ಬುಧವಾರ, ಆಗಸ್ಟ್ 4, 2021
20 °C
ಇಂದು ವಿಶ್ವ ಪರಿಸರ ದಿನ

‘ಮನೆ ಮುಂದೆ ಗಿಡ ನೆಡಿ’

ವಡ್ಡನಹಳ್ಳಿ ಬೊಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ವಾರ್ಷಿಕವಾಗಿ ಜೂನ್‌ 5ರಂದು ಆಚರಿಸುವ ವಿಶ್ವ ಪರಿಸರ ದಿನಾಚರಣೆ ಬರಿ ಒಂದೆರಡು ಸಸಿ ನೆಡುವ ಕಾರ್ಯಕ್ಕೆ ಸಿಮಿತವಾಗದೆ ಪ್ರತಿ ಮನೆಗಳ ಮುಂದೆ ಆಚರಣೆಯಾಗಬೇಕು’ ಎಂಬುದು ಪರಿಸರವಾದಿಗಳ ಅಭಿಪ್ರಾಯ.

2019–20ನೇ ಸಾಲಿನಲ್ಲಿ ಜಲಾಮೃತ ಜಲವರ್ಷದ ಘೊಷವಾಕ್ಯದಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಸರ್ಕಾರ ಉಲ್ಲೇಖಿಸಿದೆ. ನೀರಿಗಾಗಿ ನಾಲ್ಕು ಹೆಜ್ಜೆಗಳಲ್ಲಿ ನೀರಿನ ಬಗ್ಗೆ ತಿಳಿದುಕೊಳ್ಳಿ., ನೀರಿನ ಬಳಕೆಯ ಅರಿವಿರಲಿ. ನೀರನ್ನು ಸಂರಕ್ಷಿಸಿ ಮತ್ತು ಗಿಡಮರ ಸಂರಕ್ಷಿಸಿ ಎಂಬುದರಲ್ಲಿ ಅರ್ಥವಿದೆ. ಇಲಾಖಾವಾರು ಮಟ್ಟದಲ್ಲಿ ನಡೆಯುವ ಪರಿಸರ ಸಂರಕ್ಷಣೆ ಅಭಿಯಾನ ಎಷ್ಟರಮಟ್ಟಕ್ಕೆ ಸಫಲವಾಗುತ್ತಿದೆ ಎಂಬುದು ಸಾರ್ವಜನಿಕರಲ್ಲಿ ಚರ್ಚಿತವಾಗುತ್ತಿರುವ ವಿಷಯ. ಸಾರ್ವಜನಿಕರು ಬರಿ ಅರಣ್ಯ ಇಲಾಖೆಯ ಜವಾಬ್ದಾರಿ ಎಂದು ಸೀಮಿತಗೊಳಿಸದೆ ಸ್ಥಳೀಯರು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎನ್ನುತ್ತಾರೆ ಪರಿಸರ ತಜ್ಞರು.

ಸಾಮಾಜಿಕ ಮತ್ತು ಮಿಸಲು ಅರಣ್ಯ ವಿಭಾಗವು ಕಳೆದು ಹತ್ತಾರು ವರ್ಷಗಳಿಂದ ಜಿಲ್ಲೆಯಾದ್ಯಂತ 7ರಿಂದ 8 ಲಕ್ಷ ವಿವಿಧ ಜಾತಿಯ ಸಸಿಗಳನ್ನು  ನೆಡುತ್ತಲೇ ಇದೆ. ಲಕ್ಷಕ್ಕೆ ಬೆರಳೆಣಿಕೆಯ ಮರಗಳು ಕಾಣುತ್ತಿಲ್ಲ. ಅಪಾರ ಸಂಪನ್ಮೂಲ ಸರ್ಕಾರದ ಆದಾಯ ಮೂಲವಾಗಿರುವ ಅರಣ್ಯ ಇಲಾಖೆಯಲ್ಲಿ ಸಸಿ ನೆಡುವುದು ಮಾತ್ರವಲ್ಲ, ಬೇಸಿಗೆಯಲ್ಲಿ ಸಸಿಗಳಿಗೆ ವಾರಕ್ಕೊಮ್ಮೆ ನೀರುಣಿಸಿ ಸಂರಕ್ಷಿಸುವ ಕೆಲಸ ಮಾಡದಿದ್ದರೆ ಪರಿಸರ ಸಂರಕ್ಷಣೆ ಸುಧಾರಣೆ ಸಾಧ್ಯವಿಲ್ಲ ಎಂಬುದು ಪರಿಸರವಾದಿಗಳ ಅಭಿಪ್ರಾಯ.

‘ಗ್ರಾಮಾಂತರ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಶಪಡಿಸಿಕೊಂಡ ಜಾಗದ ವಿಸ್ತೀರ್ಣದಲ್ಲಿ 810 ಎಕರೆ ಅರಣ್ಯ ಪ್ರದೇಶ ಸೇರಿದೆ. ಈ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ವನಸಂಪತ್ತು ವೃದ್ಧಿಸಲಾಗುತ್ತಿದೆ’ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ತಾಲ್ಲೂಕಿನ ಅರಣ್ಯ ಆಪೋಶನವಾಗಿದೆ. ತಾಲ್ಲೂಕಿನಲ್ಲಿರುವ ಮಿಸಲು ಮತ್ತು ಸಾಮಾಜಿಕ ಅರಣ್ಯ ಪ್ರದೇಶದಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸುವ ಪ್ರಯತ್ನ ಅರಣ್ಯ ಇಲಾಖೆ ಯಾಕೆ ಮಾಡಬಾರದು ಎಂಬುದು ಪರಿಸರವಾದಿ ಶಿವನಾಪುರ ರಮೇಶ್‌ರವರ ಅಭಿಪ್ರಾಯ.
ಭೂ ಪರಿವರ್ತನೆ ಮತ್ತು ಬಡಾವಣೆ ನಿರ್ಮಾಣಕ್ಕಾಗಿ ಬೈಯಾಪದಲ್ಲಿ ಅರಣ್ಯೀಕರಣಕ್ಕಾಗಿ ಇಂತಿಷ್ಟು ತೆರಿಗೆ ಪಾವತಿಸಬೇಕು ಕ್ರೋಡೀಕರಣಗೊಂಡ ತೆರಿಗೆ ಹಣದಲ್ಲಿ ವನಸಂಪತ್ತು ವೃದ್ಧಿಸಬೇಕು. ಬೈಯಾಪ ಅಸ್ತಿತ್ವಕ್ಕೆ ಬಂದ ನಂತರವು ಒಂದು ಸಸಿ ನೆಡುವ ಕಾರ್ಯಕ್ರಮ ಅನುಷ್ಠಾನಗೊಂಡಿಲ್ಲ. ಪ್ರಸ್ತುತ ಬೈಯಾಪದಲ್ಲಿ ಕ್ರೋಡೀಕರಣಗೊಳ್ಳುವ ಪ್ರತಿಯೊಂದು ತೆರಿಗೆ ಹಣ ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಬಿಡಿಗಾಸು ಬೈಯಾಪದಿಂದ ನಿರೀಕ್ಷಿಸುವಂತಿಲ್ಲ ಎನ್ನುತ್ತಾರೆ ಆರ್‌ಟಿಐ ಕಾರ್ಯಕರ್ತ ಚಿಕ್ಕೇಗೌಡ.

‘ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಹತ್ತಾರು ಉದ್ಯಾನವನಕ್ಕಾಗಿ ಜಾಗ ಮೀಸಲಿಡಲಾಗಿದೆ. ಈ ಪೈಕಿ ಎರಡು ಉದ್ಯಾನವನ ಅಭಿವೃದ್ಧಿಯಾಗಿದೆ, ಹೊರತುಪಡಿಸಿದರೆ ಉಳಿದ ಉದ್ಯಾವನಗಳನ್ನು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಆರೋಪಿಸುತ್ತಾರೆ ಸ್ಥಳೀಯ ನಿವಾಸಿ ಕುಮಾರ್.

ನಗರದ ಮಿನಿ ವಿಧಾನಸೌಧದ ಆಡಳಿತ ಕಚೇರಿ ಹಿಂಭಾಗದಲ್ಲಿ ಒಂದುವರೆ ಎಕರೆಯಲ್ಲಿ ಸಸಿ ನೆಟ್ಟು ಬೆಳೆಸಿದ 150 ಮರಗಳು ಸಮೃದ್ಧವಾಗಿವೆ, ನ್ಯಾಯಾಲಯದ ಆವರಣದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ವಕೀಲರ ಸಂಘ ಮತ್ತು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ನೆಡಲಾದ ಸಸಿಗಳು ಮರಗಳಾಗಿವೆ. ಆಯಾ ಇಲಾಖೆ ವ್ಯಾಪ್ತಿಯ ಕಚೇರಿ ಆವರಣದಲ್ಲಿ ಸಸಿ ಬೆಳೆಸಿದರೆ ಇಡಿ ನಗರ ಹಸಿರೀಕರಣದ ಹೊದಿಕೆಯಾಗಲಿದೆ. ಕೆಲವು ಖಾಸಗಿ ಬಡಾವಣೆಗಳಲ್ಲಿ ಪರಿಸರ ರಕ್ಷಣೆಗೆ ಒತ್ತು ನೀಡಲಾಗಿದೆ. ಪರಿಸರ ಸಂರಕ್ಷಣೆ ಎಂಬುದು ದಿನಕ್ಕೆ ಸಿಮಿತವಾಗದೆ ಸಾಮೂಹಿಕ ಸಹಭಾಗಿತ್ವದಲ್ಲಿ ನಿರಂತರವಾಗಬೇಕು ಎನ್ನುತ್ತಾರೆ ಪ್ರಗತಿಪರ ಸಂಘಟನೆಗಳ ಸದಸ್ಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.