ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟೆ ನಿಂತರೆ ಬಿಂದಿಗೆ ನೀರು!

ಹೆಚ್ಚುತ್ತಿರುವ ನೀರಿನ ಕೊರತೆ: ಸಾರ್ವಜನಿಕರ ಪರದಾಟ
Last Updated 24 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ. ಹಾಗೆಯೇ ಕುಡಿಯುವ ನೀರಿನ ಕೊರತೆಯೂ ಹೆಚ್ಚುತ್ತಿದೆ.

ಸತತ ಮೂರು ವರ್ಷಗಳಿಂದ ಮಳೆ ಇಲ್ಲದೆ ಕೆರೆ ಕುಂಟೆಗಳಲ್ಲಿ ಒಂದು ಹನಿಯೂ ನೀರಲ್ಲ. ಅಂತರ್ಜಲಕುಸಿಯುತ್ತಿದೆ. ಕೊಳವೆ ಬಾವಿಗಳೂ ಬತ್ತಿ ಹೋಗುತ್ತಿವೆ. ಕೊಳವೆ ಬಾವಿ ಕೊರೆದರೆ ನೀರು ಸಿಗುವ ಖಾತರಿ ಇಲ್ಲ. ಇದ‌ನ್ನು ಅರಿತಿರುವ ಟಾಸ್ಕ್‌ಫೋರ್ಸ್ ಅಧಿಕಾರಿಗಳು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳೇ ಹೇಳುತ್ತಾರೆ.

ತಾಲ್ಲೂಕಿನಲ್ಲಿ 44 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 28 ಘಟಕ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಕೆಲವು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿವೆ. ಕೆಲವು ಕೊಳವೆ ಬಾವಿಯಲ್ಲಿ ನೀರಿಲ್ಲದ ಕಾರಣ ಘಟಕ ಆರಂಭಗೊಂಡರೂ ಪ್ರಯೋಜನ ಇಲ್ಲದಂತಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿವೆ. ಅನೇಕ ಗ್ರಾಮಗಳಲ್ಲಿ ಅಕ್ಕಪಕ್ಕದ ಖಾಸಗಿ ತೋಟದಿಂದ ಒಂದೆರೆಡು ಬಿಂದಿಗೆ ನೀರು ತರಬೇಕಾದ ಸ್ಥಿತಿ ಇದೆ.ತಾಲ್ಲೂಕಿನ 5 ಗ್ರಾಮಗಳಿಗೆಮಾರ್ಚ್ 15ರಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು.ಪ್ರಸ್ತುತ 26 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ.

ಸರ್ಕಾರ ಎಷ್ಟು ದಿನ ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಕೊಡಲು ಸಾಧ್ಯ. ಜಲ ಮೂಲ ಸಂರಕ್ಷಿಸಿ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಹೇಗೆ. ಮುಂದಿನ ವರ್ಷ ಇದೇ ಪರಿಸ್ಥಿತಿ ಮರುಕಳಿಸಿದರೆ ಏನು ಮಾಡಬೇಕು ಎನ್ನುತ್ತಾರೆ ಮಾದಿಗ ದಂಡೋರ ತಾಲ್ಲೂಕು ಘಟಕ ಅಧ್ಯಕ್ಷ ಮಾರಪ್ಪ ಪ್ರಶ್ನಿಸುತ್ತಾರೆ.

‘ನಮ್ಮ ಊರಿನಲ್ಲಿ ಸರ್ಕಾರ ಕೊರೆಯಿಸಿರುವ ಕೊಳವೆ ಬಾವಿಯ ಮೋಟಾರ್‌ ಚಾಲೂ ಮಾಡಿದರೆ ಶಾಕ್‌ ಹೊಡೆಯುತ್ತಿದೆ. ಅರ್ಥಿಂಗ್‌ ಸಮಸ್ಯೆ ಇದೆ. ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಈಗ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದೇನೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗೋಕರೆ ಗ್ರಾಮದ ಲಕ್ಷ್ಮಿ ನಾರಾಯಣಗೌಡ ಹೇಳಿದರು.

ಪುರಸಭೆ 15ನೇ ವಾರ್ಡಿನಲ್ಲಿ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. 15 ದಿನಗಳವರೆಗೆ ಶೇಖರಣೆ ಮಾಡುವಷ್ಟು ಪರಿಕರವಿಲ್ಲ. ಎತ್ತರದಲ್ಲಿರುವ ಮನೆಗಳಿಗೆ ನೀರು ತಲುಪುವುದೇ ಇಲ್ಲ. ಟ್ಯಾಂಕರ್‌ನಲ್ಲಿಯು ಪೂರೈಕೆ ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಗೌರಮ್ಮ.

ಎಂಟು ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ನಲ್ಲಿಯಲ್ಲಿ ತುಂಬಾ ಸಣ್ಣಗೆ ಬರುತ್ತದೆ. ಗಂಟೆಗಟ್ಟಲೆ ನಿಂತರೆ, ಒಂದು ಬಿಂದಿಗೆ ತುಂಬುತ್ತೆ ಎಂದು ಕೊಯಿರಾ ಗ್ರಾಮ ಪಂಚಾಯಿತಿ ಮನಗೊಂಡನಹಳ್ಳಿ ಮತ್ತು ಜ್ಯೋತಿಪುರದ ಮಹಿಳೆಯರು ಗೋಳು ಹೇಳಿಕೊಂಡರು.

‘ಮುಂದಿನ ದಿನಗಳಲ್ಲಿ ₹700 ಆದರೂ ಅಚ್ಚರಿ ಇಲ್ಲ. ಟ್ಯಾಂಕರ್ ಮಾಲಿಕರು ಕೊಳವೆ ಬಾವಿ ಮಾಲಿಕರಿಂದ ₹250 ರಿಂದ ₹300ಗೆ ಖರೀದಿಸಿ ನಾವು ಬೇರೆಯವರಿಗೆ ಮಾರಾಟ ಮಾಡಬೇಕು. ಪರಿಸ್ಥಿತಿ ಈ ರೀತಿ ಇದೆ ಎನ್ನುತ್ತಾರೆ’ ನೀರು ಪೂರೈಕೆ ಟ್ಯಾಂಕರ್ ಮಾಲೀಕ ಸೀನಪ್ಪ.

ಕುಡಿಯುವ ನೀರು ಅಭಾವವಿರುವ ಕಡೆ ಟ್ಯಾಂಕರ್ ಮೂಲಕ ಪೂರೈಕೆ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿರ್ಲಕ್ಷ್ಯವಹಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಿರಿಜಾ ಶಂಕರ್ ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಇದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ವಾಹನ ತೊಳೆಯುವುದು, ಮನೆಯಂಗಳ ಶುಚಿಗೊಳಿಸುವುದು ಮಾಡಿದರೆ ನೀರು ಎಲ್ಲಿಂದ ತರಬೇಕು ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT