ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ವಕೀಲರ ಸಂಘದ ವತಿಯಿಂದ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಲೋಕಾಯುಕ್ತ ಡಿವೈಎಸ್‌ಪಿ ಶಶಿಕಲಾ ಎದುರು ಅಳಲು ತೋಡಿಕೊಂಡ ವೃದ್ಧೆ
Last Updated 17 ಅಕ್ಟೋಬರ್ 2019, 8:17 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಇಪ್ಪತ್ತೈದು ವರ್ಷಗಳಿಂದ ನ್ಯಾಯಕ್ಕಾಗಿ ಅಲೆಯುತ್ತಿದ್ದೇನೆ. ಈವರೆಗೆ ನ್ಯಾಯ ದೊರೆತಿಲ್ಲ’ ಎಂದು ವೃದ್ಧೆ ಲಕ್ಷ್ಮಮ್ಮ ಲೋಕಾಯುಕ್ತ ಡಿವೈಎಸ್‌ಪಿ ಶಶಿಕಲಾ ಅವರಿಗೆ ದೂರು ನೀಡಿ ಅಳಲು ತೋಡಿಕೊಂಡರು.

ದೂರು ನೀಡಿ ಮಾತನಾಡಿದ ಅವರು, ‘ಕಸಬಾ ಹೋಬಳಿ ಸರ್ವೇ ನಂಬರ್ 193ರಲ್ಲಿ 3 ಎಕರೆ ಸರ್ಕಾರಿ ಜಾಗದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡುತ್ತಿದ್ದೇವೆ. ತಾಲ್ಲೂಕು ಮಟ್ಟದ ಕ್ರೀಡಾಂಗಣಕ್ಕೆ ಸರ್ಕಾರಿ ಜಾಗ ಗುರುತಿಸುವ ಸಂದರ್ಭದಲ್ಲಿ ನನ್ನ ಹೆಸರಿನಲ್ಲಿದ್ದ ಎರಡು ಎಕರೆಜಮೀನನ್ನೂ ವಶ ಪಡಿಸಿಕೊಳ್ಳಲಾಗಿದೆ. ಕ್ರೀಡಾಂಗಣ ಕಾಮಗಾರಿ ಸಂದರ್ಭದಲ್ಲಿ ತಡೆಗೋಡೆ ನಿರ್ಮಾಣ ಮಾಡಿದಾಗ ಹೈಕೋರ್ಟ್ ಪ್ರಕರಣ ದಾಖಲಿಸಿದಾಗ ಪರ್ಯಾಯ ಜಾಗ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು’ ಎಂದು ಅವಲತ್ತುಕೊಂಡರು.

‘ಆದರೂ ಪರ್ಯಾಯ ಜಾಗ ನೀಡಿರಲಿಲ್ಲ. ಮರು ಪ್ರಕರಣ ದಾಖಲಿಸಿದಾಗ ಒಂದು ಎಕರೆ ನೀಡುವಂತೆ 1996ರಲ್ಲಿ ಆದೇಶ ಹೊರಡಿಸಲಾಗಿತ್ತು. ನಂತರ ಸರ್ಕಾರ ಒಂದು ಎಕರೆ ಸಾಗುವಳಿಗೆ ಆದೇಶ ನೀಡಿ ಸಾಗುವಳಿ ಚೀಟಿಯಲ್ಲಿ 34 ಗುಂಟೆ ಎಂದು ನಮೂದಿಸಿದೆ. ಆದರೆ ಜಾಗನಿಗದಿಪಡಿಸಿ, ಚಕ್‌ಬಂದಿ ಮಾಡಿಲ್ಲ. ಅಧಿಕಾರಿಗಳು ಮಕ್ಕಳ ಆಟಕ್ಕೆ ಜಮೀನು ಬಿಟ್ಟುಕೊಡು ಪುಣ್ಯ ಬರುತ್ತದೆ; ಬೇರೆ ಕಡೆ ಇಷ್ಟೇ ಜಾಗ ನೀಡುತ್ತೇವೆ ಎಂದು ಹೇಳಿ ನನಗೆ ಅನ್ಯಾಯ ಮಾಡಿದ್ದಾರೆ’ ಎಂದು ದೂರಿದರು.

‘ಈ ಹಿಂದೆ ತಹಶೀಲ್ದಾರ್ ಆಗಿದ್ದ ಕೇಶವಮೂರ್ತಿ ಸರ್ಕಾರಿ ಜಮೀನು ನೇರವಾಗಿ ಕೊಡುವುದಕ್ಕೆ ಬರುವುದಿಲ್ಲ. ಸರ್ಕಾರ ಜಮೀನು ನೀಡದಂತೆ ಆದೇಶ ಮಾಡಿದೆ ಎಂದು ಹೇಳಿದ್ದರು. ಬಿನ್ನಿಮಂಗಲ ಸರ್ವೇ ನಂಬರ್ 55ರಲ್ಲಿ ಪ್ರಭಾವಿ ರಾಜಕೀಯ ನಾಯಕರಿಗೆ ಒಂದು ಎಕರೆ ಮಂಜೂರು ಮಾಡಿದ್ದಾರೆ. ನನ್ನ ಬಳಿ ದಾಖಲೆ ಇದೆ. ಅವರಿಗೊಂದು ಆದೇಶ, ನನಗೊಂದು ಆದೇಶ ನೀಡಿದೆಯಾ ಸರ್ಕಾರ’ ಎಂದು ಲೋಕಾಯುಕ್ತ ಅಧಿಕಾರಿಗಳನ್ನು ಪ್ರಶ್ನಿಸಿದರು.

ದೂರುದಾರಸಿ.ನಾರಾಯಣಸ್ವಾಮಿ ಮಾತನಾಡಿ, ‘ಭಟ್ಟರ ಮಾರೇನಹಳ್ಳಿ ಗ್ರಾಮದ ಸರ್ವೇ ನಂಬರ್ 7/1ರಲ್ಲಿ ಕೆಐಎಡಿಬಿ ಅಧಿಕಾರಿಗಳು ನನ್ನ ಗಮನಕ್ಕೆ ತರದೆ, ನೋಟಿಸ್ ನೀಡದೆ ಬೇರೆ ಖಾಸಗಿ ವ್ಯಕ್ತಿಯೊಂದಿಗೆ ಶಾಮೀಲಾಗಿ ಕಾನೂನು ಬಾಹಿರ ದಾಖಲೆ ಸೃಷ್ಟಿಸಿ ಪರಿಹಾರ ಪಡೆಯುವ ಪ್ರಯತ್ನ ನಡೆಯುತ್ತಿದೆ. ಪಿತ್ರಾರ್ಜಿತ ಅಸ್ತಿದಾರನಾದ ನನಗೆ ಪರಿಹಾರ ಸಿಗಬೇಕು. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ಶಶಿಕಲಾ ಮಾತನಾಡಿ, ‘ಬಹುತೇಕ ಪ್ರಕರಣಗಳು ಜಮೀನು ನಿವೇಶನದ್ದಾಗಿದೆ. ಅಧಿಕಾರಿಗಳು ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ಕೆಲ ಅಧಿಕಾರಿಗಳಿಗೆ ಕಾಲಾವಕಾಶ ನೀಡಲಾಗಿದೆ’ ಎಂದು ಹೇಳಿದರು.

ಪೊಲೀಸ್ ಇನ್‌ಸ್ಪೆಕ್ಟರ್ ಚಿಕ್ಕರಾಜು ಶೆಟ್ಟಿ, ಶಿವರಾಜು, ಪೇದೆ ಪ್ರದೀಪ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT