ ತಂಡದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ.ನಾಯ್ಡು ತಂಡದಿಂದ ರಾಷ್ಟ್ರಗೀತೆ, ನಾಡಗೀತೆ ಹಾಡಿದರು. ಮಧ್ಯಾಹ್ನ 12 ಗಂಟೆಗೆ ಅಂಕತಟ್ಟಿ ನಂಜುಂಡಪ್ಪ ವೃತ್ತದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಯಿತು. ಪ್ರಮುಖ ಬೀದಿಗಳ ಮೂಲಕ ಗಾಂಧಿಚೌಕದ ಶಿವಕುಮಾರಸ್ವಾಮೀಜಿ ಮಂಟಪಕ್ಕೆ ಸೇರಿಕೊಂಡಿತು.

ಮಾಂಸಾಹಾರ ತ್ಯಜಿಸಿದ್ದೆ

ನಾವು ಸಾಹಿತಿಯಾಗಿ ಕಾವ್ಯಗಳನ್ನು ರಚನೆ ಮಾಡಬೇಕಾದರೆ, ಅದೊಂದು ತಪಸ್ಸು ಇದ್ದಂತೆ. ನನಗೆ ಸಾಹಿತ್ಯದ ಬೀಜವನ್ನು ಬಿತ್ತಿದ್ದು ನನ್ನ ತಾಯಿ. ನನ್ನನ್ನು ಪ್ರೋತ್ಸಾಹಿಸಿ ಸಾಹಿತಿಯನ್ನಾಗಿಸಿದ್ದು ನನ್ನ ಪತ್ನಿ. ಕಾದಂಬರಿಗಳು, ಕಾವ್ಯಗಳನ್ನು ರಚನೆ ಮಾಡಲು ಮಾಂಸಾಹಾರವನ್ನು ತ್ಯಜಿಸಿದ್ದೆ. ಯಾಕೆಂದರೆ ಪ್ರಾಣಿಹಿಂಸೆ ರಹಿತವಾದ ಜೀವನದಿಂದ ಮಾತ್ರ ಕಾವ್ಯಗಳ ರಚನೆ ಸಾಧ್ಯವಾಗುತ್ತದೆ ಎಂದು ಮೊಯಿಲಿ ಹೇಳಿದರು.

ನಾಣ್ಯ ಸಂಗ್ರಹ ಪ್ರದರ್ಶನ

ವೇದಿಕೆಯ ಮುಂಭಾಗದಲ್ಲಿ ಅಳವಡಿಸಿದ್ದ ಬೃಹತ್ ಪೆಂಡಾಲ್‌ನಲ್ಲಿ ನಾಣ್ಯಗಳ ಸಂಗ್ರಹ ಪ್ರದರ್ಶನ ಹಾಗೂ ಪುಸ್ತಕ ಮಳಿಗೆಗಳನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಉದ್ಘಾಟನೆ ಮಾಡಿದರು.

ಎಂ.ವಿ.ನಾಯ್ಡು, ದೇವರ ಮಳ್ಳೂರು ಮಹೇಶ್ ಮತ್ತು ಸಂಗಡಿಗರು ರೈತಗೀತೆ ಹಾಡಿದರು. ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಸ್ವಾಗತಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಹೆಸರಿನಲ್ಲಿ ಪ್ರಶಸ್ತಿ ವಿತರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT