ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಕೆಲಸವೂ ಜಿಡಿಪಿ ಬೆಳವಣಿಗೆಗೆ ಪೂರಕ: ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ

ಮಹಿಳೆಯರನ್ನು ಕುರಿತು ವ್ಯಂಗ್ಯವಾಡುವವರನ್ನು ಪಕ್ಷಾತೀತವಾಗಿ ಖಂಡಿಸಿ
Last Updated 2 ಏಪ್ರಿಲ್ 2019, 9:40 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘2020ರ ರಾಷ್ಟ್ರೀಯ ಜನಗಣತಿಯಲ್ಲಿ ಮಹಿಳೆಯರು ಮನೆಯಲ್ಲಿ ನಿರ್ವಹಿಸುವ ಕೆಲಸವನ್ನು ಸಹ ‘ಜಿಡಿಪಿ ಬೆವಣಿಗೆಗೆ ಪೂರಕ’ ಎಂದು ಪರಿಗಣಿಸಿ ದಾಖಲಿಸಬೇಕು ಎನ್ನುವ ಒತ್ತಾಯ ಇಡೀ ದೇಶದಲ್ಲಿ ನಡೆಯುತ್ತಿದೆ’ ಎಂದು ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ತಿಳಿಸಿದರು.

ಅವರು ನಗರದ ಮಹಿಳಾ ಸಮಾಜದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾ ಭವನದ ಉದ್ಘಾಟನೆ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತಸದ ವಿಷಯ. ಆದರೆ ಉದ್ಯೋಗಕ್ಕೆ ಹೋಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಸ್ಥಳೀಯ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೇ 50ರಷ್ಟು ಮೀಸಲಾತಿ ಸೌಲಭ್ಯ ದೊರೆತ ನಂತರ, ಮಹಿಳೆಯರು ಆಡಳಿತ ನಡೆಸಿರುವ ಬಹುತೇಕ ಕಡೆಗಳಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಉತ್ತಮವಾಗಿರುವುದನ್ನು ವಿಶ್ವ ಸಂಸ್ಥೆಯ ಪ್ರಗತಿ ಪರಿಶೀಲನ ತಂಡವೇ ಗುರುತಿಸಿದೆ. ಹೀಗಾಗಿ ಮಹಿಳೆ ಅಭಿವೃದ್ಧಿಯ ಕಾರ್ಯಸೂಚಿಯಲ್ಲೂ ಭಾಗವಹಿಸಬೇಕು. ಆಕೆ ಅಭಿವೃದ್ಧಿಯ ಫಲಾನುಭವಿಯಷ್ಟೇ ಅಲ್ಲ. ಶಾಸನ ಸಭೆಯಲ್ಲೂ ಮಹಿಳೆಗೆ ಸಮಾನ ಸ್ಥಾನ ದೊರೆಯುವಂತಾಗಬೇಕು’ ಎಂದರು.

‘ಚುನಾವಣಾ ಸಂದರ್ಭದಲ್ಲಿ ಮಹಿಳೆಯನ್ನು ಕುರಿತು ಪುರುಷರು ವ್ಯಂಗ್ಯವಾಗಿ ಮಾತಾಡುತ್ತಿದ್ದಾರೆ.ಇದು ಮಹಿಳಾ ಸಮುದಾಯಕ್ಕೆ ಮಾಡುವ ಅಪಮಾನವಾಗಿದೆ. ಇದನ್ನು ಪಕ್ಷಾತೀತವಾಗಿ ಎಲ್ಲ ಮಹಿಳೆಯರು ಖಂಡಿಸಬೇಕು. ಹೆಣ್ಣು ಇಂದು ಆಡಳಿತ ಕ್ಷೇತ್ರದ ಎಲ್ಲ ಉನ್ನತ ಹಂತದಲ್ಲೂ ತನ್ನ ಕರ್ತವ್ಯವನ್ನು ಯಶಸ್ಸಿಯಾಗಿ ನಿಭಾಯಿಸಿದ್ದಾಳೆ. ಹೀಗಿರುವಾಗ ಮಹಿಳೆಯರು ಮತದಾನದಲ್ಲೂ ಸಕ್ರಿಯವಾಗಿ ಭಾಗಿಯಾಗಬೇಕು. ಇದರ ಜೊತೆಗೆ ತಮ್ಮ ಪಾಲಿನ ಪ್ರಾತಿನಿಧ್ಯವನ್ನು ಪಡೆಯಬೇಕು. ಶಾಸನ ಸಭೆಯಲ್ಲೂ ಮಹಿಳೆಯ ಪಾಲು ಸಮಾನವಾಗಿ ದೊರೆಯುವಂತೆ ಕೇಳಿ ಪಡೆಯಬೇಕು. ಪುರುಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಅದಾಗಿಯೇ ಯಾವುದೂ ದೊರೆಯಲು ಸಾಧ್ಯವಿಲ್ಲ’ ಎಂದರು.

ನೂತನ ಭವನವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ‘ಸಾಧನೆ ಮಾಡಿರುವ ಯಾರನ್ನೇ ನೋಡಿ. ಅವರೆಲ್ಲರು ಸ್ವಂತ ಪರಿಶ್ರಮ ಮತ್ತು ಏನನ್ನಾದರೂ ಸಾಧಿಸುವ ಛಲದಿಂದ ಮುಂದೆ ಬಂದವರೇ ಹೊರತು ಅವಕಾಶಕ್ಕಾಗಿ ಕಾದು ಕೂತವರಲ್ಲ. ದೊಡ್ಡಬಳ್ಳಾಪುರದ ಮಟ್ಟಿಗೆ ನೇಕಾರಿಕೆಯಲ್ಲಿ ಮಹಿಳೆಯರು ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಸೀರೆ ನೇಯುವುದರ ಜೊತೆಗೆ, ಸೀರೆಯ ಎಲ್ಲ ಮೌಲ್ಯವರ್ಧನೆಗಳು ಇಲ್ಲಿಯೇ ಸಿದ್ದಗೊಂಡು ತಮ್ಮದೇ ಬ್ರ್ಯಾಂಡ್‌ ರೂಪದಲ್ಲಿ ನೇರವಾಗಿ ಗ್ರಾಹಕರ ಕೈಗೆ ಸೇರುವಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘25 ಸಾವಿರ ವಿದ್ಯುತ್‌ ಮಗ್ಗಗಳು ಇರುವ ನಗರದಲ್ಲಿ ಶತಮಾನಗಳಿಂದಲೂ ಕೇವಲ ಸೀರೆ ನೇಯಲು ಮಾತ್ರ ಸೀಮಿತವಾಗಿರುವುದು ಆತಂಕಕಾರಿ ಸಂಗತಿ. ಸೀರೆ ನೇಯ್ಗೆಯ ಸುತ್ತಲು ಸಾಕಷ್ಟು ಅವಕಾಶಗಳಿವೆ. ಇವುಗಳನ್ನು ಯುವ ಸಮುದಾಯ ಬಳಸಿಕೊಂಡು ಬ್ರ್ಯಾಂಡ್‌ ರೂಪ ಕೊಡಬೇಕು. ಇದೇ ಸ್ಟಾಟ್‌ಆಪ್‌ ಯೋಜನೆ’ ಎಂದು ಅವರು ಹೇಳಿದರು.

ನಾಗರಕೆರೆ ಅಭಿವೃದ್ಧಿಗೆ ಮಹಿಳಾ ಸಮಾಜದ ವತಿಯಿಂದ ₹ 25 ಸಾವಿರ ದೇಣಿಗೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್‌.ಪ್ರಭಾ ವಹಿಸಿದ್ದರು. ಉಪಾಧ್ಯಕ್ಷೆ ಕೆ.ಜೆ.ಕವಿತಾ, ಕಾರ್ಯದರ್ಶಿ ಎಲ್‌.ಸಿ.ದೇವಕಿ, ಖಜಾಂಚಿ ಜಿ.ವಿ.ಯಶೋಧ, ನಿರ್ದೇಶಕರಾದ ಎಂ.ಕೆ.ವತ್ಸಲಾ, ವಿ.ನಿರ್ಮಲ, ಎಸ್‌.ಗೌರಮ್ಮ, ಟಿ.ಪಿ.ವರಲಕ್ಷ್ಮೀ, ಬಿ.ಎ.ಗಿರಿಜಾ, ಸಲಹಾ ಸಮಿತಿಯ ಸುಜಾತಾ ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT