ವಿಜಯಪುರ(ದೇವನಹಳ್ಳಿ): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾತ್ಮಕ ಅಕ್ರಮಣ ಕೊನೆಗೊಳ್ಳಿಸಿ, ಅವರಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಸೋಮವಾರ ಹಿಂದೂ ಹಿತರಕ್ಷಣಾ ಸಮಿತಿಯ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಶಿವಗಣೇಶ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಸಮಿತಿ ಸದಸ್ಯರು ಮೌನ ಪ್ರತಿಭಟನೆ ನಡೆಸಿ, ಉಪತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಸಮಯದಲ್ಲಿ ಅವರಿಗೆ ರಕ್ಷಣೆ ನೀಡಬೇಕಾಗಿರುವ ಹೊಣೆಗಾರಿಕೆ ಅಲ್ಲಿನ ಸರ್ಕಾರದ್ದಾಗಿದ್ದು, ಅಲ್ಲಿನ ಸರ್ಕಾರದೊಂದಿಗೆ ಕೇಂದ್ರ ಸರ್ಕಾರವು ರಕ್ಷಣೆಗೆ ಮುಂದಾಗಬೇಕಿದೆ. ಹಿಂದೂ ಧಾರ್ಮಿಕ ಕೇಂದ್ರ, ವ್ಯಾಪಾರ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿಗೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಟೌನ್ ಅಧ್ಯಕ್ಷ ಆರ್.ಸಿ.ಮಂಜುನಾಥ್ ಒತ್ತಾಯಿಸಿದರು.
ಬಾಂಗ್ಲಾದೇಶದ ಪ್ರತಿ ಜಿಲ್ಲೆಯಲ್ಲೂ ಹಿಂದೂ ರುದ್ರಭೂಮಿ, ನೂರಾರು ಮಠ ಮಂದಿರಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು, ಅಲ್ಲಿನ ಹಿಂದೂಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಜಿಲ್ಲಾ ಓಬಿಸಿ ಅಧ್ಯಕ್ಷ ಕನಕರಾಜು ಆಗ್ರಹಿಸಿದರು.
ಬಜರಂಗದಳ ಜಿಲ್ಲಾ ಸಹಸಂಯೋಜಕ ವಿ.ಕೃಷ್ಣಮೂರ್ತಿ, ಉಪತಹಶೀಲ್ದಾರ್ ಸುರೇಶ್, ಗ್ರಾಮ ಲೆಕ್ಕಾಧಿಕಾರಿ ಸುನೀಲ್, ಮಹಬೂಬ್ ಸಾಬ್, ಹಿಂದೂ ಹಿತರಕ್ಷಣಾ ಸಮಿತಿಯ ಲೋಕೇಶ್, ರವಿಕುಮಾರ್ ಬಾಬು, ಹಿಂದೂ ಜಾಗರಣಾ ವೇದಿಕೆ ಪ್ರಾಂತ್ಯ ಕಾರ್ಯದರ್ಶಿ ಮುನೀಂದ್ರ ಇದ್ದರು.