ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹92 ಕೋಟಿ ವೆಚ್ಚದಲ್ಲಿ ಉಗ್ರಾಣ ಕಟ್ಟಡ

ನಿಗಮದ ಅಧ್ಯಕ್ಷ ಡಿ.ವಿ.ಪ್ರಸಾದ್
Last Updated 19 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ದೇವನಹಳ್ಳಿ: ದೂರದೃಷ್ಟಿ ಚಿಂತನೆಯಿಂದ ₹92 ಕೋಟಿ ವೆಚ್ಚದಲ್ಲಿ ಕೇಂದ್ರೀಯ ಉಗ್ರಾಣ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಉಗ್ರಾಣ ನಿಗಮದ ಅಧ್ಯಕ್ಷ ಡಿ.ವಿ.ಪ್ರಸಾದ್ ಹೇಳಿದರು.

ಇಲ್ಲಿನ ಕೆ.ಐ.ಡಿ.ಬಿ ಮತ್ತು ಐ.ಟಿ.ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಈಗ 422 ಉಗ್ರಾಣ ಕೇಂದ್ರಗಳಿದ್ದು 10 ಲಕ್ಷ ಟನ್‌ನಷ್ಟು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ರಾಜ್ಯದಲ್ಲಿ 4.72 ಲಕ್ಷ ಟನ್‌ಷ್ಟು ಸಂಗ್ರಹಣಾ ಸಾಮರ್ಥ್ಯವಿದೆ. ಅದನ್ನು ಇನ್ನಷ್ಟು ಹೆಚ್ಚಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಇಲ್ಲಿ 14.20 ಎಕರೆ ಪ್ರದೇಶದಲ್ಲಿ ನೂತನ ಉಗ್ರಾಣ ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ 4.5 ಲಕ್ಷ ಚದರಡಿ, ಎರಡನೇ ಹಂತದಲ್ಲಿ 8 ಲಕ್ಷ ಚದರಡಿ ನಿರ್ಮಾಣ ಕಾರ್ಯ ನಡೆಯಲಿದೆ. ಒಟ್ಟು 20 ಮಹಡಿಗಳ ಕಟ್ಟಡವಾಗಲಿದೆ. ಈ ಪೈಕಿ 40 ಸಾವಿರ ಚದರಡಿ ಡೇಟಾ ವೇರ್ ಹೌಸಿಂಗ್ ಇರಲಿದ್ದು ವಾಣಿಜ್ಯ ಕಚೇರಿಗೆ ಜಾಗ ಇರಲಿದೆ ಎಂದು ಹೇಳಿದರು.

ಸಿ.ಪಿ.ಡ್ಲ್ಯೂ.ಡಿ ಯೋಜನಾಧಿಕಾರಿ ಕೆ.ಸಿ. ಸಿಂಗ್ ಮಾತನಾಡಿ, ಈ ಯೋಜನೆ ರಾಜ್ಯದಲ್ಲಿ ಒಂದು ಮಹತ್ವದ ಘಟ್ಟ. ಈ ಪ್ರದೇಶದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಉತ್ಪನ್ನಗಳ ಸಂಗ್ರಹಣೆಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕನಿಷ್ಠ ಒಂದು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು.

ಬೆಂಗಳೂರು ಉತ್ತರ ಕಾರಿಡಾರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ನೂತನ ಉಗ್ರಾಣವು ಸ್ಯಾಟಲೈಟ್ ನಗರ ರಿಂಗ್ ರಸ್ತೆಗೆ ಸನಿಹದಲ್ಲಿದೆ ಎಂದು ಹೇಳಿದರು.

1957 ರಲ್ಲಿ ಉಗ್ರಾಣ ನಿಗಮ ಆರಂಭಗೊಂಡಿತು. ಆಗ 7 ಸಾವಿರ ಮೆಟ್ರಿಕ್ ಟನ್‌ಷ್ಟು ಸಂಗ್ರಹ ಸಾಮರ್ಥ್ಯವಿತ್ತು. ಪ್ರಸ್ತುತ 10.1 ಲಕ್ಷ ಟನ್ ಸಾಮರ್ಥ್ಯವಿದೆ. ದೇಶದಲ್ಲಿ ಯಾವ ರೀತಿ ಪ್ರಗತಿಯಾಗುತ್ತಿದೆ ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಪಾಲುದಾರರಿಗೆ ವಿಶ್ವಾಸಾರ್ಹವಾದ ಕೈಗೆಟಕುವ ದರದಲ್ಲಿ ಮೌಲ್ಯವರ್ಧಿತ ಮತ್ತು ಸಮಗ್ರ ವೇರ್ ಹೌಸಿಂಗ್ ಹಾಗೂ ಲಾಜಿಸ್ಟಿಕ್ ಪರಿಹಾರಗಳನ್ನು ಪರಿಸರ ಸ್ನೇಹಿರೂಪದಲ್ಲಿ ನೀಡುವುದು ಇದರ ಉದ್ದೇಶ ಎಂದು ಹೇಳಿದರು.

ಐ.ಆರ್.ಎಸ್.ಇ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಆರುಣ್ ಕುಮಾರ್ ಶ್ರೀವಾಸ್ತವ ಮಾತನಾಡಿ, ಕಸ್ಟಂ ಬಾಂಡೆಡ್ ವೇರ್ ಹೌಸಸ್, ಕಂಟೇನರ್, ಫ್ರೈಟ್ ಸ್ವೇಷನ್ಸ್ , ಇನ್ ಲ್ಯಾಂಡ್‌ ಕ್ಲಿಯರೆನ್ಸ್ ಡಿಪೊಗಳು, ಏರ್ ಕಾರ್ಗೊ ಕಾಂಪ್ಲೆಕ್ಸ್, ಆಹಾರ ಉತ್ಪನ್ನಗಳ ಸಂಗ್ರಹಣೆ, ಸಾಗಾಣಿಕೆ, ವಿತರಣೆ, ಸ್ವಚ್ಛಗೊಳಿಸುವಿಕೆ ಮತ್ತು ವಿವಿಧ ಏಜೆನ್ಸಿಗಳಿಗೆ ಉಗ್ರಾಣಗಳ ನಿರ್ಮಾಣ ಮತ್ತು ಮೂಲ ಸೌಕರ್ಯಗಳ ಬಗ್ಗೆ ತರಬೇತಿ ನೀಡುವ ವ್ಯವಸ್ಥೆ ಇಲ್ಲಿ ಇರಲಿದೆ ಎಂದು ಹೇಳಿದರು.

ಉಗ್ರಾಣ ನಿಗಮ ನಿರ್ದೇಶಕರಾದ ಚಾರ್ಲ್ಸ್, ಆರ್.ಕೆ.ಕೃಷ್ಣ, ನಂದಿತಾ ಗುಪ್ತ, ಪ್ರಣಯ್ ಪ್ರಭಾಕರ್, ಉಗ್ರಾಣ ನಿಗಮದ ವ್ಯವಸ್ಥಾಪಕ ಎಂ.ಆರ್.ಶಿವಾನಂದ ರೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT