ಬುಧವಾರ, ಸೆಪ್ಟೆಂಬರ್ 18, 2019
25 °C

‌‘ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು’

Published:
Updated:
Prajavani

ವಿಜಯಪುರ: ಜ್ಞಾನವೇ ನಿಜವಾದ ಸಂಪತ್ತು. ಸಾಮರ್ಥ್ಯವೇ ಶಕ್ತಿ ಎಂಬುದನ್ನು ಸಾಬೀತುಪಡಿಸಲು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆ ಅಗತ್ಯ ಎಂದು ಮುಖಂಡ ಕೆ.ಮುನಿರಾಜು ಹೇಳಿದರು.

ಇಲ್ಲಿನ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಗತ ಸಿಂಚನ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಾಧಕನಿದ್ದಾನೆ. ಅವನನ್ನು ಎಚ್ಚರಗೊಳಿಸಿ ಜೀವನದಲ್ಲಿ ಏನಾದರೂ ಸಾಧಿಸಬೇಕು. ದೃಢನಿಷ್ಠೆ, ಏಕಾಗ್ರತೆ, ಛಲ, ಸತತ ಪ್ರಯತ್ನ, ಸಮಯ ಪ್ರಜ್ಞೆ, ನಿರಂತರ ಅಧ್ಯಯನ  ಇದ್ದರೆ ಯಶಸ್ಸು ನಮ್ಮದಾಗುತ್ತದೆ ಎಂದರು.

ಸಾಹಿತಿ ಚಂದ್ರಶೇಖರ ಹಡಪದ್ ಮಾತನಾಡಿ,ವಿದ್ಯೆ ಜತೆಗೆ ಉತ್ತಮ ಸಂಸ್ಕಾರ ಅಳವಡಿಸಿಕೊಂಡು ಹೆತ್ತವರಿಗೆ, ಕಲಿಸಿದ ಶಿಕ್ಷಕರಿಗೆ ಗೌರವ ನೀಡಬೇಕು. ವಿದ್ಯಾರ್ಥಿಗಳು ಇಷ್ಟಪಟ್ಟು ಓದಬೇಕು. ಪಠ್ಯಪುಸ್ತಕದ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಹೊಂದಬೇಕು. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳಾಗಬೇಕು. ವಿದ್ಯಾರ್ಥಿ ಜೀವನ ವಿಶ್ರಾಂತಿ ಸಮಯವಲ್ಲ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮದ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು; ಸೋಮಾರಿಗಳ ಸ್ವತ್ತಲ್ಲ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದರು.

ಉಪನ್ಯಾಸಕ ಮಂಜುನಾಥ್ ಮಾತನಾಡಿ, ಕೆಲವರಿಗೆ ಏಕಾಗ್ರತೆ ಹುಟ್ಟಿನಿಂದ ಸಹಜವಾಗಿ ಬಂದರೆ ಇನ್ನು ಕೆಲವರು ಅದನ್ನು ವಿಕಸನಗೊಳಸಿಕೊಳ್ಳಬೇಕಾಗುತ್ತದೆ. ಜೀವನದಲ್ಲಿ ಏನಾದರೂ ಸಾಧಿಸಬಲ್ಲೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಿದರೆ ಖಂಡಿತವಾಗಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.

ಕಳೆದ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಎಂ.ವಿ.ನಾಯ್ಡು ಹಾಗೂ ಮಹಾತ್ಮಾಂಜನೇಯ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಖಂಡ ರಾಜಗೋಪಾಲ್, ಉಪನ್ಯಾಸಕರಾದ ಗೋವಿಂದಪ್ಪ, ಭಾರತಿ, ಹರೀಶ್, ಮುರಳಿ, ಗಂಗಾಧರ್ ಇದ್ದರು.

Post Comments (+)