ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ನೋಟಿಸ್‌ಗೆ ನೇಕಾರರ ಆಕ್ರೋಶ

ಸಿ.ಎಂ ಯಡಿಯೂರಪ್ಪ ಘೋಷಣೆಗೆ ಕವಡೆಕಾಸಿನ ಕಿಮ್ಮತ್ತು ನೀಡಿದ ಬ್ಯಾಂಕ್‌ಗಳು
Last Updated 16 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ವಿಜಯಪುರ: ನೇಕಾರರ ₹1ಲಕ್ಷದವರೆಗೂ ಸಾಲಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದರೂ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ಗಳು ಕಳುಹಿಸುತ್ತಿರುವ ನೋಟಿಸ್‌ಗೆ ನೇಕಾರ ಸಮುದಾಯ ಬೇಸರ ವ್ಯಕ್ತಪಡಿಸಿದೆ.

ನೇಕಾರಿಕೆ ಮಾಡುವುದೇ ದುಬಾರಿ ಆಗಿರುವ ಸಂದರ್ಭದಲ್ಲಿ ಬ್ಯಾಂಕ್‌ಗಳು ನಿರಂತರವಾಗಿ ಕಿರುಕುಳ ನೀಡುವುದು ಸರಿಯಲ್ಲ. ಸರ್ಕಾರದ ಆದೇಶದ ಬಗ್ಗೆ ಪ್ರಸ್ತಾಪಿಸಿದರೆ ‘ಸರ್ಕಾರ ಇಂದು ಇರುತ್ತದೆ. ನಾಳೆ ಹೋಗುತ್ತದೆ. ಆದೇಶ ಜಾರಿಯಾಗಬೇಕಾದರೆ ಕನಿಷ್ಠ 6 ತಿಂಗಳು ಕಾಯಬೇಕು ಎಂದು ಬ್ಯಾಂಕ್ ಅಧಿಕಾರಿಗಳೇ ಭ್ರಮನಿರಸನದಿಂದ ಮಾತನಾಡುತ್ತಾರೆ’ ಎಂದು ಸ್ಥಳೀಯರಾದ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಮಾರುಕಟ್ಟೆಯಲ್ಲಿ ಸೀರೆಗೆ ಬೇಡಿಕೆ ಇಲ್ಲ: ಕಚ್ಚಾಮಾಲು ಸೂರತ್‌ನಿಂದ ತರಬೇಕು. ಮಳೆಗಾಲದಿಂದಾಗಿ ‌ಕಚ್ಚಾಮಾಲು ಸಿಗುತ್ತಿಲ್ಲ. ಬಟ್ಟೆ ನೇಯುವಾಗ ಹೆಚ್ಚು ವೆಸ್ಟೇಜ್‌ ಆಗುತ್ತಿದೆ. ಇದರ ನಷ್ಟವನ್ನೇ ನೇಕಾರರೇ ಭರಿಸಬೇಕು. ₹1ಸಾವಿರಕ್ಕೆ ಮಾರಾಟವಾಗುತ್ತಿದ್ದ ಸೀರೆ ₹600ಕ್ಕೆ ಮಾರಾಟವಾಗುತ್ತಿದೆ. ವಾರಪೂರ್ತಿ ದುಡಿದರೂ ಲಾಭ ಅಷ್ಟಕ್ಕೆಷ್ಟೆ. ಈ ಸಂಪಾದನೆಯಿಂದ ಕುಟುಂಬ ಪೋಷಣೆ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಕೊಡಿಸುವುದು ಹೇಗೆ ? ಮುಂದಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದಾರೂ ಹೇಗೆ ? ಎನ್ನುವ ಚಿಂತೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡರು.

ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಇನ್ನು‌ ನೇಕಾರರ ಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ₹3ಲಕ್ಷ ಬ್ಯಾಂಕ್‌ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ನೇಕಾರರು ಅನಾರೋಗ್ಯಪೀಡಿತರಾದರೆ ಆಸ್ಪತ್ರೆ ಖರ್ಚಿಗೆ ಬಿಡಿಗಾಸು ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ನೇಕಾರರ ₹1ಲಕ್ಷದವರೆಗೂ ಸಾಲಮನ್ನಾ ಮಾಡಿರುವುದಾಗಿ ಘೋಷಣೆ ಮಾಡಿದೆ. ಆದರೆ, ಅನುಷ್ಠಾನಗೊಂಡಿಲ್ಲ. ಸರ್ಕಾರ ಹೊರಡಿಸಿರುವ ಆದೇಶ ಗೊಂದಲಮಯವಾಗಿದೆ. ಕೂಡಲೇ ಸರಿಪಡಿಸಬೇಕೆಂದು ನೇಕಾರ ಚಂದ್ರಪ್ಪ ಒತ್ತಾಯಿಸಿದರು.

ನೇಕಾರರ ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಯಾವುದೇ ಆದೇಶ ಬಂದಿಲ್ಲ. ಸಹಕಾರಿ ಬ್ಯಾಂಕ್‌ಗಳಲ್ಲಿ ಮಾತ್ರ ₹1ಲಕ್ಷದವರೆಗೂ ಸಾಲಮನ್ನಾ ಎನ್ನುವ ಮಾಹಿತಿ ಇದೆ ಎನ್ನುತ್ತಾರೆ ರಾಷ್ಟ್ರೀಕೃತ ಬ್ಯಾಂಕಿನ ವ್ಯವಸ್ಥಾಪಕರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT