ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಕಸವಿಲೇವಾರಿ ಘಟಕ ನನೆಗುದಿಗೆ

ಇರಿಗೇನಹಳ್ಳಿಯ ಬಳಿ 10 ಎಕರೆ ಭೂಮಿ ಮಂಜೂರು
Last Updated 24 ಫೆಬ್ರುವರಿ 2023, 5:19 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸರ್ಕಾರ ಹೋಬಳಿಯ ಇರಿಗೇನಹಳ್ಳಿಯ ಬಳಿ 10 ಎಕರೆ ಭೂಮಿಯನ್ನು ಪುರಸಭೆಗೆ ಮಂಜೂರು ಮಾಡಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಬದ್ಧತೆ ಕೊರತೆಯಿಂದ ಕಸವಿಲೇವಾರಿ ಘಟಕ ಸ್ಥಾಪನೆ ನೆನಗುದಿಗೆ ಬಿದ್ದಿದೆ.

ಪಟ್ಟಣದಲ್ಲಿ 23 ವಾರ್ಡುಗಳಿದ್ದು, ದಿನನಿತ್ಯ 18 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ತಿಂಗಳಿಗೆ 540 ಟನ್ ಕಸ ಉತ್ಪಾದನೆಯಾಗುತ್ತಿದೆ.

ಕಸ ವಿಲೇವಾರಿ ಘಟಕ ಆರಂಭಿಸದೆ ಇರುವುದು ಹಾಗೂ ತಾಜ್ಯ ವಿಲೇವಾರಿಗೆ ಸೂಕ್ತ ಜಾಗ ಇಲ್ಲದ ಕಾರಣ ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ತಾಜ್ಯವನ್ನು ಪಾಳು ಬಾವಿ, ಖಾಲಿ ಜಾಗಗಳು ಹಾಗೂ ಹೊರವಲಯದ ಅರಣ್ಯ ಪ್ರದೇಶದಲ್ಲಿ ಸುರಿಯಲಾಗುತ್ತಿದೆ. ಕಸ ಕೊಳೆತು ದುರ್ವಾಸನೆ ಬೀರುತ್ತಿದೆ. ಇದರಿಂದ ಪರಿಸರ ಹಾಳಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕಸವಿಲೇವಾರಿ ಘಟಕ ಸ್ಥಾಪನೆಗಾಗಿ ಮಂಜೂರಾಗಿರುವ ಭೂಮಿಗೆ ಇದುವರೆಗೂ ತಡೆಗೋಡೆಯನ್ನೂ ನಿರ್ಮಾಣ ಮಾಡಿಲ್ಲ. ಈ ಬಗ್ಗೆ ಯಾರೊಬ್ಬರೂ ಆಲೋಚನೆ ಮಾಡುತ್ತಿಲ್ಲ ಎಂದು ಪಟ್ಟಣದ ನಿವಾಸಿಗಳಾದ ಮುರಳಿಮೋಹನ್ ಮತ್ತು ಮಂಜುನಾಥ್ ಬೇಸರಿಸಿದರು.

ಜನರು ಎಲ್ಲೆಂದರಲ್ಲಿ ಕಸ ಸರಿಯುತ್ತಿರುವುದರಿಂದ ನೈರ್ಮಲ್ಯ ಹದಗೆಡುತ್ತಿದೆ. ಅಶುಚಿತ್ವ ತಾಂಡವವಾಡುತ್ತಿದೆ. ರಸ್ತೆ ಸೇರಿದಂತೆ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಕಸದ ರಾಶಿಗಳು ಜನರನ್ನು ಸ್ವಾಗತಿಸುತ್ತಿವೆ.

ಇದರಿಂದ ಬೇಸತ್ತಿರುವ ಜನರು ಕಸದ ರಾಶಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಸದಲ್ಲಿರುವ ಪ್ಲಾಸ್ಟಿಕ್ ಸುಟ್ಟು ಕೆಟ್ಟ ವಾಸಬೆ ಬೀರುತ್ತಿದ್ದು, ದಟ್ಟವಾದ ಹೊಗೆ ಆವರಿಸಿಕೊಳ್ಳುತ್ತಿದೆ ಎಂದು ಸ್ಥಳೀಯ ನಿವಾಸಿ ಅಮೃತ ಆಕ್ರೋಶ ವ್ಯಕ್ತಪಡಿಸಿದರು.

ಪಾಳು ಬಾವಿಗೆ ಕಸ: ಪೌರಕಾರ್ಮಿಕರು ಮನೆಗಳಿಂದ ಕಸ ಸಂಗ್ರಹಿಸಿ ಒಂದೆಡೆ ಲಾಟು ಹಾಕುತ್ತಾರೆ. ಅದನ್ನು ಪುರಸಭೆ ಕಸವಿಲೇವಾರಿ ವಾಹನಗಳಲ್ಲಿ ತುಂಬಿಕೊಂಡು ಹೋಗಿ ಪಾಳುಬಾವಿಗಳಿಗೆ ಹಾಕಲಾಗುತ್ತಿದೆ. ಇದರಿಂದ ಮಣ್ಣು ಮಾಲಿನ್ಯವಾಗುತ್ತಿದೆ. ಮಳೆ ಬಂದಾಗ ತಾಜ್ಯ ಕೊಳೆತು ರಾಸಾಯನಿಕ ಅಂತರ್ಜಲ ಕಲುಷಿತಗೊಳ್ಳಲಿದೆ ಎಂದು ಆತಂಕದಿಂದ ಹೇಳಿತ್ತಾರೆ ರೈತರು.
ಕೂಡಲೇ ಜಿಲ್ಲಾಡಳಿತ ಗಮನಹರಿಸಿ, ಶೀಘ್ರ ಕಸ ವಿಲೇವಾರಿ ಘಟಕ ಆರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶೀಘ್ರ ಆರಂಭ: ಇರಿಗೇನಹಳ್ಳಿ ಬಳಿ ದೇವನಹಳ್ಳಿ ಪುರಸಭೆಗೆ 10 ಎಕರೆ, ವಿಜಯಪುರ ಪುರಸಭೆಗೆ 10 ಎಕರೆ ಭೂಮಿಯನ್ನು ಕಸವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರ ಮಂಜೂರು ಮಾಡಿದೆ. ತಡೆಗೋಡೆ ನಿರ್ಮಾಣ ಮಾಡಲು ಟೆಂಡರ್ ಕರೆದಿದ್ದಾರೆ. ತಡೆಗೋಡೆ ಪೂರ್ಣಗೊಂಡ ನಂತರ ಯಂತ್ರೋಪಕರಣಗಳು ಬರಲಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT