ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿ ಮತಯಾಚನೆ

Last Updated 21 ಏಪ್ರಿಲ್ 2021, 5:19 IST
ಅಕ್ಷರ ಗಾತ್ರ

ವಿಜಯಪುರ: ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜನರ ಬಳಿ ಮತ ಕೇಳಲಿಕ್ಕೆ ಹೋಗುವಾಗ ಕಡ್ಡಾಯವಾಗಿ ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆದೇಶ ಹೊರಡಿಸಿದ್ದರೂ ಬಹುತೇಕ ಕಡೆಗಳಲ್ಲಿ ನಿಯಮಗಳು ಪಾಲನೆಯಾಗುತ್ತಿಲ್ಲ.

ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಕೊಂಡು, ಅಭ್ಯರ್ಥಿಗಳು ಮತಯಾಚನೆ ಮಾಡಬೇಕು. ಮತಯಾಚನೆಗೆ ಹೋಗುವ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, 5 ಮಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವಂತಿಲ್ಲ, ಮಕ್ಕಳನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸುವಂತಿಲ್ಲ ಎನ್ನುವ ನಿಯಮ ವಿಧಿಸಿದ್ದರೂ ಮನೆಗೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿರುವ ಅಭ್ಯರ್ಥಿಗಳು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಊಟ ಬಿಟ್ಟು ₹500: ಬೆಳಗಿನಿಂದ ಸಂಜೆಯವರೆಗೂ ಅಭ್ಯರ್ಥಿಯ ಪರವಾಗಿ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಕೊಟ್ಟು, ದಿನವೊಂದಕ್ಕೆ ₹500 ರೂಪಾಯಿ ಕೊಡ್ತಾರೆ. ಮೊದಲೇ ಕೂಲಿ ಕೆಲಸಗಳೂ ಇಲ್ಲ, ಕರೆಯುವವರೂ ಇಲ್ಲ, ಇನ್ನೇನು ಮಾಡೋದು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ.

ಕೊರೊನಾ ಸೋಂಕಿನ ಭೀತಿಯ ನಡುವೆಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಭ್ಯರ್ಥಿಗಳೂ ಮುಜುಗುರಕ್ಕೆ ಒಳಗಾಗುತ್ತಿದ್ದಾರೆ. ಪ್ರಚಾರಕ್ಕೆ ಬರಬೇಡಿ ಎಂದರೆ, ಮತಗಳು ಚದರಿಹೋಗುತ್ತವೆ ಎನ್ನುವ ಭಯ. ಜನ ಸೇರಿದಂತೆಲ್ಲಾ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದಂತಾಗಿ ಅಧಿಕಾರಿಗಳ ಕೆಂಗೆಣ್ಣಿಗೆ ಗುರಿಯಾಗಬೇಕಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

ಮಕ್ಕಳೂ ಭಾಗಿ: ಕೋವಿಡ್ ಸಂಕಷ್ಟದಿಂದಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿರುವ ಕಾರಣದಿಂದಾಗಿ ಮನೆಗಳಲ್ಲೆ ಉಳಿದುಕೊಂಡಿರುವ ಮಕ್ಕಳೂ ಮಾಸ್ಕ್ ಇಲ್ಲದೇ ವಾರ್ಡುಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. ಚುನಾವಣಾ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂಬುದು ನಾಗರಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT