ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳೆತ್ತಿದ ಕೆರೆಯಲ್ಲಿ ನೀರು: ಜನರಲ್ಲಿ ಜಲಸಂಭ್ರಮ

ಎಲ್ಲರ ಸಹಕಾರ, ಪರಿಶ್ರಮವೇ ಅಭಿವೃದ್ದಿಯ ಫಲ; ನೀರಿನ ಮಿತಬಳಕೆಗೆ ಮನವಿ
Last Updated 13 ಜುಲೈ 2019, 13:30 IST
ಅಕ್ಷರ ಗಾತ್ರ

ದೇವನಹಳ್ಳಿ: ವರ್ಷವಿಡೀ ಮಳೆ ಸುರಿದರೂ ಕೆರೆಗೆ ನೀರು ಬರುತ್ತಿರಲಿಲ್ಲ. ಕಳೆದ ಒಂದೆರಡು ತಿಂಗಳ ಹಿಂದೆ ಕೆರೆ ಅಭಿವೃದ್ಧಿಪಡಿಸಿದ ನಂತರ ಸುರಿದ ಮಳೆಗೆ ಇಷ್ಟು ನೀರು ಬಂದಿದೆ. ಇದುನಮ್ಮಲ್ಲಿ ಅತೀವ ಸಂತೋಷ ತಂದಿದೆ ಎನ್ನುತ್ತಾರೆ ಕೆರೆ ಪಕ್ಕದ ಗ್ರಾಮಗಳ ಸ್ಥಳೀಯರು.

‘ನಾಲ್ಕು ದಶಕಗಳ ಹಿಂದೆ ಕೆರೆಕೋಡಿ ಹರಿಯಿತು ಎಂದಾಕ್ಷಣ ಬಿತ್ತನೆಗೆ ಭತ್ತ, ಗದ್ದೆಗೆ ಕೊಟ್ಟಿಗೆ ಗೊಬ್ಬರ ಸಿದ್ಧ ಮಾಡಿಕೊಳ್ಳುತ್ತಿದ್ದೆವು. ಅದೇ ವರ್ಷ ಒಣ ಬೇಸಾಯದ ನಂತರ ಡಿಸೆಂಬರ್‌ನಿಂದ ಜನವರಿ 15ರೊಳಗೆ ಭತ್ತದ ಪೈರು ನಾಟಿ ಮಾಡುತ್ತಿದ್ದೆವು. ಆದರೆ ಈಗ ನಾಟಿ ಇರಲಿ, ಮುಂಗಾರು ಮಳೆಯೇ ಇಲ್ಲ. ಗದ್ದೆಗಳೆಲ್ಲ ನೀಲಗಿರಿ ಮರದ ತೋಪುಗಳಾಗಿವೆ. ಕೆರೆ–ಕುಂಟೆಗಳ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಜಲಮೂಲಗಳಿಗೆ ಕುತ್ತು ಬಂದು, ಹನಿ ನೀರಿಗೂ ಹಾಹಾಕಾರವಾಗಿದೆ. ಕೆರೆ–ಕುಂಟೆಗಳನ್ನು ಅಭಿವೃದ್ಧಿ ಪಡಿಸದಿದ್ದರೆ ಜೀವರಾಶಿಗಳ ಜೊತೆಗೆ ಮಾನವನ ಸಂತತಿಯೂ ನಾಶವಾಗುವುದು ಖಚಿತ’ ಎನ್ನುತ್ತಾರೆ ಜಾಲಿಗೆ ಗ್ರಾಮದ ರಾಮಣ್ಣ.

30ರಿಂದ 40 ವರ್ಷಗಳ ಹಿಂದೆ ಒಂದೆರಡು ಬಾರಿ ಕೆರೆ ತುಂಬಿದರೆ ಸಾಕು. ನೀರು ಸೇದುವ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕೈಗೆಟಕುವಂತಿತ್ತು. ಈಗ 1,200ರಿಂದ 1,400 ಅಡಿ ಆಳ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಬಳಕೆಗಿಂತ ದುಪ್ಪಟ್ಟು ನೀರನ್ನು ವ್ಯರ್ಥ ಮಾಡುತ್ತಿದ್ದೇವೆ. ನಲ್ಲಿಗಳಲ್ಲಿ ವ್ಯರ್ಥವಾಗಿ ಹರಿ ಬಿಡುವುದು, ಕೊಳಾಯಿಯಿಂದಲೇ ಪೈಪ್ ಜೋಡಣೆ ಮಾಡಿ ವಾಹನಗಳನ್ನು ತೊಳೆಯುವುದು, ಮನೆಯ ಮೇಲಿನ ಟ್ಯಾಂಕರ್ ತುಂಬಿ ನೀರು ಹೊರ ಹೋಗುತ್ತಿದ್ದರೂ ಅದರ ಬಗ್ಗೆ ಲಕ್ಷ್ಯ ವಹಿಸದಿರುವುದು ನಿರನ್ನು ವೃಥಾ ಪೋಲು ಮಾಡಿದಂತೆ. ಹೀಗೆ ಮಾಡಿದರೆ ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ನೀರು ಸಿಗುವುದಾದರು ಹೇಗೆ ಎಂದು ಕನ್ನಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

‘ಕೆರೆ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಅವರೇ ಪ್ರೇರಣೆ. ಅವರ ಸಲಹೆ ಸ್ಥಳೀಯರ ಕಣ್ಣು ತೆರೆಸಿದೆ. ಜಲಾಂದೋಲನದ ರೂವಾರಿ ಎಂದರೂ ತಪ್ಪಾಗಲಾರದು. ಅವರ ಸಲಹೆ ಒಂದೆರಡು ಕೆರೆಗೆ ಸೀಮಿತವಾಗಿಲ್ಲ. ಜಿಲ್ಲೆಯ ಹತ್ತಾರು ಕೆರೆಗಳ ಅಭಿವೃದ್ಧಿಗೆ ಪ್ರೇರಣೆಯಾಗಿದೆ’ ಎಂದು ಕನ್ನಮಂಗಲ ಗ್ರಾಮದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಹೇಳಿದರು.

‘ಕೆರೆ ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಮುಖಂಡರು ಸಹಕರಿಸಿದ್ದಾರೆ. ಗ್ರಾಮದ ಹಿತದೃಷ್ಟಿಯಿಂದ ಕೆರೆ ಅಭಿವೃದ್ಧಿ ಪಡಿಲಾಗಿದೆ. ಪ್ರಸ್ತುತ ₹ 50 ಲಕ್ಷ ವೆಚ್ಚದಲ್ಲಿ ಕನ್ನಮಂಗಲ ಕೆರೆ ಅಭಿವೃದ್ಧಿಯಾಗಿದೆ. ಇದು ಇತರರಿಗೂ ಪ್ರೇರಣೆಯಾಗಿ, ದಾನಿಗಳು ಸಹಕರಿಸಲು ಮುಂದೆ ಬಂದಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT