ಭಾನುವಾರ, ಸೆಪ್ಟೆಂಬರ್ 26, 2021
23 °C
ವಿಜಯಪುರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ

ಸಂವಿಧಾನಶಕ್ತಿಯನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಡಾ. ಅಂಬೇಡ್ಕರ್ ಅವರ ವಿಚಾರಧಾರೆಗಳು, ಅವರಲ್ಲಿ ಸಮಾಜದ ಬಗ್ಗೆ ಇದ್ದಂತಹ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ’ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಹಾಗೂ ಹಿಂದುಳಿದ ವರ್ಗಗಗಳ ಮಾನ್ಯತೆ ಪಡೆದ ಸಂಪಾದಕರು, ವರದಿಗಾರರ ಸಂಘ, ಹಾಗೂ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಸಂವಿಧಾನದ ಶಕ್ತಿಯನ್ನು ಯುವ ಪೀಳಿಗೆಗೆ ಅಳವಡಿಸಿಕೊಂಡು ಬಡವರಿಗೆ, ಅಸಹಾಯಕ ಸ್ಥಿತಿಯಲ್ಲಿ ಇರುವರಿಗೆ ಸಹಾಯ ಮಾಡಿ ಅವರು ಸಮಾಜದಲ್ಲಿ ಬದುಕುವಂತೆ ಮಾಡಬೇಕಾಗಿದೆ’ ಎಂದರು.

‘ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಕೆ. ಸತ್ಯ ಮಾತನಾಡಿ, ಪ್ರತಿಯೊಬ್ಬ ಭಾರತೀಯ ಪ್ರಜೆಯ ಒಂದು ಮತವು ಕನಿಷ್ಠ ಐದು ಸಾವಿರ ಗುಂಡುಗಳಿಗೆ ಸಮವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಒಂದೇ ಎನ್ನುವ ಹಕ್ಕು ನೀಡಿದ್ದಾರೆ’ ಎಂದರು.

‘ಯಾವುದೇ ವ್ಯಕ್ತಿಯನ್ನು ವಿರೋಧಿಸುವ ಮೊದಲು ಅವರ ವಿಚಾರಗಳನ್ನು ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅಂಬೇಡ್ಕರ್ ಅವರ ಬಗೆಗಿನ ದಾಖಲೆಗಳನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿವೆ. ಯುವ ಸಮೂಹವು ಅಂಬೇಡ್ಕರ್ ಬೌದ್ಧಿಕ ಶಕ್ತಿಯನ್ನು ಬಳಸಿ ಹೊಸ ಚರಿತ್ರೆ ಬರೆಯಬೇಕಾಗಿದೆ’ ಎಂದರು.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ಮಾತನಾಡಿ, ‘ಭಾರತ ಅಂದ ತಕ್ಷಣವೇ ವಿಶ್ವದಲ್ಲೇ ಅಂಬೇಡ್ಕರ್ ಚಿಂತನೆಗಳು, ಅವರ ಶಿಕ್ಷಣ ಹೋರಾಟಗಳು ಕಣ್ಣು ಮುಂದೆ ಬರುತ್ತವೆ’ ಎಂದರು.

ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ಮಾತನಾಡಿ, ‘ಅಂಬೇಡ್ಕರ್ ವ್ಯಕ್ತಿತ್ವವು ಯಾವಾಗಲೂ ಕೆಳವರ್ಗದವರ ಧ್ವನಿಯಾಗಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಪ್ರತಿಯೊಬ್ಬರೂ ಮುಂದೆ ಬರಬೇಕು ಎನ್ನುವ ಉದ್ದೇಶ ಹೊಂದಿದೆ. ಮೀಸಲಾತಿಯನ್ನು ತರುವುದರ ಜೊತೆಗೆ ರೈತರ, ಕಾರ್ಮಿಕರ, ಮಹಿಳೆಯರ ಪರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಶ್ರಮವಹಿಸಿದ್ದಾರೆ’ ಎಂದರು.

ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಮಾತನಾಡಿ, ‘ಯಾವುದೇ ಜಯಂತಿಯನ್ನು ಮಾಡಿದರೂ ವಿಶೇಷವಾದ ಸಂದೇಶಗಳನ್ನು ಯುವಜನತೆಗೆ ತಿಳಿಸಿ ಹೆಚ್ಚಿನ ಸಫಲತೆ ಪಡೆದು ದೇಶದ ಅಭಿವೃದ್ಧಿಗೆ ದಾರಿಯಾಗಬೇಕು. ಅಂಬೇಡ್ಕರ್ ಅವರ ಸಾಮಾಜಿಕ ಕಳಕಳಿಯಿಂದ ಎಲ್ಲರಿಗೂ ಶಿಕ್ಷಣ ಉದ್ಯೋಗ ರಾಜಕೀಯ ಸಮಸಮಾಜ ಇತ್ಯಾದಿಗಳ ಬಗ್ಗೆ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದ್ದಾರೆ' ಎಂದರು.

ಜಯಕುಮಾರ್, ಡಾ.ಎಂ.ಎಸ್. ಮಣಿ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕಲಾವಿದ ವಿಷ್ಣು, ಸೋಮಣ್ಣ, ಅಕ್ಕಯಮ್ಮ, ಸಿ.ಮುನಿಯಪ್ಪ, ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾರಾಯಣಸ್ವಾಮಿ, ಕೆ.ಮುನಿರಾಜು, ಮಂಜುನಾಥ ಬಮ್ಮನಕಟ್ಟಿ, ಮಿಂಚು ಶ್ರೀನಿವಾಸ್, ಶರಣಯ್ಯ ಒಡೆಯರ್ ಇದ್ದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು