ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

38ಕ್ಕೆ 78ರ ಹಿಮ್ಮೇಳ

Last Updated 24 ಮೇ 2018, 19:30 IST
ಅಕ್ಷರ ಗಾತ್ರ

38 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್‌ಗೆ 78 ಸ್ಥಾನಗಳ ಕಾಂಗ್ರೆಸ್, ಸರ್ಕಾರ ರಚನೆಗಾಗಿ ಸಾಥ್ ನೀಡಿರುವ ಬಗ್ಗೆ ಸಿನಿಕರನೇಕರು ಆಡಿಕೊಳ್ಳುತ್ತಿದ್ದಾರೆ. ಇದು ಮಾಮೂಲಿ ರಾಜಕೀಯ ಕೂಡುವಳಿಯಾಗಿದ್ದರೆ (Marriage of convenience) ವ್ಯಂಗ್ಯ ಸರಿಯಾದದ್ದೇ.

ಪ್ರಮುಖ ಖಾತೆಗಳಿಗಾಗಿ ಕಚ್ಚಾಟ ನಡೆದು ಸಮ್ಮಿಶ್ರ ಸರ್ಕಾರಗಳು ಉರುಳಿ, ಮರುಚುನಾವಣೆಗಳಾಗಿರುವುದು ದೇಶಕ್ಕೆ ಹೊಸತೇನಲ್ಲ. ಆದರೆ ಕರ್ನಾಟಕದಲ್ಲಿ ನಡೆದಿರುವ ಈ ಮೈತ್ರಿಯಲ್ಲಿ ಹೊಸ ಸಾಧ್ಯತೆ ಹಾಗೂ ದೂರಗಾಮಿ ಬೆಳವಣಿಗೆಗಳನ್ನು ಸಹ ಕಾಣಬಹುದಾಗಿದೆ.

ಮೈತ್ರಿಯ ಸ್ಪಷ್ಟ ಉದ್ದೇಶ, ಬಿಜೆಪಿಯನ್ನು ಅಧಿಕಾರದಿಂದ ಹೊರಗಿರಿಸಬೇಕೆಂಬುದೇನೋ ಹೌದು. ಆದರೂ ಸಾಕಷ್ಟು ಸಂಖ್ಯಾಬಲ ಗಳಿಸಿರುವ ರಾಷ್ಟ್ರೀಯ ಪಕ್ಷವೊಂದು ‘ಪ್ರಾದೇಶಿಕ’ ಎನ್ನುವ ಪಕ್ಷದ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯೇ ಹೌದು.

ಅಲ್ಪಾವಧಿಯ ಅಧಿಕಾರದ ಆಸೆಯೇ ಇದ್ದಿದ್ದರೆ ಜೆಡಿಎಸ್, ಬಿಜೆಪಿಯೊಂದಿಗೇ ಕೈ ಜೋಡಿಸಬಹುದಾಗಿತ್ತು. ಅದರಿಂದ ಕಾಂಗ್ರೆಸ್ ಪಕ್ಷ ಮೂಲೆಗುಂಪೂ ಆಗಿಬಿಡುತ್ತಿತ್ತು. ಆದರೆ ಬಿಜೆಪಿ ಜೊತೆ ಮೈತ್ರಿ ನಡೆಸಿದ ಮರುಕ್ಷಣವೇ ಜೆಡಿಎಸ್‌ ಹೇಳಹೆಸರಿಲ್ಲದಂತಾಗಿಬಿಡುತ್ತದೆ ಎನ್ನುವ ಜ್ಞಾನ ದೇವೇಗೌಡರಂತಹ ಮುತ್ಸದ್ದಿಗೆ ಖಚಿತವಾಗಿ ಇತ್ತು.

ಇನ್ನೊಂದು ಆಶಾದಾಯಕ ಬೆಳವಣಿಗೆ ಎಂದರೆ ಜೆಡಿಎಸ್, ತನ್ನ ‘ರಾಷ್ಟ್ರೀಯ ಪಕ್ಷ’ ಎಂಬ ಭ್ರಮೆಯನ್ನು ತೊರೆದು, ಪ್ರಾದೇಶಿಕ ಪಕ್ಷ ಎಂಬುದನ್ನು ಅಂತರಂಗದಲ್ಲಿ ಒಪ್ಪಿಕೊಂಡಿರುವುದು.

ಡಿಎಂಕೆ, ಬಿಎಸ್‌ಪಿ, ಟಿಡಿಪಿ ಹಾಗೂ ಇನ್ನಿತರ ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ನೀಡಿ, ಮುಖಂಡರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದು ಇದಕ್ಕೆ ಸಾಕ್ಷಿ. ಎಲ್ಲಾ ರಾಜ್ಯಗಳಲ್ಲಿ ಅದರದರದೇ ಪ್ರಾದೇಶಿಕ ಪಕ್ಷ ಆಡಳಿತ ನಡೆಸಬೇಕು. ರಾಷ್ಟ್ರಮಟ್ಟದಲ್ಲಿ, ಅವು ಧ್ರುವೀಕರಣಗೊಂಡು ನಿರ್ದಿಷ್ಟ ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ಸೂಚಿಸಬೇಕು.

ಅಂತಹ ಒಕ್ಕೂಟ ವ್ಯವಸ್ಥೆಗೆ ಈ ಸಮ್ಮಿಶ್ರ ಸರ್ಕಾರ ನಾಂದಿ ಹಾಡುವಂತಾದರೆ, ಕರ್ನಾಟಕದ ಮತದಾರ ನಿಜಕ್ಕೂ ಧನ್ಯನೇ ಸರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT