ವಿಜಯಪುರ(ದೇವನಹಳ್ಳಿ): ಜೆ.ಸಿ.ಬಡಾವಣೆಯಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಉದ್ಯಾನ ಅಕ್ರಮ ಚಟುವಟಿಕೆಗಳ ತಾಣವಾಗಿದ್ದು, ಪುರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಉದ್ಯಾನದಲ್ಲಿ 2017-18ನೇ ಸಾಲಿನಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಮಾರು ₹6 ಲಕ್ಷ ವೆಚ್ಚದಲ್ಲಿ ವ್ಯಾಯಾಮ ಪರಿಕರ ಅಳವಡಿಸಲಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ, ಮುರಿದು ಹೋಗಿವೆ. ಬಳಕೆಗೆ ಯೋಗ್ಯವಿಲ್ಲದಂತಾಗಿವೆ.
ಉದ್ಯಾನದ ಹೊರ ಆವರಣದ ಕಾರುಗಳು ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಬೆಳಿಗ್ಗೆ ಇಲ್ಲಿ ವಾಹನ ನಿಲುಗಡೆ ಮಾಡಿದರೆ ರಾತ್ರಿಯವರೆಗೂ ಬರುವುದಿಲ್ಲ. ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಮಧ್ಯಾಹ್ನದ ಸಮಯದಲ್ಲಿ ಇಲ್ಲಿಗೆ ಬರುವ ಕಾಲೇಜು ವಿದ್ಯಾರ್ಥಿಗಳು ಹುಟ್ಟುಹಬ್ಬ ಆಚರಿಸುವುದು, ಜೋರಾಗಿ ಕಿರುಚಾಡುವುದು ಹಾಗೂ ಮಾದಕ ವಸ್ತು ಸೇವಿಸುತ್ತಾರೆ. ಇಲ್ಲಿ ಮಹಿಳೆಯರು ಓಡಾಡುವುದಕ್ಕೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರನ್ನು ಪ್ರಶ್ನಿಸುವವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಹೊಡೆಯುವುದಕ್ಕೆ ಬರುತ್ತಾರೆ ಎಂದು ಸ್ಥಳೀಯರು ದೂರಿದರು.
ರಾತ್ರಿಯಾದರೆ ಉದ್ಯಾನ ಮದ್ಯಪಾನ ಸ್ಥಳವಾಗಿ ಪರಿಣಮಿಸುತ್ತದೆ. ಕುಡಿದ ಬಾಟಲಿಗಳನ್ನು ಇಲ್ಲೇ ಬಿಸಾಡಿ ಹೋಗಿರುತ್ತಾರೆ. ವಿದ್ಯುತ್ ದೀಪಗಳೂ ಸರಿ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.