‘ಜಲ ಮೂಲಗಳ ಸಂರಕ್ಷಣೆ ಜಾಗತಿಕ ಸಮಸ್ಯೆ’

7

‘ಜಲ ಮೂಲಗಳ ಸಂರಕ್ಷಣೆ ಜಾಗತಿಕ ಸಮಸ್ಯೆ’

Published:
Updated:
Deccan Herald

ದೊಡ್ಡಬಳ್ಳಾಪುರ: ತ್ಯಾಜ್ಯ ವಿಲೇವಾರಿ ಮತ್ತು ನೀರಿನ ಮೂಲಗಳ ಸಂರಕ್ಷಣೆ ವಿಶ್ವದ ಬಹುದೊಡ್ಡ ಸಮಸ್ಯೆ ಆಗಿದೆ ಎಂದು ನಾಗದಳ ಸಂಚಾಲಕ ಎಸ್.ಎಸ್. ಬದ್ರಿನಾಥ್ ಹೇಳಿದರು.

ನಗರದ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಸೋಮವಾರ ಸ್ವಚ್ಛ ಭಾರತ್ ಅಭಿಯಾನ ಅಂಗವಾಗಿ ಎನ್‍ಎಸ್‍ಎಸ್ ಮತ್ತು ಸ್ವಚ್ಛ ಭಾರತ ಘಟಕಗಳ ಸಹಯೋಗದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೇಕ ಕಾರಣಗಳಿಂದ ನೀರಿನ ಸೆಲೆಗಳು ಇಂದು ಮಲಿನವಾಗುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ. ನಾವು ನಮ್ಮ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಚಿಂತನೆ ಅಳವಡಿಸಿಕೊಳ್ಳಬೇಕು. ಆ ಮೂಲಕ ಜಾಗತಿಕ ಪ್ರಾಕೃತಿಕ ವಿಪತ್ತುಗಳನ್ನು ತಡೆಯಬಹುದು ಎಂದರು.

ದೊಡ್ಡಬಳ್ಳಾಪುರದ ಜೀವನದಿಯಾಗಿದ್ದ ಅರ್ಕಾವತಿ ಮತ್ತು ಅದರ ಅಚ್ಚುಕಟ್ಟು ಪ್ರದೇಶ ಇಂದು ಬರಿದಾಗಿದೆ. ಈ ಜಲಾನಯನ ಪ್ರದೇಶದಲ್ಲಿ ಬರುವ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ರಾಜಕಾಲುವೆಗಳು ಅವ್ಯಾಹತವಾಗಿ ಒತ್ತುವರಿಯಾಗುತ್ತಲೇ ಇವೆ. ಇದರಿಂದಾಗಿ ಇಲ್ಲಿನ ಅನೇಕ ಜೀವಸಂಕುಲ ವಿನಾಶ ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಆರ್. ರವಿಕಿರಣ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯನಾಶ ನಿರಂತರವಾಗಿ ನಡೆಯುತ್ತಿದೆ. ಆಸ್ಪತ್ರೆ ಮತ್ತು ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಸಾಮಾಜಿಕ ಪರಿಸ್ಥಿತಿ ಹದಗೆಡುತ್ತಿರುವ ಲಕ್ಷಣ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಆಲೋಚಿಸಬೇಕು. ಅಭಿವೃದ್ಧಿ ನಿಸರ್ಗ ಮತ್ತು ಮನುಷ್ಯನ ಆರೋಗ್ಯದಾಯಕ ಲಕ್ಷಣ ಎನಿಸಿದಾಗ ಮಾತ್ರ ಅರ್ಥಪೂರ್ಣ ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಿ. ಚೈತ್ರ, ಎನ್‍ಎಸ್‍ಎಸ್ ಅಧಿಕಾರಿ ಎಂ. ಚಿಕ್ಕಣ್ಣ, ಸ್ವಚ್ಛ ಭಾರತ ಅಭಿಯಾನ ಘಟಕದ ಸಂಚಾಲಕ ಕೆ. ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !