ವಿಜಯಪುರ(ದೇವನಹಳ್ಳಿ): ಗ್ರಾಮೀಣ ಪ್ರದೇಶದಲ್ಲಿ ರೈತರು ಸಾಕಾಣಿಕೆ ಮಾಡುವ ಎತ್ತು, ಕುರಿ ಕಟ್ಟುವ ಕೊಟ್ಟಿಗೆಗಳಲ್ಲಿ ಅವುಗಳನ್ನು ರೋಗಮುಕ್ತವಾಗಿ ಮೆತ್ತಗೆ ಮಲಗಿಸಲು ಸಗಣಿಯಿಂದ ಸ್ಪಂಜಿನಂತಹ ಮೆದುಗೊಬ್ಬರ ಸಿದ್ಧಪಡಿಸುವುದು ಗ್ರಾಮೀಣ ರೈತಾಪಿ ಜನರ ವಾಡಿಕೆ.
ಚಳಿಗಾಲ ಮತ್ತು ಮಳೆಗಾಲದಲ್ಲಿ ಕೊಟ್ಟಿಗೆಗಳಲ್ಲಿ ಹರಡಬಹುದಾದ ರೋಗಗಳಿಂದ ಸಂರಕ್ಷಣೆ ಮಾಡಲು ಮೆದುವಾದ ಗೊಬ್ಬರ ರಕ್ಷಣೆ ನೀಡುವ ಕಾರಣದಿಂದ ಅದನ್ನು ಬಿಸಿಲಿನಲ್ಲಿ ಒಣಗಿಸಿ, ಮೂಟೆಗಳಲ್ಲಿ ತುಂಬಿಸಿ ಇಡುತ್ತಾರೆ.
ಮೆದುಗೊಬ್ಬರ ತಯಾರಿಕೆ: ರಾಸು ಸಗಣಿ ಕ್ರೋಡೀಕರಣ ಮಾಡಿಕೊಂಡು ಬಂದು ಬಯಲಿನಲ್ಲಿ ಸಣ್ಣ, ಸಣ್ಣ ಹುಂಡೆಗಳನ್ನಾಗಿ ಮಾಡಿ ಹರಡಿ ಒಣಗಿಸಲಾಗುತ್ತದೆ. ದಿನಪೂರ್ತಿ ಒಣಗಿದ ನಂತರ ಮೃದುವಾದ ಗೊಬ್ಬರವಾಗಿ ಮಾರ್ಪಡುತ್ತದೆ. ಅದನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಸಂಜೆ ಎತ್ತು, ಕುರಿ ಕಟ್ಟುವ ಕೊಟ್ಟಿಗೆಗಳಲ್ಲಿ ಹರಡುತ್ತಾರೆ. ಈ ಗೊಬ್ಬರ ಜತೆ ತಂಗಡಿ ಸೊಪ್ಪು ತಂದು ಹಾಸುತ್ತಾರೆ. ಇದರಿಂದ ಕೊಟ್ಟಿಗೆಯಲ್ಲಿ ಸಗಣಿ, ಗಂಜಲದ ವಾಸನೆಯಿಲ್ಲದಂತಾಗುತ್ತದೆ. ರಾತ್ರಿಯಿಡೀ ನೆಮ್ಮದಿಯಾಗಿ ನಿದ್ದೆ ಮಾಡುತ್ತವೆ. ಇಲ್ಲವಾದರೆ ಸಗಣಿ ಇಟ್ಟು, ಗಂಜಲ ಹಾಕುವ ದನ–ಕರುಗಳು ಮಲಗದೆ ರಾತ್ರಿಯಿಡೀ ನಿಂತು ಮೆಲಕು ಹಾಕುತ್ತವೆ ಎಂದು ರೈತರು ಹೇಳುತ್ತಾರೆ.
ಕೊಟ್ಟಿಗೆಯಲ್ಲಿ ಎತ್ತು, ಕುರಿ, ಹಸು ಹಾಕಿದ ಸಗಣಿ ಮತ್ತು ಗಂಜಲದಿಂದ ಮೈಕೊಳಕಾಗುವುದಿಲ್ಲ. ಮೆದುಗೊಬ್ಬರ ಗಂಜಲ ಸ್ಪಂಜಿನಂತೆ ಹೀರಿಕೊಳ್ಳುತ್ತದೆ. ಕುರಿಗಳನ್ನು ತೊಳೆಯುವುದಕ್ಕೂ ಸುಲಭವಾಗುತ್ತದೆ. ಮತ್ತು ಅವು ರಾತ್ರಿಯಿಡೀ ವಿಶ್ರಾಂತಿ ಪಡೆಯಲು, ಅವುಗಳ ಆರೋಗ್ಯ ಕಾಪಾಡಲು ಅನುಕೂಲವಾಗುತ್ತದೆ ಎಂದು ರೈತ ಪಾಪಣ್ಣ ಹೇಳುತ್ತಾರೆ.
ಸಗಣಿಯು ಕೇವಲ ತೋಟಗಳಿಗೆ ಹಾಕುವ ಗೊಬ್ಬರವಾಗಿ ಮಾತ್ರವಲ್ಲದೆ ದನ–ಕರು ನೆಮ್ಮದಿಯಾಗಿ ಮಲಗಿಸಲು ಮೆದುವಾದ ಗೊಬ್ಬರವಾಗಿಯೂ ಬಳಕೆಯಾಗುತ್ತದೆ. ಕುರಿಗಳ ಹಿಕ್ಕೆ ಮತ್ತು ಗಂಜಲ ಸಹ ಬಲು ಉಪಯುಕ್ತವಾಗಿರುತ್ತದೆ. ಹಾಗಾಗಿಯೇ ಹಲವು ವರ್ಷ ಹಿಂದಿನಿಂದ ಈ ಪದ್ಧತಿ ಕುರಿಗಳಿಗೂ ರೂಢಿಸಿಕೊಂಡು ಬರಲಾಗಿದೆ. ಕುರಿಗಳ ಕೊಟ್ಟಿಗೆಯಲ್ಲಿ ಒಣಗಿದ ಗೊಬ್ಬರ ಹಾಸುವುದರಿಂದ ಗಂಜಲದ ವಾಸನೆ ಬರಲ್ಲ. ಗೊಬ್ಬರವೂ ಹದವಾಗಿರುತ್ತದೆ. ಎರಡು ರಾತ್ರಿ ಹಾಕಿ ತೆಗೆದ ನಂತರ, ತಿಪ್ಪೆಗೆ ಹಾಕುವುದರಿಂದ ಮೇಲುಗೊಬ್ಬರವಾಗಿ ಮಾರ್ಪಡುತ್ತದೆ ಎಂದು ಅವರು ಹೇಳುತ್ತಾರೆ.
ರಾಸುಗಳು ಸಾಕಾಣಿಕೆ ಮಾಡುವವರಿಗೆ ಗೊಬ್ಬರವನ್ನು ದಿನದಲ್ಲಿ ಎರಡು ಬಾರಿಯಾದರೂ ಹರಡಿ ಒಣಗಿಸುವುದೇ ಒಂದು ಮುಖ್ಯ ಕೆಲಸ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಗೊಬ್ಬರ, ಮಳೆಯಲ್ಲಿ ನೆನೆಯದಂತೆ ನೋಡಿಕೊಂಡು ಸಮಯಕ್ಕೆ ಸರಿಯಾಗಿ ಕೊಟ್ಟಿಗೆಗೆ ಸೇರಿಸಬೇಕು. ಪ್ರತಿದಿನ ದನಕರು ಕೊಟ್ಟಿಗೆಯಲ್ಲಿ ಕಟ್ಟುವಾಗ ಒಣಗಿದ ಗೊಬ್ಬರ ಹಾಕಲೇಬೇಕು. ಇಲ್ಲವಾದರೆ ರಾಸು ಮಲಗದೆ ಇಡೀ ರಾತ್ರಿ ನಿಂತುಕೊಂಡೇ ಕಾಲ ಕಳೆದುಬಿಡುತ್ತವೆ. ರಾಸುಗಳನ್ನು ಹೊರಗೆ ಕಟ್ಟಿದ ನಂತರ ರಾತ್ರಿ ಮಲಗಿ ಗಂಜಲ ಹೊಯ್ದು ನೆನೆದು ಹೋಗಿರುವ ಗೊಬ್ಬರ ಗುಡಿಸಿ ತಿಪ್ಪೆಗೆ ಹಾಕಲಾಗುತ್ತದೆ. ಹೀಗಾಗಿ ಬೇಸಿಗೆ ಬಿಸಿಲಿನ ದಿನಗಳಲ್ಲಿ ಹೆಚ್ಚಾಗಿಯೇ ಗೊಬ್ಬರ ಒಣಗಿಸಿ ಚೀಲಗಳಲ್ಲಿ ಕೂಡಿಟ್ಟುಕೊಳ್ಳುತ್ತೇವೆ ಎಂದು ರೈತ ಮಹಿಳೆ ರತ್ನಮ್ಮ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.