ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ವಾರ್ಡ್‌ ಸ್ವಚ್ಚತೆ ಕಾಪಾಡುವಂತೆ ಜನರ ಒತ್ತಾಯ

ಮೂಲಸೌಕರ್ಯಗಳಿಲ್ಲದೆ ಕೊರಗುತ್ತಿರುವ 23ನೇ ವಾರ್ಡ್‌
Last Updated 2 ಜನವರಿ 2019, 13:31 IST
ಅಕ್ಷರ ಗಾತ್ರ

ವಿಜಯಪುರ: ದಿನಬೆಳಗಾದರೆ ಚರಂಡಿ ವಾಸನೆ.. ಚರಂಡಿಯಲ್ಲಿ ತುಂಬಿರುವ ಪ್ಲಾಸ್ಟಿಕ್ ಕವರ್‌ಗಳು ಒಂದೆಡೆಯಾದರೆ, ಚರಂಡಿ ಇಕ್ಕೆಲಗಳಲ್ಲಿ ಬೆಳೆದಿರುವ ಹುಲ್ಲಿನಿಂದ ನೀರು ಮುಂದೆ ಹೋಗದೆ ಸಾರ್ವಜನಿಕರಿಗೆ ತುಂಬಾ ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಮಸ್ಯೆಯನ್ನು ಕೇಳುವವರು ಇಲ್ಲ ಎಂದು ಗ್ರಾಮಸ್ಥ ಅಶೋಕ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

’23 ನೇ ವಾರ್ಡಿನ ರಹಮತ್ ನಗರದಲ್ಲಿನ ಚರಂಡಿ ವ್ಯವಸ್ಥೆ ಸಾರ್ವಜನಿಕರಿಗೆ ನೋವು ಉಂಟು ಮಾಡಿದೆ. ಮನೆಗಳಿಗೆ ಕಾಂಪೌಂಡ್ ನಿರ್ಮಿಸಿಕೊಂಡು, ಎಲ್ಲೆಂದರಲ್ಲಿ ಕಸದ ರಾಶಿಯನ್ನು ಹಾಕುತ್ತಾರೆ. ಸಂಚಾರ ಮಾಡಲಿಕ್ಕೂ ಸಾಧ್ಯವಾಗದ ರಸ್ತೆಗಳಿಂದಾಗಿ ಇಲ್ಲಿನ ಜನರು ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುವಂತಾಗಿದೆ. ಪುರಸಭೆ ಇತಿಹಾಸದಲ್ಲಿ ಚರಂಡಿಗಳು, ರಸ್ತೆಗಳು, ರಾಜಕಾಲುವೆಗಳು ಇಷ್ಟೊಂದು ಹಾಳಾಗಿರುವ ಇದೇ ಮೊದಲ ಬಾರಿ’ ಎಂದು ಹೇಳಿದರು.

’ಪುರಸಭೆಗೆ ಬರುವಂತಹ ಅನುದಾನಗಳು ಏನಾಗುತ್ತಿವೆಯೋ ಎನ್ನುವುದೇ ಗೊತ್ತಾಗುತ್ತಿಲ್ಲ. ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಒಂದು ದಿನವೂ 23 ನೇ ವಾರ್ಡಿಗೆ ಭೇಟಿ ಕೊಟ್ಟಿಲ್ಲ, ಜನರ ಸಮಸ್ಯೆಗಳನ್ನು ಆಲಿಸಲಿಲ್ಲ. 23ನೇ ವಾರ್ಡ್‌ ಇದೆ ಎನ್ನುವುದನ್ನೇ ಅಧಿಕಾರಿಗಳು ಮರೆತು ಹೋಗಿದ್ದಾರೆ. ಅವರು ಒಂದು ಬಾರಿ ಬಂದು ಇಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಅರ್ಥವಾಗುತ್ತದೆ’ ಎಂದರು.

ಸ್ಥಳೀಯ ಸೀನಪ್ಪ ಮಾತನಾಡಿ, ’ನಮ್ಮ ವಾರ್ಡಿನ ದುಸ್ಥಿತಿ ತೀರ ಹದಗೆಟ್ಟಿದೆ. ಬಸ್ ನಿಲ್ದಾಣದಿಂದ ಮನೆಗೆ ಬರುವಷ್ಟರಲ್ಲಿ ಸುಸ್ತಾಗುತ್ತದೆ. ಕಾರು ತಿರುವು ಪಡೆದುಕೊಳ್ಳಲಿಕ್ಕೂ ಜಾಗವಿಲ್ಲ. ಖಾಲಿ ನಿವೇಶನ ಸ್ಥಳದಲ್ಲಿ ದಟ್ಟವಾಗಿ ಗಿಡಗಳು ಬೆಳೆದಿವೆ. ಅದನ್ನು ಸ್ವಚ್ಛ ಮಾಡಿಕೊಳ್ಳುವಂತೆ ಮಾಲೀಕರಿಗೆ ತಿಳಿಸಿ ಎಂದು ಪುರಸಭೆ ಅವರಕಿಗೆ ಬಹಳಷ್ಟು ಬಾರಿ ಹೇಳಿದ್ದೇವೆ. ಆದರೆ ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ನೀರಿನ ಸಮಸ್ಯೆಯನ್ನೂ ಬಗೆಹರಿಸಿಲ್ಲ. ಇಂತಹ ಪುರುಷಾರ್ಥಕ್ಕೆ ಚುನಾವಣೆಗಳು ಏಕೆ. ಪುರಸಭೆ ಏಕೆ ಬೇಕು. ಈ ಬಾರಿ ಓಟು ಕೇಳಲು ಬರಲಿ ಬುದ್ಧಿ ಕಲಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹಾಯಕ ಆರೋಗ್ಯ ನಿರೀಕ್ಷಕಿ ಪ್ರಭಾವತಿ ಮಾತನಾಡಿ, ’23 ನೇ ವಾರ್ಡಿನ ಮಸೀದಿ ಸೇರಿದಂತೆ ಎಲ್ಲ ಕಡೆಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇವೆ. ಒಂದು ವೇಳೆ ಸ್ವಚ್ಛಗೊಳಿಸದೆ ಇದ್ದರೆ ಸ್ವಚ್ಛ ಮಾಡಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT