ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆ ಇಲಾಖೆ ವಿರುದ್ಧ ಜಿ.ಪಂ. ಆಕ್ರೋಶ

ಆಫ್ರಿಕನ್ ಕ್ಯಾಟ್ ಮೀನು ಸಾಕಾಣಿಕೆ ಕ್ರಮಕ್ಕೆ ತೀವ್ರ ಆಕ್ಷೇಪ
Last Updated 10 ಜುಲೈ 2019, 14:13 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಸಮೀಪದ ಹೊಸಕೋಟೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಆಫ್ರಿಕನ್ ಕ್ಯಾಟ್ ಮೀನು ಸಾಕಾಣಿಕೆಗೆ ಕಡಿವಾಣ ಹಾಕಲು ಮೀನುಗಾರಿಕೆ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ನಾಗರಾಜ್ ದೂರಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಆರಂಭದಲ್ಲೆ ವಿಷಯ ಪ್ರಸ್ತಾಪಿಸಿ ಮಾತನಾಡಿದರು.

ಅಧಿಕಾರಿಗಳು ನಾಮಕಾವಾಸ್ಥೆ ದಾಳಿ ನಡೆಸಿ ಬರುತ್ತಾರೆಯೇ ಹೊರತು ಸಾಕಾಣಿಕೆ ಕೇಂದ್ರಗಳನ್ನು ಸಂಪೂರ್ಣ ನಾಶಮಾಡಿ ಬರುವುದಿಲ್ಲ. ಪೊಲೀಸ್ ಇಲಾಖೆ, ಮೀನುಗಾರಿಕೆ ಇಲಾಖೆ ಸಾಕಾಣಿಕೆದಾರರೊಂದಿಗೆ ಶಾಮೀಲಾಗಿರಬಹುದು. ಪ್ರತಿ ಬಾರಿ ಇದನ್ನು ಸಭೆಯ ಗಮನಕ್ಕೆ ತರಲಾಗುತ್ತಿದೆ ಸೂಕ್ತ ಕ್ರಮ ಆಗುತ್ತಿಲ್ಲ’ ಎಂದರು.

ಮೀನುಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ‘ನಾವು ದಾಳಿ ಮಾಡಿ ಮೀನು ಸಾಕಾಣಿಕೆ ಕೇಂದ್ರ ನಾಶಪಡಿಸಿದ್ದೇವೆ. ಜಿಲ್ಲೆಯ ಗಡಿ ಪ್ರದೇಶದಲ್ಲಿ ಸಾಕಣೆ ಮಾಡಿ ಇಲ್ಲಿ ತಂದು ಮಾರಾಟ ಮಾಡುತ್ತಾರೆ’ ಎಂದು ಸಮಜಾಯಿಷಿ ನೀಡಿದರು.

ಇದರಿಂದ ತೃಪ್ತರಾಗದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಮಾತನಾಡಿ, ‘ನೀವು ಕಾಟಾಚಾರಕ್ಕೆ ದಾಳಿ ಮಾಡಿ ಪೋಟೊ ತೋರಿಸಿದರೆ ಪ್ರಯೋಜನವಿಲ್ಲ. ಆಳವಾದ ಗುಂಡಿಗಳನ್ನು ಮೊದಲು ನಾಶ ಮಾಡಿ. ವಿಷಯುಕ್ತ ಮೀನು ತಿಂದರೆ ಆರೋಗ್ಯದ ಗತಿ ಏನು ? ಎಷ್ಟು ಪ್ರಕರಣ ದಾಖಲಿಸಿದ್ದೀರಿ? ನಾವೇ ಬಂದು ಖುದ್ದು ಪರಿಶೀಲಿಸುತ್ತೇವೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ ಮಾತನಾಡಿ, ‘ಬೂದಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿಗಳ ಕೊರತೆ ಇದೆ, ಸಕ್ಕರೆ ಕಾಯಿಲೆಗೂ ಮಾತ್ರೆಗಳಿಲ್ಲ. ನಾಯಿ ಕಚ್ಚಿದರೂ ಔಷಧಿ ಇಲ್ಲ ವೈದ್ಯರು ಸಕಾಲದಲ್ಲಿ ಹಾಜರಾಗುತ್ತಿಲ್ಲ’ ಎಂದು ಸಭೆಯ ಗಮನಕ್ಕೆ ತಂದರು.

ಜಿ.ಪಂ ಅಧ್ಯಕ್ಷೆ ಜಯಮ್ಮ ಮಾತನಾಡಿ, ‘ಇಡೀ ಜಿಲ್ಲೆಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಕಾಲದಲ್ಲಿ ಹಾಜರಾಗುತ್ತಿಲ್ಲ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅದ್ವಾನ ಆಗಿದೆ. ತಾಲ್ಲೂಕು ಕೇಂದ್ರದಲ್ಲಿ ರಾತ್ರಿ 12 ಗಂಟೆ ಮತ್ತು ತಡರಾತ್ರಿ 3 ಗಂಟೆಗೆ ಗರ್ಭಿಣಿಯರಿಗೆ ಪ್ರಸವ ನೋವು ಅರಂಭವಾಗಿ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲ, ಅಂಬುಲೆನ್ಸ್ ಕರೆಯಿಸಿ ನಾನೆ ಬೆಂಗಳೂರಿಗೆ ಕಳುಹಿಸಿದ್ದೇನೆ. ಗುತ್ತಿಗೆದಾರರಿಗೂ ವೇತನವಿಲ್ಲ, ರಕ್ತನಿಧಿ ಕೇಂದ್ರವಿಲ್ಲ, ಏನಾಗುತ್ತಿದೆ ಆರೋಗ್ಯ ಇಲಾಖೆಯಲ್ಲಿ ಸ್ಪಷ್ಟನೆ ನೀಡಿ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಮಾತನಾಡಿ, ‘ನಾನು ಕರ್ತವ್ಯಕ್ಕೆ ಹಾಜರಾಗಿ ಒಂದೆರಡು ದಿನ ಮಾತ್ರ ಕಳೆದಿದೆ, ರಕ್ತ ನಿಧಿ ಕೇಂದ್ರ ಜಿಲ್ಲೆಯಲ್ಲಿ ಇಲ್ಲ. ಆರೋಗ್ಯ ಇಲಾಖೆ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿದ್ದು ರಕ್ತದ ಅವಶ್ಯಕತೆ ಇದ್ದ ತಕ್ಷಣ ತರಿಸಿಕೊಳ್ಳಲಾಗುತ್ತದೆ. ವೈದ್ಯರ ಗೈರು ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್ ಮಾತನಾಡಿ, ‘ಅನೇಕ ಗ್ರಾಮಗಳಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಘಟಕ ಆರಂಭಗೊಂಡು ಒಂದೆರಡು ತಿಂಗಳಲ್ಲಿ ಈ ರೀತಿಯಾದರೆ ಹೇಗೆ’ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ಮಾತನಾಡಿ, ‘ಜಿಲ್ಲೆಯಲ್ಲಿ 625 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಪ್ರಸ್ತುತ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆಯಲ್ಲಿದ್ದು ಶೀಘ್ರ ಪರಿಹಾರ ಸಿಗಲಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಿನಾರಾಯಣ ಮಾತನಾಡಿ, ‘ತಾಲ್ಲೂಕು ಕೇಂದ್ರದಲ್ಲಿ ಪಶು ಪಾಲಿ ಕ್ಲಿನಿಕ್ ಕೇಂದ್ರ ಆರಂಭಕ್ಕೆ ಕಳೆದ ಎರಡು ವರ್ಷಗಳ ಹಿಂದೆ ₹ 2.1 ಕೋಟಿ ಅನುದಾನ ಬಿಡುಗಡೆಯಾಗಿದೆ, 11 ಗುಂಟೆ ಜಾಗವನ್ನು ಗುರುತಿಸಲಾಗಿದೆ. ವಿಳಂಬ ಯಾಕೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡಯ್ಯ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಸಮಾನತೆಯಿಂದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಲಾಗುತ್ತದೆ. ಎಸ್ಸಿ ಎಸ್ಟಿ ಮಕ್ಕಳಿಗೆ ಮಾತ್ರ ಉಚಿತ ಶಾಲಾ ಬ್ಯಾಗ್ ಇತರರಿಗೆ ಇಲ್ಲ, ಸರ್ಕಾರವೇ ತಾರತಮ್ಯ ನೀತಿ ಮಾಡುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT