ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನವನ್ನು ದೇವರಾಗಿ ಆರಾಧಿಸಿ

Last Updated 30 ಅಕ್ಟೋಬರ್ 2019, 13:05 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಪೂರ್ವಾಗ್ರಹ ಪೀಡಿತ ಮನೋಸ್ಥಿತಿಯನ್ನು ನಿಗ್ರಹಿಸಿ ಸಂವಿಧಾನವನ್ನು ದೇವರಾಗಿ ಆರಾಧಿಸಿ ಅನುಷ್ಠಾನಗೊಳಿಸುವ ಮನೋಧರ್ಮ ಎಲ್ಲರಲ್ಲೂ ಬರಬೇಕು ಎಂದು ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾನಾಯಕ್ ಹೇಳಿದರು.

ನಗರದ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಘಟಿಕೋತ್ಸವ-2019 ಪದವಿ ಪ್ರದಾನ ಸಮಾರಂಭದಲ್ಲಿ ಮಾಡಿದರು.

‘ಹಿಂಸೆ, ದರ್ಪ, ದಬ್ಬಾಳಿಕೆಗಳು ಜೀವಪರ ಸಂತೋಷವನ್ನು ನಾಶ ಮಾಡಬಾರದು ಎಂಬುದು ಬಂಡಾಯ ಚಳವಳಿಯ ಮೂಲ ಆಶಯವಾಗಿತ್ತು. ರೈತನನ್ನು ಯೋಗಿಯಾಗಿ ಭಾವಿಸಿದ ಕುವೆಂಪು ಶ್ರಮ ಸಂಸ್ಕೃತಿಯ ಆರಾಧನೆಯನ್ನು ಪ್ರತಿಪಾದಿಸಿದರು. ನೂರು ದೇವರುಗಳಿಗಿಂತ ಭಾರತ ಮಾತೆಯೇ ಪೂಜನೀಯ ಶಕ್ತಿ ಎಂದು ಹೇಳಿದ್ದಾರೆ. ಆಹಾರವನ್ನು ನಾಶ ಮಾಡುವ ಹಕ್ಕು ಯಾರಿಗೂ ಇಲ್ಲ’ ಎಂದರು.

‘ಮೌಲ್ಯಾಧಾರಿತ ನಾಗರಿಕ ಪ್ರಜ್ಞೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳುವ ಮೂಲಕ ಸಾಮಾಜಿಕ ಕಟ್ಟುಪಾಡುಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ. ಪದವೀಧರರು ಹೊಣೆಯಾಧಾರಿತ ಪೌರತ್ವವನ್ನು ಪ್ರತಿಪಾದಿಸಬೇಕು. ಸಾಮಾಜಿಕ ಹಿತಕ್ಕೆ ಬಳಕೆಯಾಗದ ಪದವಿಗಳು ಅಪ್ರಸ್ತುತ. ಸಮುದಾಯದ ಅಭ್ಯುದಯದ ಜತೆಗೆ ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುವ, ಜವಾಬ್ದಾರಿಯುತ ಕರ್ತವ್ಯ ನಿರ್ವಹಣೆಯ ವಿಶ್ವಾಸ ಹೆಚ್ಚಬೇಕಾದ ಅನಿವಾರ್ಯತೆ ಇದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜೆ.ರಾಜೇಂದ್ರ ಮಾತನಾಡಿ, ‘ಪದವೀಧರರಾಗಿ ಹೊರಹೊಮ್ಮುತ್ತಿರುವ ವಿದ್ಯಾರ್ಥಿಗಳು ದೇಶದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳನ್ನು ಅರ್ಥಮಾಡಿಕೊಂಡು ಸೃಜನಶೀಲ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಸ್ವತಂತ್ರ ಆಲೋಚನೆಗಳ ಮೂಲಕ ಉದ್ಯೋಗಾವಕಾಶಗಳಿಗೆ ಬೇಕಾದ ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದರು.

ಪದವಿ ಪ್ರತಿಜ್ಞಾ ವಿಧಿ ಬೋಧನೆ: ಕಾಲೇಜಿನಲ್ಲಿ 2016 ರಿಂದ 19ರವರೆಗಿನ 3 ವರ್ಷದ ಶೈಕ್ಷಣಿಕ ಪದವಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ ಪದವೀಧರರಾಗಿ ಹೊರಹೊಮ್ಮಿರುವ ಬಿ.ಕಾಂ, ಬಿ.ಬಿ.ಎ, ಬಿ.ಎಸ್ಸಿ ಮತ್ತು ಬಿ.ಎ ಪದವೀಧರ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಪದವಿ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಮೆರವಣಿಗೆ: ಇದಕ್ಕೂ ಮುನ್ನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕೇಂದ್ರ ಕಚೇರಿ ಮುಂಭಾಗದಿಂದ ದೇವರಾಜ ಅರಸ್ ಸಭಾಂಗಣದವರೆಗೆ ಘಟಿಕೋತ್ಸವ ಮೆರವಣಿಗೆ ನಡೆಯಿತು. ಅತಿಥಿಗಳಿಗೆ ಸರಸ್ವತಿ ವಿದ್ಯಾ ಸಂಸ್ಥೆ ವಾದ್ಯವೃಂದದಿಂದ ಗೌರವ ಧ್ವಜವಂದನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಸಿಇಒ ಜೆ.ನಾಗೇಂದ್ರಸ್ವಾಮಿ, ಎಸ್‍ಡಿಯುಐಎಂ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್, ಆರ್‍ಎಲ್‍ಜೆಐಟಿ ಪ್ರಾಂಶುಪಾಲ ಡಾ.ಶ್ರೀನಿವಾಸರೆಡ್ಡಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಪ್ರೊ.ಪಿ.ಚೈತ್ರ ಇದ್ದರು. ಕಾಲೇಜಿನ ವಿದ್ಯಾರ್ಥಿನಿ ನಿತ್ಯಶ್ರೀ ಕೊಳಲಲ್ಲಿ ರಾಷ್ಟ್ರಗೀತೆ ನುಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT