ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ದೇವಾಲಯಗಳ ಅಭಿವೃದ್ಧಿಗೆ ₹1.75 ಕೋಟಿ

ಹಿರಿಯ ಅರ್ಚಕರಿಗೆ ಸನ್ಮಾನ ನೆರವೇರಿಸಿದ ಶಾಸಕ ವೆಂಕಟರಮಣಯ್ಯ
Last Updated 21 ಜುಲೈ 2019, 13:37 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ದಿಗೆ ಪ್ರವಾಸೋದ್ಯಮ ಇಲಾಖೆ ₹3.25 ಕೋಟಿಯ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ. 2019ನೇ ಸಾಲಿಗೆ ₹1.75 ಕೋಟಿ ಮಂಜೂರಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ವತಿಯಿಂದ ಭಾನುವಾರ ನಡೆದ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ವಿದ್ಯಾರ್ಥಿ ವೇತನ, ಹಿರಿಯ ಅರ್ಚಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕಿನ ಹುಲುಕುಡಿ ಬೆಟ್ಟದಲ್ಲಿನ ವೀರಭದ್ರಸ್ವಾಮಿ ದೇವಾಲಯಕ್ಕೆ ₹50 ಲಕ್ಷ, ಕನಸವಾಡಿ ಶನಿಮಹಾತ್ಮ ದೇವಾಲಯಕ್ಕೆ ₹50 ಲಕ್ಷ, ಮಾಕಳಿ ಮಲ್ಲೇಶ್ವರ ದೇವಾಲಯಕ್ಕೆ ₹50 ಲಕ್ಷ ಹಾಗೂ ಅರಳುಮಲ್ಲಿಗೆಯಲ್ಲಿನ ಲಕ್ಷ್ಮೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ₹25 ಲಕ್ಷ ಮಂಜೂರಾಗಿದೆ ಎಂದರು.

ಈ ಹಣದಲ್ಲಿ ದೇವಾಲಯ ಸೇರಿದಂತೆ ಇಲ್ಲಿ ಅಗತ್ಯ ಇರುವ ಮೂಲ ಸೌಲಭ್ಯಗಳ ಅಭಿವೃದ್ದಿಗೆ ಬಳಕೆ ಮಾಡಿಕೊಂಡು ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಉತ್ತಮ ಸೇವೆಯನ್ನು ನೀಡಲು ಅನುಕೂಲವಾಗಲಿದೆ. ಮಾಕಳಿ, ಹುಲುಕುಡಿ ಬೆಟ್ಟವನ್ನು ಉತ್ತಮ ಪ್ರವಾಸಿ ತಾಣವಾಗಿ ರೂಪಿಸಲು ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಐದು ವರ್ಷಗಳಿಂದ ಬಹುತೇಕ ಮುಜರಾಯಿ ದೇವಾಲಯಗಳ ಜಿರ್ಣೋದ್ಧಾರಕ್ಕೆ ಸಾಕಷ್ಟು ಹಣ ಮಂಜೂರು ಮಾಡಿಸಲಾಗಿದೆ. ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ಕೊರತೆ ಇಲ್ಲದಂತೆ ಕೆಲಸಗಳು ನಡೆದಿವೆ. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ನೆರವು ಅಗತ್ಯ ಇದ್ದರೆ ಪಕ್ಷಾತೀತವಾಗಿ ಸಮಿತಿ ರಚಿಸಿಕೊಂಡು ಪ್ರಸ್ತಾವನೆ ಸಲ್ಲಿಸಿದರೆ ಶೀಘ್ರವಾಗಿ ಮಂಜೂರು ಮಾಡಿಸಿಕೊಡಲಾಗುವುದು ಎಂದರು.

ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರೋತ್ಥಾನ ಯೋಜನೆಯಲ್ಲಿ ₹8 ಕೋಟಿ ವೆಚ್ಚದ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದ್ದು, ಸದ್ಯದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಹಿರಿಯ ಜೆಡಿಎಸ್‌ ಮುಖಂಡ ಟಿ.ಎನ್‌.ಪ್ರಭುದೇವ್‌ ಮಾತನಾಡಿ, ದಶಕಗಳ ಬೇಡಿಕೆಯನ್ನು ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಈಡೇರಿಸುವ ಮೂಲಕ ಬ್ರಾಹ್ಮಣ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ₹25 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುವುದು ಸಂಸತದ ಸಂಗತಿಯಾಗಿದೆ ಎಂದರು.

ಯಾವುದೇ ಮೀಸಲಾತಿ, ಸರ್ಕಾರಿ ಸೌಲಭ್ಯಗಳು ಇಲ್ಲದ ಸಮುದಾಯವಾಗಿ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯಕ್ಕೆ ಅಭಿವೃದ್ಧಿ ನಿಗಮದಿಂದ ಸಾಕಷ್ಟು ಉಪಯೋಗವಾಗಲಿದೆ. ಸರ್ಕಾರ ಹೆಚ್ಚಿನ ಅನುದಾನವನ್ನು ಮುಂದಿನ ದಿನಗಳಲ್ಲಿ ನಿಗಮಕ್ಕೆ ಬಿಡುಗಡೆ ಮಾಡಬೇಕಿದೆ ಎಂದರು.

ಬ್ರಾಹ್ಮಣ ಸಮುದಾಯ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಮೂಲಕ ಸ್ವಂತ ಶಕ್ತಿಯ ಮೇಲೆ ಉದ್ಯೋಗಗಳನ್ನು ಪಡೆದುಕೊಳ್ಳುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಇದಕ್ಕೆ ಅಗತ್ಯ ಇರುವ ನೆರವನ್ನು ಸಮುದಾಯದ ಮುಖಂಡರು ಹಾಗೂ ಸಂಘದ ವತಿಯಿಂದ ಕಲ್ಪಿಸುವ ಕಡೆಗೆ ಆದ್ಯತೆ ನೀಡಬೇಕು ಎಂದರು.

ಅರ್ಚಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ. ಸುರೇಶ್‌ಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಇರುವ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಅರ್ಚಕರ ಮಕ್ಕಳು ನೇಮಕವಾಗಲು ಅನುಕೂಲವಾಗುವಂತೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಅರ್ಚಕರ ವಸತಿ ಯೋಜನೆಯಲ್ಲಿ ಪ್ರತಿ ವರ್ಷವು ಐದರಿಂದ ಹತ್ತು ಜನರಿಗೆ ಆರ್ಥಿಕ ನೆರವನ್ನು ಸರ್ಕಾರದ ವತಿಯಿಂದ ದೊರಕಿಸಿಕೊಡಲಾಗುತ್ತಿದೆ. ನಗರದಲ್ಲಿ ಸಂಘದ ಕಚೇರಿ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ. ಶಶಿಧರ್‌, ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ, ವಾಣಿಜ್ಯೋದ್ಯಮಿ ಜಿ.ಎಸ್‌. ಉಮಾಶಂಕರ್‌, ಸಂಘದ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಪ್ರಶಾಂತ್‌, ಸಹ ಕಾರ್ಯದರ್ಶಿ ಕಡಬಗೆರೆ ಶ್ರೀನಿವಾಸ್‌, ರಾಮತೀರ್ಥನ್‌, ಎ.ವಾಸುದೇವ್‌, ಸಂಘದ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಶ್ರೀನಿವಾಸ್‌ ರಾಘವನ್‌, ಉಪಾಧ್ಯಕ್ಷ ಶೇಷಾಚಾರ್‌, ನರಸಿಂಹ ಭಟ್‌, ಟಿ.ಎಸ್‌. ಸೋಮಶೇಖರ ಆರಾಧ್ಯ, ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಗೋಪಿನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT